ಕರ್ನಾಟಕದಲ್ಲಿ ಬಿಸಿಗಾಳಿ ಹೆಚ್ಚಳ: ಆರೋಗ್ಯ ಇಲಾಖೆ ಮಾರ್ಗಸೂಚಿ, ಹೆಚ್ಚು ನೀರು ಕುಡಿಯುವಂತೆ ಸಲಹೆ
ಬೇಸಿಗೆಯ ತೀವ್ರ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಹೆಚ್ಚು ನೀರು ಕುಡಿಯುವುದು, ತಿಳಿ ಬಣ್ಣದ ಬಟ್ಟೆ ಧರಿಸುವುದು, ಬಿಸಿಲಿನಿಂದ ರಕ್ಷಣೆ ಪಡೆಯುವುದು ಮುಂತಾದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಸಲಹೆ ನೀಡಲಾಗಿದೆ. ORS, ನಿಂಬೆ ಜ್ಯೂಸ್, ಮಜ್ಜಿಗೆ, ನೀರಿನಂಶ ಹೊಂದಿರುವ ಹಣ್ಣು ಮತ್ತು ತರಕಾರಿಗಳ ಸೇವಿಸುವಂತೆ ಸಲಹೆ ನೀಡಲಾಗಿದೆ.

ಬೆಂಗಳೂರು, ಮಾರ್ಚ್ 02: ಈ ಭಾರಿ ಕರ್ನಾಟಕದಲ್ಲಿ ಫೆಬ್ರವರಿಯಲ್ಲೇ ವಿಪರೀತ ಬಿಸಿಲು (Summer Heat) ಆರಂಭವಾಗಿದೆ. ಬಿಸಿಲಿನ ಪ್ರಭಾವ ಕಂಡು ಜನರು ಹೈರಾಣಾಗಿದ್ದಾರೆ. ಚಳಿಗಾಲದಲ್ಲೇ ಇಷ್ಟರ ಮಟ್ಟಿಗೆ ಬಿಸಿಲಿದ್ದು, ಬೇಸಿಗೆಯಲ್ಲಿ ಗರಿಷ್ಟ ಉಷ್ಣಾಂಶ ಎಷ್ಟು ಇರಲಿದೆ ಎಂದು ಇತ್ತೀಚೆಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇದೀಗ ರಾಜ್ಯದಲ್ಲಿ ಬೇಸಿಗೆಯ ಸೆಕೆ ಜೊತೆಗೆ ಬಿಸಿಗಾಳಿ ಹೆಚ್ಚಳ ಹಿನ್ನೆಲೆ ಕೆಲ ಮುನ್ನೆಚ್ಚರಿಕೆ ಕ್ರಮ ಪಾಲಿಸುವಂತೆ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಮಾರ್ಗಸೂಚಿ ನೀಡಿದೆ.
ಹೆಚ್ಚು ನೀರು ಕುಡಿಯುವಂತೆ ಆರೋಗ್ಯ ಇಲಾಖೆ ಸಲಹೆ
ರಾಜ್ಯದಲ್ಲಿ ಬೇಸಿಗೆಯ ಸೆಕೆ ಜೊತೆಗೆ ಬಿಸಿಗಾಳಿ ಹೆಚ್ಚಳವಾಗುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಹೆಚ್ಚು ನೀರು ಕುಡಿಯುವಂತೆ, ಬಾಯಾರಿಕೆ ಇಲ್ಲದಿದ್ದರೂ ಹೆಚ್ಚು ನೀರನ್ನು ಆಗಾಗ ಸೇವಿಸಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಇದನ್ನೂ ಓದಿ: ಈ ಬಾರಿ ಉತ್ತರ ಕರ್ನಾಟಕದಲ್ಲಿ ರಣಭೀಕರ ಬೇಸಿಗೆ ಬಿಸಿಲು: ಉಷ್ಣ ಅಲೆ ಎಚ್ಚರಿಕೆ
ಬಾಯಾರಿಕೆಯು ನಿರ್ಜಲೀಕರಣದ ಲಕ್ಷಣವಾಗಿದೆ. ಪ್ರಯಾಣ ಸಮಯದಲ್ಲೂ ಕುಡಿಯುವ ನೀರು ಜೊತೆಗೆ ಇರಬೇಕು. ಮೌಖಿಕ ಮನರ್ಜಲೀಕರಣ ದ್ರಾವಣ (ORS), ಮನೆಯಲ್ಲಿಯೇ ಸಿದ್ಧಪಡಿಸಿದ ನಿಂಬೆ ಹಣ್ಣಿನ ಜ್ಯೂಸ್, ಮಜ್ಜಿಗೆ, ಹಣ್ಣಿನ ಜ್ಯೂಸ್‌ಗಳನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಸೇವಿಸಬಹುದಾಗಿದೆ.
ಋತುಮಾನದಲ್ಲಿ ಲಭ್ಯವಿರುವ, ಹೆಚ್ಚು ನೀರಿನಂಶ ಹೊಂದಿರುವ ಹಣ್ಣು, ತರಕಾರಿಗಳಾದ ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಅನಾನಸ್, ಸೌತೆಕಾಯಿ, ಲೆಟ್ಯೂಸ್, ಎಳನೀರು ಹೆಚ್ಚಾಗಿ ಸೇವಿಸಿ. ಹೆಚ್ಚು ಬಿಸಿಲು ಬೀಳದಂತೆ ಶರೀರವನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು. ಹಾಗಾಗಿ ತಿಳಿ ಬಣ್ಣದ, ಸಡಿಲವಾದ ಹತ್ತಿಯ ಬಟ್ಟೆಯನ್ನು ಧರಿಸುವುದು ಉತ್ತಮ.
ಇದನ್ನೂ ಓದಿ: ಕರಾವಳಿ ಜಿಲ್ಲೆಗಳಲ್ಲಿ ಉಷ್ಣ ಅಲೆ: ಏನೇನು ಮುನ್ನೆಚ್ಚರಿಕೆ ವಹಿಸಬೇಕು? ನೀವು ಮಾಡಬೇಕಾದ್ದಿಷ್ಟು…
ಬಿಸಿಲಿನಲ್ಲಿ ಹೊರ ಹೋಗುವ ಸಂದರ್ಭಗಳಲ್ಲಿ ಛತ್ರಿ, ಟೋಪಿ/ಹ್ಯಾಟ್, ಟವೆಲ್ ಅಥವಾ ಇನ್ನಾವುದೇ ಸಾಂಪ್ರದಾಯಿಕ ಪದ್ಧತಿಯನ್ನು ಅನುಸರಿಸಿ. ಬಿಸಿಲಿನಲ್ಲಿ ನಡೆಯುವ ಸಂದರ್ಭದಲ್ಲಿ ಪಾದರಕ್ಷೆ, ಶೂಗಳನ್ನು ಧರಿಸುವಂತೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.