ಬೆಂಗಳೂರು, ಡಿಸೆಂಬರ್ 13: ಏಳು ವರ್ಷಗಳಿಂದ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿರಲಿಲ್ಲವೆಂದು ಆ ಬಗ್ಗೆ ಪರಾಮರ್ಶೆ ನಡೆಸಲು ಬಿಎಂಆರ್ಸಿಎಲ್ ಸಮಿತಿ ರಚನೆ ಮಾಡಿತ್ತು. ಮೆಟ್ರೋ ಟಿಕೆಟ್ ದರ ಹೆಚ್ಚಳ ವಿಚಾರವಾಗಿ ಅಕ್ಟೋಬರ್ 28ರ ವರೆಗೆ ಪ್ರಯಾಣಿಕರ ಅಭಿಪ್ರಾಯ ತಿಳಿಸಲು ಅವಕಾಶ ನೀಡಲಾಗಿತ್ತು. ಪ್ರಯಾಣಿಕರ ಅಭಿಪ್ರಾಯವನ್ನು ಸಂಗ್ರಹಿಸಿರುವ ಸಮಿತಿ, ಆ ವರದಿಯನ್ನು ಈ ತಿಂಗಳ 3 ನೇ ವಾರದಲ್ಲಿ ಬಿಎಂಆರ್ಸಿಎಲ್ಗೆ ಸಲ್ಲಿಸಲಿದೆ. ವರದಿಯನ್ನು ಡಿಸೆಂಬರ್ ಕೊನೆಯ ವಾರದಲ್ಲಿ ಬಿಎಂಆರ್ಸಿಎಲ್ ಸರ್ಕಾರಕ್ಕೆ ಸಲ್ಲಿಸಲಿದೆ.
ಮೆಟ್ರೋ ಟಿಕೆಟ್ ದರ ಶೇ 15 ರಷ್ಟು ಹೆಚ್ಚಳಕ್ಕೆ ನಮ್ಮ ಮೆಟ್ರೋ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ. ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದೇ ಆದಲ್ಲಿ ಜನವರಿಯಿಂದ ದರ ಹೆಚ್ಚಾಗುವ ಸಾಧ್ಯತೆಗಳಿವೆ. ಈ ಬಗ್ಗೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ಮೆಟ್ರೋದಲ್ಲಿ ಕನಿಷ್ಠ 10 ರೂ. ಗರಿಷ್ಠ 60 ರೂ. ಪ್ರಯಾಣ ದರ ನಿಗದಿ ಮಾಡಲಾಗಿದೆ. ಕಾರ್ಯಾಚರಣೆ ವೆಚ್ಚ ಅಧಿಕವಾದ ಕಾರಣದಿಂದ ಪ್ರಯಾಣ ದರ ಹೆಚ್ಚಳಕ್ಕೆ ಪ್ರಸ್ತಾಪ ಮಾಡಲಾಗಿದೆ. ಅಕ್ಟೋಬರ್-3 ರಿಂದ ಅ 28 ರವರೆಗೆ ಬಿಎಂಆರ್ಸಿಎಲ್ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಮಾಡಿದೆ.
ಸಾರ್ವಜನಿಕ ಅಭಿಪ್ರಾಯ ಅವಧಿಯಲ್ಲಿ ಬಹುತೇಕರು ದರ ಹೆಚ್ಚಳಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ. ಜನರ ಆಕ್ಷೇಪದ ನಡುವೆಯೂ ಟಿಕೆಟ್ ದರ ಹೆಚ್ಚಳಕ್ಕೆ ಸಮಿತಿ ಅಸ್ತು ಎಂದಿದೆ. ಹೀಗಾಗಿ ಶೇ 15 ರಷ್ಟು ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಸಾಧ್ಯತೆ ಇದೆ.
ಮೆಟ್ರೋ ಟಿಕೆಟ್ ದರ ಪರಿಷ್ಕರಣೆಯಾದರೆ ಕನಿಷ್ಠ ದರ 15 ರೂ. ಗರಿಷ್ಠ ದರ 75 ರೂ. ನಿಗದಿ ಮಾಡುವ ಸಾಧ್ಯತೆ ಇದೆ. ಮುಂದಿನ ತಿಂಗಳ ಆರಂಭದಲ್ಲಿ ನೇರಳೆ ಹಾಗೂ ಹಸಿರು ಮಾರ್ಗದ ಮೆಟ್ರೋ ಪ್ರಯಾಣ ದುಬಾರಿಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಬಿಎಂಟಿಸಿ ಆರ್ಥಿಕ ಕುಸಿತಕ್ಕೆ ಕಾರಣ ಬಹಿರಂಗ: ಸಿಎಜಿ ವರದಿಯಿಂದ ಬಯಲಾಯ್ತು ಸ್ಫೋಟಕ ಅಂಶ
ಈ ಬಗ್ಗೆ ಬಿಎಂಆರ್ಸಿಎಲ್ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್ ಪ್ರತಿಕ್ರಿಯಿಸಿದ್ದು, ದರ ಹೆಚ್ಚಳ ಸಮಿತಿ ಇನ್ನೂ ವರದಿ ಸಲ್ಲಿಸಿಲ್ಲ. ವರದಿ ಸಲ್ಲಿಸಿದ ನಂತರ ನಾವು ಆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ