ನಮ್ಮ ಮೆಟ್ರೋ ಯೆಲ್ಲೋ ಲೈನ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ಆಗಸ್ಟ್‌ಗೆ ಬರಲಿವೆ ಎಲ್ಲಾ 15 ರೈಲು, ಕಡಿಮೆಯಾಗಲಿದೆ ಕಾಯುವ ಸಮಯ

ಬೆಂಗಳೂರು ನಮ್ಮ ಮೆಟ್ರೋದ ಆರ್.ವಿ. ರಸ್ತೆ - ಬೊಮ್ಮಸಂದ್ರ ನಡುವಿನ ಯೆಲ್ಲೋ ಲೈನ್ ಪ್ರಯಾಣಿಕರಿಗೆ ನಮ್ಮ ಬಿಎಂಆರ್‌ಸಿಎಲ್ ಸಿಹಿ ಸುದ್ದಿ ನೀಡಿದೆ. ಸದ್ಯ ಈ ಮಾರ್ಗದಲ್ಲಿ 10 ರೈಲುಗಳು ಮಾತ್ರ ಕಾರ್ಯಾಚರಣೆ ನಡೆಸುತ್ತಿದ್ದು, ಮುಂಬರುವ ಆಗಸ್ಟ್ ವೇಳೆಗೆ ಎಲ್ಲಾ 15 ಚಾಲಕರಹಿತ ಮೆಟ್ರೋ ರೈಲುಗಳು ಲಭ್ಯವಾಗಲಿವೆ.

ನಮ್ಮ ಮೆಟ್ರೋ ಯೆಲ್ಲೋ ಲೈನ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ಆಗಸ್ಟ್‌ಗೆ ಬರಲಿವೆ ಎಲ್ಲಾ 15 ರೈಲು, ಕಡಿಮೆಯಾಗಲಿದೆ ಕಾಯುವ ಸಮಯ
ನಮ್ಮ ಮೆಟ್ರೋ ಯೆಲ್ಲೋ ಲೈನ್ ರೈಲು
Image Credit source: PTI
Edited By:

Updated on: Jun 23, 2026 | 6:55 AM

ಬೆಂಗಳೂರು, ಜೂನ್ 23: ಬೆಂಗಳೂರಿನ ಆರ್.ವಿ. ರಸ್ತೆ ಮತ್ತು ಬೊಮ್ಮಸಂದ್ರ ನಡುವೆ ಸಂಚರಿಸುವ ನಮ್ಮ ಮೆಟ್ರೋ ಯೆಲ್ಲೋ ಲೈನ್ (Yellow Line) ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಶುಭ ಸುದ್ದಿ ನೀಡಿದೆ. ಈ ಮಾರ್ಗ ಉದ್ಘಾಟನೆಯಾದ ಆರಂಭದಲ್ಲಿ ಕೇವಲ 3 ರೈಲುಗಳಿದ್ದ ಕಾರಣ ಪ್ರತಿ ಮೆಟ್ರೋಗೆ ಪ್ರಯಾಣಿಕರು 25 ನಿಮಿಷ ಕಾಯಬೇಕಾಗಿತ್ತು. ಆದರೆ, ಸದ್ಯ ನಿಗಮದ ಬಳಿ 13 ರೈಲುಗಳಿದ್ದು, ಅದರಲ್ಲಿ 10 ರೈಲುಗಳು ಹಳಿಗೆ ಇಳಿದಿವೆ. ಇದರಿಂದಾಗಿ ಸದ್ಯ ಪೀಕ್ ಅವರ್‌ನಲ್ಲಿ 8 ನಿಮಿಷಕ್ಕೆ ಹಾಗೂ ನಾನ್ ಪೀಕ್ ಅವರ್‌ನಲ್ಲಿ 10 ನಿಮಿಷಕ್ಕೊಂದರಂತೆ ಮೆಟ್ರೋ ಸಂಚರಿಸುತ್ತಿದ್ದು, ಮುಂಬರುವ ಆಗಸ್ಟ್ ವೇಳೆಗೆ ಇಡೀ ಮಾರ್ಗದ ಎಲ್ಲಾ 15 ರೈಲುಗಳೂ ಲಭ್ಯವಾಗಲಿವೆ.

ಮುಖ್ಯಾಂಶಗಳು

  • ಆಗಸ್ಟ್‌ ವೇಳೆಗೆ ಬರಲಿವೆ ಎಲ್ಲಾ 15 ರೈಲುಗಳು.
  • ಈ ವಾರದಿಂದ 11ನೇ ರೈಲಿನ ಟೆಸ್ಟಿಂಗ್‌ ಶುರು.
  • ಕೋಲ್ಕತ್ತಾದಿಂದ ಬೆಂಗಳೂರಿಗೆ ಬರಲಿವೆ ಹೊಸ ಕೋಚ್‌ಗಳು.

ಸರಣಿ ಟೆಸ್ಟಿಂಗ್ ಮತ್ತು ಹೊಸ ರೈಲುಗಳ ಆಗಮನ

ಯೆಲ್ಲೋ ಲೈನ್‌ನಲ್ಲಿ ಸದ್ಯದಲ್ಲೇ ಮೆಟ್ರೋ ಸಂಚಾರದ ವೇಗ ಹೆಚ್ಚಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ. ಈ ವಾರದಿಂದಲೇ 11ನೇ ರೈಲಿನ ಟೆಸ್ಟಿಂಗ್ (ಪ್ರಯೋಗಾರ್ಥ ಸಂಚಾರ) ನಡೆಯಲಿದ್ದು, ಇದೇ ತಿಂಗಳ ಕೊನೆಯಲ್ಲಿ 12 ಮತ್ತು 13ನೇ ರೈಲುಗಳ ಟೆಸ್ಟಿಂಗ್ ಕೂಡ ಆರಂಭವಾಗಲಿದೆ. ಜೂನ್ ಕೊನೆಯ ವೇಳೆಗೆ 14ನೇ ರೈಲು ಹಾಗೂ ಜುಲೈ ತಿಂಗಳಿನಲ್ಲಿ 15ನೇ ರೈಲು ಕೋಲ್ಕತ್ತಾದ ಟಿಟಾಗಢ್‌ನಿಂದ ಬೆಂಗಳೂರಿಗೆ ಶಿಫ್ಟ್ ಆಗಲಿವೆ.

ಇದನ್ನೂ ಓದಿ: ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಬಂತು 13ನೇ ರೈಲು: ಶೀಘ್ರದಲ್ಲೇ 5 ನಿಮಿಷಕ್ಕೊದರಂತೆ ಮೆಟ್ರೋ ಸಂಚಾರ ಶುರು

ಪರ್ಪಲ್ ಮತ್ತು ಗ್ರೀನ್ ಲೈನ್‌ಗಳಲ್ಲಿ ಸದ್ಯ 3 ರಿಂದ 5 ನಿಮಿಷಕ್ಕೊಂದರಂತೆ ಮೆಟ್ರೋ ರೈಲುಗಳು ಸಂಚರಿಸುತ್ತಿದ್ದು, ಅದೇ ಮಾದರಿಯನ್ನು ಯೆಲ್ಲೋ ಲೈನ್‌ನಲ್ಲೂ ಜಾರಿಗೆ ತರಬೇಕು ಎಂಬುದು ನಾಗರಿಕರ ಒತ್ತಾಸೆಯಾಗಿದೆ. ಆಗಸ್ಟ್‌ನಿಂದ ಹೆಚ್ಚುವರಿ ರೈಲುಗಳು ಪೂರ್ಣ ಪ್ರಮಾಣದಲ್ಲಿ ರಸ್ತೆಗಿಳಿದರೆ ಪ್ರಯಾಣಿಕರ ಈ ಬೇಡಿಕೆ ಬಹುತೇಕ ಈಡೇರಲಿದ್ದು, ಕಾಯುವ ಸಮಯ ಗಣನೀಯವಾಗಿ ತಗ್ಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us