ಬೆಂಗಳೂರು ನಮ್ಮ ಮೆಟ್ರೋ ಹಳದಿ ಲೈನ್: ಮಹತ್ವದ ಅಪ್ಡೇಟ್ ನೀಡಿದ ಬಿಎಂಆರ್‌ಸಿಎಲ್
ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಈ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಅಧಿಕೃತ ಪ್ರಕಟಣೆಯ ಮೂಲಕ ಮಾಹಿತಿ ನೀಡಿದೆ. ಯಾವಾಗ ಮೆಟ್ರೋ ಸಂಚಾರ ಶುರುವಾಗಲಿದೆ? ಎಷ್ಟು ನಿಮಿಷಕ್ಕೊಮ್ಮೆ ಮೆಟ್ರೋ ರೈಲುಗಳು ಸಂಚರಿಸಲಿವೆ ಇತ್ಯಾದಿ ಮಾಹಿತಿ ಇಲ್ಲಿದೆ
ಬೆಂಗಳೂರು, ಅಕ್ಟೋಬರ್ 6: ನಮ್ಮ ಮೆಟ್ರೋ ಹಳದಿ ಲೈನ್ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮಹತ್ವದ ಅಪ್ಡೇಟ್ ನೀಡಿದೆ. ಯೆಲ್ಲೋ ಲೈನ್ ಮಾರ್ಗದಲ್ಲಿ ಆರ್‌ವಿ ರಸ್ತೆಯಿಂದ ಎಲೆಕ್ಟ್ರಾನಿಕ್ಸ್ ಸಿಟಿ ಮೂಲಕ ಬೊಮ್ಮಸಂದ್ರದವರೆಗೆ 2025 ರ ಜನವರಿಯಿಂದ ಮೆಟ್ರೋ ಸಂಚಾರ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಪ್ರತಿ 30 ನಿಮಿಷಕ್ಕೆ ಒಂದು ರೈಲು ಸಂಚರಿಸಲಿದೆ.
ಈ ವರ್ಷ ಡಿಸೆಂಬರ್ನಲ್ಲಿ ರೈಲು ಸುರಕ್ಷತಾ ಆಯುಕ್ತರಿಂದ ತಪಾಸಣೆ ನಡೆಯಲಿದೆ. ಈ ಮಾರ್ಗದ ಸಂಚಾರಕ್ಕಾಗಿ ನವೆಂಬರ್-ಡಿಸೆಂಬರ್ ವೇಳೆಗೆ ಮೂರು ರೈಲುಗಳು ಲಭ್ಯವಿರಲಿವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಸಿಗ್ನಲಿಂಗ್ ವ್ಯವಸ್ಥೆ ಮತ್ತು ರೋಲಿಂಗ್ ಸ್ಟಾಕ್‌ಗೆ ಸಂಬಂಧಿಸಿ ರೈಲ್ವೆ ಮಂಡಳಿಯಿಂದ ತಾಂತ್ರಿಕ ಅನುಮೋದನೆ ದೊರೆತಿದ್ದು, ಮುಂದಿನ ಪ್ರಕ್ರಿಯೆಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ. ಮುಂದಿನ ವರ್ಷ ಮಾರ್ಚ್‌ನಿಂದ ತಿಂಗಳಿಗೆ ಎರಡು ರೈಲುಗಳಂತೆ ಪಶ್ಚಿಮ ಬಂಗಾಳದ ಟಿಟಾಗರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್‌ನಿಂದ ರೈಲುಗಳು ಪೂರೈಕೆಯಾಗಲಿವೆ. ರೀಚ್-5 ಮಾರ್ಗದ ಎಲ್ಲಾ 15 ರೈಲುಗಳು 2025 ರ ಆಗಸ್ಟ್ ವೇಳೆಗೆ ಕಾರ್ಯಾಚರಣೆಗೆ ಸಿದ್ಧವಾಗಿರಲಿವೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ದೇವನಹಳ್ಳಿ ಕಂಟೋನ್ಮೆಂಟ್ ರೈಲು ನಿಲ್ದಾಣ ನವೀಕರಣ ಕಾಮಗಾರಿ ಪರಿಶೀಲಿಸಿದ ಅಶ್ವಿನಿ ವೈಷ್ಣವ್: ಸಚಿವ ವಿ ಸೋಮಣ್ಣ ಸಾಥ್
ಸದ್ಯ ಹಳದಿ ಮಾರ್ಗದಲ್ಲಿ ಚಾಲಕರಹಿತ ಮೆಟ್ರೋ ರೈಲಿನ ಪರೀಕ್ಷಾರ್ಥ ಸಂಚಾರ ನಡೆಯುತ್ತಿದೆ. ಹಳದಿ ಮಾರ್ಗದಲ್ಲಿ ಬೊಮ್ಮಸಂದ್ರದಿಂದ ಆರ್‌ವಿ ರಸ್ತೆ ವರೆಗೆ ಒಟ್ಟು 16 ನಿಲ್ದಾಣಗಳು ಇರಲಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ