AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Rains: ಬೆಂಗಳೂರಿನಲ್ಲಿ ವರುಣ ಅಬ್ಬರ: ನಗರದಲ್ಲಿ 36 ಮಿಮೀ ಮಳೆ ದಾಖಲು, ಜನಜೀವನ ತತ್ತರ

ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಸುರಿದ ಮಳೆಗೆ ಸಿಟಿ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ನಗರದಲ್ಲಿ ಸರಾಸರಿ 36 ಮಿ.ಮೀ. ಮಳೆ ದಾಖಲಾಗಿದೆ. ಸಾಕಷ್ಟು ಅವಾಂತರಗಳು ಸಂಭವಿಸಿವೆ. ಸದ್ಯ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇನ್ನೂ ಮೂರ್ನಾಲ್ಕು ದಿನ ಮಳೆ ಮುನ್ಸೂಚನೆ ನೀಡಿದ್ದು, ಜನ ಜಾಗ್ರತೆಯಿಂದ ಇರಬೇಕಿದೆ.

Bengaluru Rains: ಬೆಂಗಳೂರಿನಲ್ಲಿ ವರುಣ ಅಬ್ಬರ: ನಗರದಲ್ಲಿ 36 ಮಿಮೀ ಮಳೆ ದಾಖಲು, ಜನಜೀವನ ತತ್ತರ
ಬೆಂಗಳೂರಿನಲ್ಲಿ ವರುಣ ಅಬ್ಬರ: ನಗರದಲ್ಲಿ 36 ಮಿಮೀ ಮಳೆ ದಾಖಲು, ಜನಜೀವನ ತತ್ತರ
Shivaprasad B
| Updated By: ಗಂಗಾಧರ​ ಬ. ಸಾಬೋಜಿ|

Updated on: Oct 06, 2024 | 7:28 AM

Share

ಬೆಂಗಳೂರು, ಅಕ್ಟೋಬರ್​​ 06: ಬಂಗಾಳಕೊಲ್ಲಿಯ ಟರ್ಫ್ ಎಫೆಕ್ಟ್​ನಿಂದ ಬೆಂಗಳೂರಿನಲ್ಲಿ ಕಳೆದ ಎರಡ್ಮೂರು ದಿನದಿಂದ ಮಳೆಯಾಗುತ್ತಿದೆ. ಕತ್ತಲಾಗುತ್ತಿದ್ದಂತೆ ಎಂಟ್ರಿಯಾಗುವ ಮಳೆಯ (rain) ಆರ್ಭಟಕ್ಕೆ  ರಾಜಧಾನಿಯಲ್ಲಿ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಸದ್ಯ ನಿನ್ನೆ ರಾತ್ರಿ ಸುರಿದ ಮಳೆಯಿಂದ ನಗರದಲ್ಲಿ ರಸ್ತೆಗಳು ಹೊಳೆಯಂತಾಗಿವೆ. ತಡೆಗೋಡೆ ಕುಸಿದು ಅಪಾರ್ಟ್ಮೆಂಟ್ ಒಳಗೆ ನೀರು ನುಗ್ಗಿದೆ. ನಗರದಲ್ಲಿ ಸರಾಸರಿ 36 ಮಿ.ಮೀ. ಮಳೆ ದಾಖಲಾಗಿದ್ದು, ಜನಜೀವನ ತತ್ತರಿಸಿದೆ.

2 ಸಾವಿರ ನಿವಾಸಿಗಳಿಗೆ ಜಲದಿಗ್ಬಂಧನ: ಟ್ರ್ಯಾಕ್ಟರ್ ಮೂಲಕ ಶಿಫ್ಟ್

ಮಳೆಗೆ ಯಲಹಂಕದ ಕೇಂದ್ರಿಯ ವಿಹಾರ ಅಪಾರ್ಟ್​​​​​ಮೆಂಟ್ ಜಲಾವೃತವಾಗಿದ್ದು, 603 ಫ್ಲಾಟ್​​ಗಳಿದ್ದು, 2ಸಾವಿರ ನಿವಾಸಿಗಳಿಗೆ ಜಲದಿಗ್ಬಂಧನ ಹಾಕಿತ್ತು. ಟ್ರ್ಯಾಕ್ಟರ್ ಮೂಲಕ ನಿವಾಸಿಗಳನ್ನ ಶಿಫ್ಟ್ ಮಾಡಲಾಗಿದೆ. ಯಲಹಂಕದ ಕೇಂದ್ರಿಯ ವಿಹಾರ ಅಪಾರ್ಟ್​​​​​ಮೆಂಟ್​ನಲ್ಲಿ 80 ಕ್ಕೂ ಹೆಚ್ಚು ಕಾರು, ನೂರಕ್ಕೂ ಹೆಚ್ಚು ಬೈಕ್​ಗಳು ನೀರಿನಲ್ಲಿ ಮುಳುಗಿವೆ. ಟ್ರ್ಯಾಕ್ಟರ್, ಬೋಟ್ ಮೂಲಕ ಆಹಾರ, ನೀರನ್ನ ಪೂರೈಸಲಾಗಿದೆ.

ವೃದ್ಧಾಶ್ರಮಕ್ಕೆ ನುಗ್ಗಿದ ನೀರು: ಪರದಾಟ

ಮಹಾಮಳೆಯಿಂದ ಬಸವೇಶ್ವರನಗರದಲ್ಲಿರುವ ವೃದ್ಧಾಶ್ರಮಕ್ಕೆ ನೀರು ನುಗ್ಗಿತ್ತು. ಇದರಿಂದ 15ಕ್ಕೂ ಅಧಿಕ ವೃದ್ಧರು ಪರದಾಡಿದ್ದಾರೆ. ಬಸವೇಶ್ವರ ನಗರದ 8ಬಿ ಮುಖ್ಯರಸ್ತೆ ಹೊಳೆಯಂತಾಗಿತ್ತು. ಹಾಗಾಗಿ ಫ್ಲೈವುಡ್ ಹಾಗೂ ಗ್ಲಾಸ್ ಅಂಗಡಿ ಸಂಪೂರ್ಣ ಜಲಾವೃತವಾಗಿತ್ತು.

ಕುಸಿದ ಕಾಂಪೌಂಡ್ ಗೋಡೆ

ಬಿನ್ನಿಪೇಟೆಯಲ್ಲೂ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ಬಿನ್ನಿ ಇಟಾ ಮಾಲ್ ಹಿಂಭಾಗದ ಕಾಂಪೌಂಡ್ ಗೋಡೆ ಕುಸಿದಿದೆ. ಇದರಿಂದ ವಿದ್ಯುತ್ ಕಂಬ ವಾಲಿದ್ದು, 15 ಮನೆ ನಿವಾಸಿಗಳು ಹೊರಗೆ ಬಾರದ ಸ್ಥಿತಿಯಲ್ಲಿ ಸಿಲುಕಿದರು. ಹತ್ತುಕ್ಕೂ ಹೆಚ್ಚು ಬೈಕ್​​ಗಳು ಜಖಂ ಆಗಿವೆ. ಅದೇ ರೀತಿಯಾಗಿ ಯಲಹಂಕದ ಅಟ್ಟೂರಿನಲ್ಲಿ ಮಳೆ ಅಬ್ಬರಿಸಿದೆ. ಮನೆಗಳಲ್ಲಿನ ಗೃಹೋಪಯೋಗಿ ವಸ್ತುಗಳು ನೀರು ಪಾಲಾಗಿವೆ. ನೀರನ್ನ ಹೊರ ಹಾಕಲು ಕುಟುಂಬದವರು ರಾತ್ರಿಯಿಡಿ ಜಾಗರಣೆ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಮಳೆ: ಧಾರಾಕಾರ ಮಳೆಗೆ ಹಲವು ರಸ್ತೆಗಳು ಜಲಾವೃತ, ವಾಹನಗಳು ಮುಳುಗಡೆ

ಟಿ.ದಾಸರಹಳ್ಳಿಯ ಮಹೇಶ್ವರಿನಗರದಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ದಿನಸಿ, ಬಟ್ಟೆ ನೀರುಪಾಲಾಗಿವೆ. ವರುಣಾರ್ಭಟಕ್ಕೆ ಬೆಂಗಳೂರು-ಹೊಸೂರು ಹೆದ್ದಾರಿ ಕೆರೆಯಂತಾಗಿದೆ. ನೀರಲ್ಲಿ ಸಿಲುಕಿ ಕಾರು ಚಾಲಕ ಪರದಾಡಿದ್ದಾರೆ. ರಸ್ತೆ ಜಲಾವೃತವಾಗಿದ್ರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಮಳೆಗೆ ಸರ್ಜಾಪುರ ಮುಖ್ಯರಸ್ತೆ ಕೆರೆಯಂತಾಗಿದೆ. ರಸ್ತೆಯಲ್ಲಿ ನೀರು ನಿಂತು ಜನ ಪರದಾಡ್ತಿದ್ದಾರೆ. ರೈಲ್ವೆ ಟ್ರ್ಯಾಕ್​ಗೆ ನೀರು ಬರುತ್ತೆ ಅಂತ ರೈಲ್ವೇ ಇಲಾಖೆ ನೀರು ಹರಿಯುವ ಜಾಗ ಮುಚ್ಚಿದ್ದು ಫಜೀತಿ ತಂದಿದೆ.  ರಾಜಾಜಿನಗರದಲ್ಲೂ ಮಳೆ ಧಾರಾಕಾರವಾಗಿ ಸುರಿಯಿತ್ತು. ಮಂಜುನಾಥನಗರದಲ್ಲಿ ಹತ್ತಾರು ಬೈಕ್​ಗಳು ಮುಳುಗಡೆಯಾಗಿದ್ವು. ರಸ್ತೆ ಬದಿ ಅಂಗಡಿಗಳಿಗೂ ಮಳೆ ನೀರು ನುಗ್ಗಿ ನಿವಾಸಿಗಳು ಪರದಾಡಿದ್ದಾರೆ.

ಯಾವ್ಯಾವ ಭಾಗದಲ್ಲಿ ಎಷ್ಟು ಮಳೆ?

  • ಕೊಟ್ಟೆಗೆಪಾಳ್ಯ ; 113 ಮಿ.ಮೀ
  • ಹಂಪಿನಗರ : 108 ಮಿ.ಮೀ
  • ನಾಗಪುರ : 107.5 ಮಿ.ಮೀ
  • ಚೌಡೇಶ್ವರಿ : 79.5 ಮಿ.ಮೀ
  • ಮಾರುತಿಮಂದಿರ : 75.5 ಮಿ.ಮೀ
  • ನಂದಿನಿ ಲೇಔಟ್ : 71.5 ಮಿ.ಮೀ
  • ರಾಜಾಜಿನಗರ : 59 ಮಿ.ಮೀ
  • ನಾಯಂಡಹಳ್ಳಿ : 46 ಮಿ.ಮೀ
  • HAL ಏರ್ಪೋರ್ಟ್ : 45 ಮಿ.ಮೀ
  • ವಿದ್ಯಾರಣ್ಯಪುರ : 45 ಮಿ.ಮೀ
  • ಪುಟ್ಟೇನಹಳ್ಳಿ : 42.5 ಮಿ.ಮೀ
  • RR ನಗರ : 42.5 ಮಿ.ಮೀ
  • ರಾಜಮಹಲ್ ಗುಟ್ಟಹಳ್ಳಿ : 42.5 ಮಿ.ಮೀ
  • ಸೇರಿದಂತೆ ಸರಾಸರಿ 36 ಮಿ.ಮೀ ಮಳೆ ದಾಖಲು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.