
ನೆಲಮಂಗಲ, ನ.1: ಮೈಕ್ರೋ ಫೈನಾನ್ಸ್ ಕಂಪನಿಯ ರಿಕವರಿ ಏಜೆಂಟ್‌ಗಳು ಮಾಡಿದ ಭೀಕರ ಎಡವಟ್ಟಿನಿಂದಾಗಿ ಅಮಾಯಕ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ನೆಲಮಂಗಲದಲ್ಲಿ ಜರುಗಿದೆ. ಬೈಕ್ ಸೀಜ್ ಮಾಡುವ ಭರದಲ್ಲಿ ತೆರಳುತ್ತಿದ್ದ ವ್ಯಕ್ತಿಯ ಬೈಕ್‌ಗೆ ಕಾಲಿನಿಂದ ಒದ್ದು ಕೆಳಗೆ ಉರುಳಿಸಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿ, ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ನೆಲಮಂಗಲ ತಾಲೂಕಿನ ಟಿ. ಬೇಗೂರಿನ ನಿವಾಸಿ ಮುರುಳಿ (39) ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಮುರುಳಿ ಅವರು ಪಡೆದಿದ್ದ ಬೈಕ್ ಲೋನ್ ಕಂತು ಪಾವತಿಸಿಲ್ಲ ಎಂದು ಎಲ್ ಅಂಡ್ ಟಿ ಮೈಕ್ರೋ ಫೈನಾನ್ಸ್ ಕಂಪನಿಯ ಏಜೆಂಟರು ಇವರ ಬೆನ್ನು ಬಿದ್ದಿದ್ದರು. ಕಳೆದ ಬುಧವಾರದಂದು ಮುರುಳಿ ನೆಲಮಂಗಲದಿಂದ ತಮ್ಮ ಊರಾದ ಟಿ. ಬೇಗೂರಿಗೆ ತೆರಳುತ್ತಿದ್ದ ವೇಳೆ ಬೂದಿಹಾಳು ಬಳಿ ಮೈಕ್ರೋ ಫೈನಾನ್ಸ್ ಕಂಪನಿಯ ಮೂವರು ಏಜೆಂಟರು ಬೈಕ್ ಅಡ್ಡಹಾಕಿದ್ದಾರೆ. “ಮುಂದೆ ನಿಲ್ಲಿಸುತ್ತೇನೆ” ಎಂದು ಹೇಳಿ ಮುರುಳಿ ಮುಂದೆ ತೆರಳುತ್ತಿದ್ದಾಗ, ಅವರನ್ನು ಹಿಡಿಯಲು ಬೆನ್ನಟ್ಟಿದ ಏಜೆಂಟರು ಚಲಿಸುತ್ತಿದ್ದ ಬೈಕ್‌ಗೆ ಕಾಲಿನಿಂದ ಬಲವಾಗಿ ಒದ್ದಿದ್ದಾರೆ. ಏಜೆಂಟರ ಒದ್ದ ರಭಸಕ್ಕೆ ಮುರುಳಿ ಬೈಕ್ ಸಮೇತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.
ಘಟನೆ ನಡೆದ ತಕ್ಷಣ ಮುರುಳಿ ಅವರ ಪತ್ನಿ ಲಲಿತಾ ಅವರು ಗಾಯಾಳುವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಮುರುಳಿ ಅವರು ಈಗಾಗಲೇ ಎರಡೂ ಕಿಡ್ನಿಗಳನ್ನು ಕಳೆದುಕೊಂಡು ನಿರಂತರ ಡಯಾಲಿಸಿಸ್ ಪಡೆಯುತ್ತಿದ್ದರು. ಅನಾರೋಗ್ಯದ ಕಾರಣದಿಂದ ಓಡಾಡುವುದಕ್ಕೂ ಕಷ್ಟಪಡುತ್ತಿದ್ದ ಮುರುಳಿ ಅವರಿಗೆ ಅಪಘಾತದಿಂದ ಉಂಟಾದ ಗಾಯಗಳು ತೀವ್ರವಾಗಿ ಶಮನವಾಗದೆ, ವೈದ್ಯರು ಎಷ್ಟೇ ಚಿಕಿತ್ಸೆ ನೀಡಿದರೂ ದೇಹ ಸ್ಪಂದಿಸಲಿಲ್ಲ. ಪರಿಣಾಮ ನಿನ್ನೆ ತಡರಾತ್ರಿ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸದ್ಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. “ಮೈಕ್ರೋ ಫೈನಾನ್ಸ್ ಏಜೆಂಟರ ಅಟ್ಟಹಾಸವೇ ನನ್ನ ಗಂಡನ ಸಾವಿಗೆ ನೇರ ಕಾರಣ,” ಎಂದು ಮೃತ ಮುರುಳಿ ಪತ್ನಿ ಲಲಿತಾ ಹಾಗೂ ಸಂಬಂಧಿಕರು ಕಣ್ಣೀರಿಡುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ರಾಗಿಮುದ್ದೆ-ನಾಟಿಕೋಳಿ ಸಾರಿನ ಮಹಾಯುದ್ಧ: 14 ಮುದ್ದೆ ನುಂಗಿ ಟಗರು ಬಾಚಿಕೊಂಡ ಶಂಭುಗೌಡ
ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುರುಳಿ ಅವರ ಸಾವಿಗೆ ಎಲ್ ಅಂಡ್ ಟಿ ಮೈಕ್ರೋ ಫೈನಾನ್ಸ್ ಕಂಪನಿಯ ಏಜೆಂಟರೇ ನೇರ ಹೊಣೆಯಾಗಿದ್ದು, ಕೃತ್ಯ ಎಸಗಿ ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ