ಸಿಬ್ಬಂದಿ ಕೆಲಸದ ಮೇಲೆ ನಿಗಾ ಇಡಲು ಆಗ್ನೇಯ ವಿಭಾಗದ ಡಿಸಿಪಿಯಿಂದ ಹೊಸ ಪ್ರಯತ್ನ
ಬೆಂಗಳೂರು ನಗರದ ಆಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬಾ ಅವರು ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಹೊಸ ತಂತ್ರವನ್ನು ಅಳವಡಿಸಿದ್ದಾರೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪೊಲೀಸರು ನಮ್ಮ ಜೊತೆ ಯಾವ ರೀತಿಯಾಗಿ ಪ್ರತಿಕ್ರಿಯಿಸಿದರು ಎನ್ನುವುದರ ಮಾಹಿತಿ ಸಂಗ್ರಹ ಮಾಡುತ್ತದೆ.
ಬೆಂಗಳೂರು: ಆಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬಾ(DCP c.k Baba) ಅವರು ವಿಭಿನ್ನ ಪ್ರಯತ್ನವನ್ನು ಮಾಡಿದ್ದಾರೆ. ಆಗ್ನೇಯ ವಿಭಾಗದ ಪ್ರತಿ ಪೊಲೀಸ್ ಠಾಣೆಯಲ್ಲಿ ಕ್ಯೂ ಆರ್ ಕೋಡ್ ಬ್ಯಾನರ್ ಅಳವಡಿಕೆ ಮಾಡಿ ಠಾಣೆಗೆ ಬರುವ ದೂರುದಾರರು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಮಾಹಿತಿ ಹಂಚಿಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ. ಸಾರ್ವಜನಿಕರು ಪೊಲೀಸ್ ಠಾಣೆಗೆ ಹೋದಾಗ ಸಮಸ್ಯೆ ಪರಿಹಾರ ಆಯಿತಾ, ಪೊಲೀಸರು ದೂರು ದಾಖಲು ಮಾಡಿಕೊಂಡರಾ ಅಥವಾ ದೂರು ದಾಖಲಿಸುವುದಕ್ಕೆ ಲಂಚ ಕೇಳಿದ್ದಾರಾ, ಒಂದು ವೇಳೆ ಲಂಚ ಕೇಳಿದರೆ ಆ ಅಧಿಕಾರಿ ಯಾರು ಹೀಗೆ ಹಲವು ಪ್ರಶ್ನೆಗಳ ಒಳಗೊಂಡಂತ ಕ್ಯೂ ಆರ್ ಕೋಡ್ ಆಧಾರಿತ ಸ್ಕ್ಯಾನರ್ ಅಳವಡಿಕೆ ಮಾಡಲಾಗಿದ್ದು, ಈ ಅಪ್ಲಿಕೇಷನ್ ಮುಖಾಂತರ ನೀವು ನೇರವಾಗಿ ಡಿಸಿಪಿ ಸಿಕೆ ಬಾಬ ಅವರಿಗೆ ದೂರು ನೀಡಬಹುದು.
ಇನ್ನು ಇಂತಹ ನೂತನ ಪ್ರಯೋಗಕ್ಕೆ ಮುಂದಾಗಿರುವ ಆಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬಾ ಅವರು ಖುದ್ದಾಗಿ ತಾವೇ ಇದನ್ನು ಪ್ರತಿನಿತ್ಯ ಮಾನಿಟರ್ ಸಹ ಮಾಡುತ್ತಾರೆ. ಯಾವುದೇ ಸಮಸ್ಯೆಗಳು ಇದ್ದರೆ ಸಂಬಂಧ ಪಟ್ಟ ಅಧಿಕಾರಿಗಳನ್ನು ಕರೆದು ಸೂಚನೆ ನೀಡುತ್ತಾರೆ. ಪೊಲೀಸರ ಕರ್ತವ್ಯ ಲೋಪ ಮಾಡಿದರೆ ಶಿಸ್ತು ಕ್ರಮವನ್ನು ಕೈಗೊಳ್ಳಲಿರುವ ಡಿಸಿಪಿ. ಕೇವಲ ಪೊಲೀಸರ ಕೆಟ್ಟತನ ಅಷ್ಟೇ ಅಲ್ಲ ಒಳ್ಳೆತನದ ಬಗ್ಗೆಯೂ ನೀವು ಮಾಹಿತಿ ಹಂಚಿಕೊಳ್ಳಬಹುದು. ಈ ಮೂಲಕ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಮುಂದಾದ ಡಿಸಿಪಿ ಸಿಕೆ ಬಾಬ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:35 am, Tue, 29 November 22