ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಸದ್ಯಕ್ಕಿಲ್ಲ ಮೆಟ್ರೋ ರೈಲು ಟಿಕೆಟ್ ದರ ಏರಿಕೆ
Bangalore Metro Ticket price: ಬೆಂಗಳೂರಿನ ನಮ್ಮ ಮೆಟ್ರೋ ರೈಲು ಟಿಕೆಟ್ ದರ ಹೆಚ್ಚಿಸಲು ಬಿಎಂಆರ್‌ಸಿಎಲ್ ತೆಗೆದುಕೊಂಡಿದ್ದ ನಿರ್ಧಾರಕ್ಕೆ ಕೇಂದ್ರ ಸರ್ಕಾರ ತಾತ್ಕಾಲಿಕ ತಡೆ ನೀಡಿದೆ. ಶೇ 45ರಷ್ಟು ದರ ಏರಿಕೆಗೆ ಮುಂದಾಗಿದ್ದರೂ, ಆ ಬಗ್ಗೆ ಕೇಂದ್ರ ಸರ್ಕಾರ ವರದಿ ಕೋರಿದ್ದು, ಅನುಮೋದನೆ ನೀಡಿಲ್ಲ. ಈ ವರ್ಷ ದರ ಏರಿಕೆ ಅನುಮಾನ ಎನ್ನಲಾಗಿದೆ.
![ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಸದ್ಯಕ್ಕಿಲ್ಲ ಮೆಟ್ರೋ ರೈಲು ಟಿಕೆಟ್ ದರ ಏರಿಕೆ](https://images.tv9kannada.com/wp-content/uploads/2025/01/namma-metro-9.jpg?w=1280)
ಬೆಂಗಳೂರು, ಜನವರಿ 28: ನಮ್ಮ ಮೆಟ್ರೋ ರೈಲು ಟಿಕೆಟ್ ದರ ಹೆಚ್ಚಳಕ್ಕೆ ಮುಂದಾಗಿದ್ದ ಬಿಎಂಆರ್‌ಸಿಎಲ್ ಇದೀಗ ಆ ವಿಚಾರಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದೆ. ಮೆಟ್ರೋ ಟಿಕೆಟ್ ದರ ಹೆಚ್ಚಳ ಸಂಬಂಧ ಕೇಂದ್ರ ಸರ್ಕಾರ ವರದಿ ಕೇಳಿದ್ದು, ಸದ್ಯದ ಮಟ್ಟಿಗೆ ಅನುಮತಿ ಕೊಟ್ಟಿಲ್ಲ. ಹೀಗಾಗಿ ಮೆಟ್ರೋ ಟಿಕೆಟ್ ದರ ಏರಿಕೆ ಈ ವರ್ಷ ಅನುಮಾನ ಎಂದು ಮೂಲಗಳು ತಿಳಿಸಿವೆ.
ಕಳೆದ ವಾರವಷ್ಟೇ ಟಿಕೆಟ್ ದರ ಏರಿಕೆ ಸಂಬಂಧ ಬಿಎಂಆರ್‌ಸಿಎಲ್ ಸಭೆ ನಡೆಸಿತ್ತು. ಶೇ 45ರಷ್ಟು ದರ ಹೆಚ್ಚಳ ಮಾಡಲು ನಿರ್ಧರಿಸಿತ್ತು. ಆದರೆ, ಇದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿಲ್ಲ ಎನ್ನಲಾಗಿದೆ.
ಕೇಂದ್ರದ ಅಭಿಪ್ರಾಯವೇನು?
ಕರ್ನಾಟಕದಲ್ಲಿ ಈಗಾಗಲೇ ಸರ್ಕಾರಿ ಬಸ್ ಟಿಕೆಟ್ ದರ ಹೆಚ್ಚಳವಾಗಿದೆ. ಈ ಸಂದರ್ಭದಲ್ಲಿ ಮತ್ತೆ ಮೆಟ್ರೋ ಟಿಕೆಟ್ ದರ ಕೂಡ ಹೆಚ್ಚಳವಾದರೆ ಜನರಿಗೆ ಹೆಚ್ಚಿನ ಹೊರೆ ಆಗಲಿದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ. ಅಲ್ಲದೆ, ಪ್ರಯಾಣ ದರ ಏರಿಕೆ ನಿರ್ಧಾರ ಅಂತಿಮಗೊಳಿಸುವುದಕ್ಕೂ ಮುನ್ನ ವರದಿ ಸಲ್ಲಿಸುವಂತೆ ಕೇಂದ್ರ ತಂಡ ಸೂಚನೆ ನೀಡಿದೆ. ಹೀಗಾಗಿ ವರದಿ ಸಲ್ಲಿಕೆಗೆ ಬಿಎಂಆರ್‌ಸಿಎಲ್ ಸಮಯ ಕೇಳಿದೆ.
ಕೇಂದ್ರದಿಂದ ತಾತ್ಕಾಲಿಕ ತಡೆ
ಬಿಎಂಆರ್‌ಸಿಎಲ್ ಫೆಬ್ರವರಿ1 ರಿಂದ ಮೆಟ್ರೋ ಪ್ರಯಾಣ ದರ ಏರಿಕೆಗೆ ಮುಂದಾಗಿತ್ತು. ಅದಕ್ಕಾಗಿ ಪ್ರಯಾಣಿಕರಿಂದ ಅಭಿಪ್ರಾಯಗಳು, ಸಲಹೆಗಳನ್ನೂ ಸ್ವೀಕರಿಸಿತ್ತು. ಪ್ರಯಾಣಿಕರಿಂದ ದರ ಏರಿಕೆಗೆ ವಿರೋಧ ವ್ಯಕ್ತವಾಗಿದ್ದರೂ ನಿರ್ವಹಣೆ ನೆಪವೊಡ್ಡಿ ದರ ಏರಿಕೆ ಬಿಎಂಆರ್‌ಸಿಎಲ್ ಮುಂದಾಗಿತ್ತು. ಇದೀಗ ಬಿಎಂಆರ್‌ಸಿಎಲ್ ನಿರ್ಧಾರಕ್ಕೆ ಕೇಂದ್ರದಿಂದ ತಾತ್ಕಾಲಿಕ ತಡೆಯೊಡ್ಡಲಾಗಿದೆ.
ನಮ್ಮ ಮೆಟ್ರೋ ಈ ಹಿಂದೆ 2017 ರಲ್ಲಿ ಪ್ರಯಾಣ ದರ ಹೆಚ್ಚಳ ಮಾಡಿತ್ತು. ಬಳಿಕ ಪ್ರಯಾಣ ದರ ಪರಿಷ್ಕರಣೆ ಮಾಡುವ ಪ್ರಯತ್ನ ಮಾಡಿರಲಿಲ್ಲ. ಆದರೆ, ಇದೀಗ ಪ್ರಯಾಣ ದರ ಏರಿಕೆಗೆ ಮುಂದಾಗಿದ್ದ ಬಿಎಂಆರ್ಸಿಎಲ್ಗೆ ಹಿನ್ನಡೆಯಾಗಿದೆ.
ಈಗೆಷ್ಟಿದೆ ಮೆಟ್ರೋ ಟಿಕೆಟ್ ದರ?
ಸದ್ಯ ಬೆಂಗಳೂರು ಮೆಟ್ರೋದಲ್ಲಿ ಟಿಕೆಟ್ಗೆ ಕನಿಷ್ಠ ದರ 10 ರೂ. ಹಾಗೂ ಗರಿಷ್ಠ ದರ 60 ರೂ. ಇದೆ. ಕಾರ್ಯಾಚರಣೆ ವೆಚ್ಚ ಅಧಿಕವಾದ ಕಾರಣದಿಂದ ಪ್ರಯಾಣ ದರ ಏರಿಕೆಗೆ ನಿಗಮ ಮುಂದಾಗಿತ್ತು.
ಇದನ್ನೂ ಓದಿ: ನಮ್ಮ ಮೆಟ್ರೋ ನಿಲ್ದಾಣಗಳ ಪಾರ್ಕಿಂಗ್ನಲ್ಲಿ ದುಪ್ಪಟ್ಟು ಹಣ ವಸೂಲಿ, ಎಲ್ಲಿ ಹೆಚ್ಚಾಗಿದೆ ಇಲ್ಲಿದೆ ಮಾಹಿತಿ
ಈ ಮಧ್ಯೆ, ಮೆಟ್ರೋ ಸ್ಟೇಷನ್ಗಳ ಪಾರ್ಕಿಂಗ್ ಪ್ರದೇಶಗಳಲ್ಲಿ ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ಬಗ್ಗೆಯೂ ಆರೋಪಗಳು ಕೇಳಿ ಬಂದಿವೆ. ಬೆಂಗಳೂರಿನ 66 ಮೆಟ್ರೋ ನಿಲ್ದಾಣಗಳ ಪೈಕಿ 33 ನಿಲ್ದಾಣಗಳಲ್ಲಿಪಾರ್ಕಿಂಗ್ ವ್ಯವಸ್ಥೆ ಇದೆ. ಒಟ್ಟಾರೆಯಾಗಿ ಸುಮಾರು 11000 ದ್ವಿಚಕ್ರವಾಹನ ಮತ್ತು 1500ಕ್ಕೂ ಹೆಚ್ಚು ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಬಿಎಂಆರ್‌ಸಿಎಲ್ ಒದಗಿಸುತ್ತಿದೆ.