ಶೈಕ್ಷಣಿಕ ವರ್ಷದ ಅರ್ಧವಾರ್ಷಿಕ ಪರೀಕ್ಷೆ ಮುಗಿದರೂ ಹಲವೆಡೆ ಮಕ್ಕಳಿಗಿಲ್ಲ ಶೂ ಭಾಗ್ಯ!: ಸರ್ಕಾರದ ವಿರುದ್ಧ ಅಶೋಕ್ ವಾಗ್ದಾಳಿ
ಶೈಕ್ಷಣಿಕ ವರ್ಷದ ಅರ್ಧವಾರ್ಷಿಕ ಪರೀಕ್ಷೆ ಮುಗಿದರೂ ಬಡ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಹಾಗೂ ಸ್ವೆಟರ್ ವಿತರಿಸದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ರಾಜಕೀಯ ಪ್ರಚಾರಕ್ಕೆ ತೋರುವ ಉತ್ಸಾಹದ ಒಂದು ಪಾಲನ್ನಾದರೂ ಬಡ ಮಕ್ಕಳ ಭವಿಷ್ಯಕ್ಕೆ ತೋರಿಸಿದ್ದರೆ ಈ ದಯನೀಯ ಸ್ಥಿತಿ ಬರುತ್ತಿರಲಿಲ್ಲ. ಬಡವರ ಹೆಸರಿನಲ್ಲಿ ರಾಜಕೀಯ ಮಾಡುವ ಕಾಂಗ್ರೆಸ್‌ಗೆ ಬಡ ಮಕ್ಕಳ ಸಂಕಷ್ಟ ಮಾತ್ರ ಕಾಣುತ್ತಿಲ್ಲ ಎಂದವರು ಕಿಡಿ ಕಾರಿದ್ದಾರೆ.

ಬೆಂಗಳೂರು, ಅಕ್ಟೋಬರ್ 25: ಶೈಕ್ಷಣಿಕ ವರ್ಷದ ಅರ್ಧವಾರ್ಷಿಕ ಪರೀಕ್ಷೆ ಮುಗಿದರೂ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಪೂರೈಸದ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಡ ಮಕ್ಕಳ ಕಾಲಿಗೆ ಶೂ ಕೊಡಲೂ ಯೋಗ್ಯತೆ ಇಲ್ಲದ ಕಾಂಗ್ರೆಸ್ ಸರ್ಕಾರಕ್ಕೆ ನೂರಾರು ಕೋಟಿ ರೂಪಾಯಿ ಬಜೆಟ್ ಏಕೆ? ಎಂದು ಪ್ರಶ್ನಿಸಿರುವ ಅವರು, ಬೆಂಗಳೂರಿನ ಜಿಬಿಎ ಶಾಲೆಗಳ 22,210 ಬಡ ವಿದ್ಯಾರ್ಥಿಗಳಿಗೆ ಇನ್ನೂ ಶೂ, ಸಾಕ್ಸ್ ನೀಡಿಲ್ಲ. ಎರಡು ವರ್ಷಗಳಿಂದ ಸ್ವೆಟರ್‌ಗಳೂ ಇಲ್ಲ. ಹರಿದ ಶೂಗಳನ್ನೇ ಹಾಕಿಕೊಂಡು ಶಾಲೆಗೆ ಬರುವ ಬಡ ಮಕ್ಕಳ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇಲ್ಲದ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದವರು ವಾಗ್ದಾಳಿ ನಡೆಸಿದ್ದಾರೆ.
‘ರಾಜ್ಯದ ಆಡಳಿತವನ್ನು ಹೇಗೆ ನಿಭಾಯಿಸುತ್ತೀರಿ?’
ಶಾಲಾ ಮಕ್ಕಳ ಮೂಲಭೂತ ಸೌಲಭ್ಯಗಳನ್ನೂ ಸಕಾಲಕ್ಕೆ ಒದಗಿಸಲಾಗದಷ್ಟು ದಿವಾಳಿಯಾಗಿದೆಯೇ ಈ ಕಾಂಗ್ರೆಸ್ ಸರ್ಕಾರ ಎಂದು ಸಿಎಂ ಡಿಕೆ ಶಿವಕುಮಾರ್ ಮತ್ತು ಬೆಂಗಳೂರು ಉಸ್ತುವಾರಿ ಸಚಿವ ಕೃಷ್ಣಭಯರೇಗೌಡರನ್ನು ಪ್ರಶ್ನಿಸಿರುವ ಅಶೋಕ್, ಸ್ವೆಟರ್‌ಗಾಗಿ ಪೋಷಕರ ಖಾತೆಗೆ ಹಣ ಹಾಕುವ ಭರವಸೆಯೂ ಈಡೇರಿಲ್ಲ. ಘೋಷಣೆಗಳು ಮಾತ್ರ ಭರ್ಜರಿ; ಅನುಷ್ಠಾನ ಮಾತ್ರ ಶೂನ್ಯ ಎಂದು ವ್ಯಂಗ್ಯವಾಡಿದ್ದಾರೆ. ಬಡ ಮಕ್ಕಳ ಶಿಕ್ಷಣ ಮತ್ತು ಘನತೆಯನ್ನು ಕಾಪಾಡಬೇಕಾದ ಸರ್ಕಾರ, ಅವರ ಕನಿಷ್ಠ ಅಗತ್ಯಗಳನ್ನೂ ನಿರ್ಲಕ್ಷಿಸಿದೆ. ಮಕ್ಕಳಿಗೆ ಶೂ, ಸಾಕ್ಸ್, ಸ್ವೆಟರ್ ಒದಗಿಸಲೂ ಆಗದವರು ರಾಜ್ಯದ ಆಡಳಿತವನ್ನು ಹೇಗೆ ನಿಭಾಯಿಸುತ್ತೀರಿ? ಎಂದವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿಯಲ್ಲಿ ಅಚ್ಚರಿಯ ಬೆಳವಣಿಗೆಗಳು: ಉಚ್ಛಾಟಿತರ ಮರು ಸೇರ್ಪಡೆಗೆ ತೆರೆಮರೆಯ ಕಸರತ್ತು! ಸಿಕ್ತು ಸುಳಿವು
‘ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ನಿಲ್ಲಿಸಿ’
ತಮ್ಮ ರಾಜಕೀಯ ಪ್ರಚಾರಕ್ಕೆ ತೋರುವ ಉತ್ಸಾಹದ ಒಂದು ಪಾಲನ್ನಾದರೂ ಬಡ ಮಕ್ಕಳ ಭವಿಷ್ಯಕ್ಕೆ ತೋರಿಸಿದ್ದರೆ ಈ ದಯನೀಯ ಸ್ಥಿತಿ ಬರುತ್ತಿರಲಿಲ್ಲ. ಬಡವರ ಹೆಸರಿನಲ್ಲಿ ರಾಜಕೀಯ ಮಾಡುವ ಕಾಂಗ್ರೆಸ್‌ಗೆ ಬಡ ಮಕ್ಕಳ ಸಂಕಷ್ಟ ಮಾತ್ರ ಕಾಣುತ್ತಿಲ್ಲ. ಕೂಡಲೇ ಎಲ್ಲಾ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ಮತ್ತು ಸ್ವೆಟರ್‌ಗಳನ್ನು ವಿತರಿಸಿ. ವಿಳಂಬಕ್ಕೆ ಕಾರಣರಾದವರ ಹೊಣೆಗಾರಿಕೆ ನಿಗದಿಪಡಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ. ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುವುದನ್ನು ಇನ್ನಾದರೂ ನಿಲ್ಲಿಸಿ ಎಂದು ಅಶೋಕ್ ಆಗ್ರಹಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




