ಬಿಬಿಎಂಪಿಯಲ್ಲಿ ಗ್ಯಾರಂಟಿ ಯೋಜನೆ ಕಚೇರಿ! ಸಾರ್ವಜನಿಕರಿಂದ ಅಸಮಾಧಾನ
ಲೋಕಸಭೆ ಚುನಾವಣೆಯಲ್ಲಿ ಆದ ಹಿನ್ನಡೆ ಬಿಬಿಎಂಪಿ ಚುನಾವಣೆಯಲ್ಲಿ ಆಗಬಾರದು. ಇದಕ್ಕಾಗಿ ಏನಾದರೂ ಮಾಡಲೇಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್, ಬಿಬಿಎಂಪಿ ಕಚೇರಿಯಲ್ಲಿ ಗ್ಯಾರಂಟಿ ಸಮಿತಿಯ ಕಚೇರಿ ತೆರೆದಿರುವುದಕ್ಕೆ ಇದೀಗ ಆಕ್ಷೇಪ ವ್ಯಕ್ತವಾಗಿದೆ. ಕಾಂಗ್ರೆಸ್ ತಂತ್ರಗಾರಿಕೆ ಏನು? ಇದಕ್ಕೆ ಆಕ್ಷೇಪ ವ್ಯಕ್ತವಾಗಿದ್ದೇಕೆ ಎಂಬ ಎಲ್ಲ ಮಾಹಿತಿ ಇಲ್ಲಿದೆ.
ಬೆಂಗಳೂರು, ಜೂನ್ 26: ಗ್ಯಾರಂಟಿ ಯೋಜನೆಗಳಿಂದಲೇ (Guaratnee Schemes) ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ (Congress), ಲೋಕಸಭೆ ಫಲಿತಾಂಶದ ಮುಜುಗರದ ಬಳಿಕ ಇದೀಗ ಬಿಬಿಎಂಪಿ ಚುನಾವಣೆಗೆ (BBMP Election) ಸಜ್ಜಾಗುತ್ತಿದೆ. ಬಿಬಿಎಂಪಿ ಚುನಾವಣೆಗೂ ಗ್ಯಾರಂಟಿಗಳನ್ನೇ ಕಾಂಗ್ರೆಸ್ ಅಸ್ತ್ರ ಮಾಡಿಕೊಂಡಂತೆ ಕಾಣುತ್ತಿದೆ. ಈ ಹಿನ್ನೆಲೆ ಬಿಬಿಎಂಪಿ ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸಿರುವ ಕಾಂಗ್ರೆಸ್, ಗ್ಯಾರಂಟಿ ಹಿಡಿದು ಪ್ರಚಾರಕ್ಕೆ ಮುಂದಾಗಿದೆ. ಇದಕ್ಕೆಂದೇ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿಯು ಪ್ರತಿ ವಾರ್ಡನಲ್ಲಿ ಗ್ಯಾರಂಟಿ ಯೋಜನೆ ಬಗ್ಗೆ ಮಾಹಿತಿ ಕಲೆ ಹಾಕಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಬಿಬಿಎಂಪಿಯಲ್ಲಿ ಗ್ಯಾರಂಟಿ ಅನುಷ್ಠಾನ ಕಚೇರಿ ಓಪನ್ ಮಾಡಲಾಗಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಸೋಮವಾರವಷ್ಟೇ ಕಚೇರಿ ಉದ್ಘಾಟನೆ ಮಾಡಿದ್ದರು.
ಈ ಮಧ್ಯೆ, ಕಾಂಗ್ರೆಸ್ ಪಕ್ಷದ ಪ್ರಚಾರಕ್ಕಾಗಿ ಪಾಲಿಕೆಯ ಸ್ವತ್ತನ್ನು ಬಳಸಿಕೊಂಡ ಬಗ್ಗೆ ಈಗ ಅಪಸ್ವರ ಕೇಳಿ ಬಂದಿದೆ. ಸಾರ್ವಜನಿಕರು ಹಾಗೂ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.
ಜನರ ದುಡ್ಡಿಂದ ನಡೆಯುವ ಪಾಲಿಕೆಯ ಕಟ್ಟಡದಲ್ಲಿ ಪಕ್ಷದ ಪ್ರಚಾರದ ಅನುಷ್ಠಾನ ಸಮಿತಿ ಮಾಡಿಕೊಂಡಿರುವುದು ಸರಿಯಲ್ಲ ಎಂದು ಸಾಮಾಜಿಕ ಕಾರ್ಯಕರ್ತ ನಟೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್ ಒಂದೊಂದೇ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ಪಕ್ಷದ ಪ್ರಚಾರಕ್ಕೆ ರಚಿಸಿರುವ ಸಮಿತಿಯ ಕಚೇರಿಯನ್ನು ಪಾಲಿಕೆಯ ಕೇಂದ್ರದ ಕಚೇರಿಯಲ್ಲಿ ಸ್ಥಾಪಿಸಿರುವ ಬಗ್ಗೆ ಈಗ ಅಪಸ್ವರ ಕೇಳಿ ಬಂದಿದೆ. ಜನರ ತೆರಿಗೆ ದುಡ್ಡನ್ನು ಕಾಂಗ್ರೆಸ್ ಪಕ್ಷದ ಕೆಲಸಕ್ಕಾಗಿ ಬಳಸುಕೊಳ್ಳುತ್ತಿದೆ ಎನ್ನುವ ಆರೋಪಗಳೂ ಮುನ್ನಲೆಗೆ ಬಂದಿವೆ.
ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯಲ್ಲಿವೆ ತೆರಿಗೆ ಕಟ್ಟದ 7 ಲಕ್ಷ ಆಸ್ತಿಗಳು; ಇ-ಖಾತಾ ಮೂಲಕ ಬಾಕಿ ತೆರಿಗೆ ವಸೂಲಿಗೆ ಪ್ಲಾನ್
ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನಗಳು ಬಾರದೇ ಇರುವುದರಿಂದ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಈಗ ಬಿಬಿಎಂಪಿ ಚುನಾವಣೆಗೂ ಮುನ್ನ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಅದರ ಕುರಿತು ಫೀಡ್ಬ್ಯಾಕ್ ಪಡೆಯುವುದಕ್ಕಾಗಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. ಅದರ ಅಂಗವಾಗಿಯೇ ಪಾಲಿಕೆಯಲ್ಲಿ ಗ್ಯಾರಂಟಿ ಅನುಷ್ಠಾನ ಕಚೇರಿ ತೆರೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ