
ಬೆಂಗಳೂರು, ಸೆಪ್ಟೆಂಬರ್ 16: ನಗರದಲ್ಲಿ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಮುಗಿಲುಮುಟ್ಟಿದ್ದು, ಉತ್ಸವದ ಮೊದಲ ದಿನವೇ ನಗರದಾದ್ಯಂತ ಬರೋಬ್ಬರಿ 1,84,628 ಗಣಪತಿ ಮೂರ್ತಿಗಳನ್ನು ಭಕ್ತಿಯಿಂದ ವಿಸರ್ಜನೆ ಮಾಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದು ಮಹಾನಗರ ಪಾಲಿಕೆಗಳಲ್ಲಿ ಪರಿಸರ ಸ್ನೇಹಿ ಮತ್ತು ಸುರಕ್ಷಿತ ವಿಸರ್ಜನೆಗಾಗಿ ಕೈಗೊಂಡಿದ್ದ ಮುನ್ನೆಚ್ಚರಿಕಾ ಕ್ರಮಗಳು ಯಶಸ್ವಿಯಾಗಿವೆ.
ಜಿಬಿಎ ಬಿಡುಗಡೆ ಮಾಡಿರುವ ಅಧಿಕೃತ ದತ್ತಾಂಶದ ಪ್ರಕಾರ, ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಂದರೆ 1,20,079 ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿದೆ. ಉಳಿದಂತೆ ಸೆಂಟ್ರಲ್ ವಲಯದಲ್ಲಿ 28,860, ಉತ್ತರ ವಲಯದಲ್ಲಿ 16,857, ದಕ್ಷಿಣ ವಲಯದಲ್ಲಿ 10,372 ಹಾಗೂ ಪೂರ್ವ ವಲಯ ಪಾಲಿಕೆ ವ್ಯಾಪ್ತಿಯಲ್ಲಿ 8,460 ಮೂರ್ತಿಗಳನ್ನು ವಿಸರ್ಜಿಸಲಾಗಿದೆ. ಪಾಲಿಕೆಯು 42 ಪ್ರಮುಖ ಕೆರೆಗಳ ಆವರಣದಲ್ಲಿ ತಾತ್ಕಾಲಿಕ/ಶಾಶ್ವತ ಕಲ್ಯಾಣಿಗಳನ್ನು ಹಾಗೂ 659 ಸಂಚಾರಿ ಟ್ಯಾಂಕರ್ ವ್ಯವಸ್ಥೆಯನ್ನು ಪ್ರತಿಯೊಂದು ವಾರ್ಡ್ ಮಟ್ಟದಲ್ಲೂ ಮಾಡಿತ್ತು.
ಸಾರ್ವಜನಿಕ ಹಾಗೂ ಸಾರ್ವಜನಿಕ ಗಣೇಶ ಮಂಡಳಿಗಳ ಅನುಕೂಲಕ್ಕಾಗಿ ಜಿಬಿಎ ಐದೂ ಪಾಲಿಕೆಗಳ ವ್ಯಾಪ್ತಿಯಲ್ಲಿ ಒಟ್ಟು 122 ‘ಏಕಗವಾಕ್ಷಿ ಕೇಂದ್ರ’ಗಳನ್ನು ತೆರೆದು ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ತಕ್ಷಣದ ಅನುಮತಿ ನೀಡಲು ಕ್ರಮ ವಹಿಸಿತ್ತು. ಅಲ್ಲದೆ, ವಿಸರ್ಜನಾ ಸ್ಥಳಗಳು ಹಾಗೂ ಸಂಚಾರಿ ಟ್ಯಾಂಕರ್‌ಗಳ ವಿವರಗಳನ್ನು ಸಾರ್ವಜನಿಕರಿಗೆ ಒದಗಿಸಲು ಜಿಬಿಎ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸಂಪೂರ್ಣ ಮಾಹಿತಿ ಪ್ರಕಟಿಸಿತ್ತು.
ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸಲು ಮಣ್ಣಿನ ಗಣಪತಿ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದ್ದು, ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಮೂರ್ತಿಗಳ ಮಾರಾಟ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ. ಕೆರೆಗಳ ನೀರು ಕಲುಷಿತಗೊಳ್ಳದಂತೆ ತಡೆಯಲು ಮೊಬೈಲ್ ಟ್ಯಾಂಕ್‌ಗಳ ಬಳಕೆಯು ಹೆಚ್ಚು ಯಶಸ್ವಿಯಾಗಿದ್ದು, ಮುಂಬರುವ ದಿನಗಳಲ್ಲೂ ಸುಸೂತ್ರ ವಿಸರ್ಜನೆಗೆ ಜಿಬಿಎ ಮತ್ತು ಪೊಲೀಸರು ಸೂಕ್ತ ಬಂದೋಬಸ್ತ್ ಮಾಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ