ಗಣೇಶ ಮೂರ್ತಿ ಮೆರವಣಿಗೆ ವೇಳೆ ನಿಯಮ ಮೀರಿ ಡಿಜೆ ಬಳಕೆ ಆರೋಪ: 6 ಮಂದಿ ಡಿಜೆ ಮಾಲೀಕರು, ಆಪರೇಟರ್ಗಳ ವಿರುದ್ಧ ಪ್ರಕರಣ
ಗಣೇಶ ಮೆರವಣಿಗೆಯಲ್ಲಿ ನಿಯಮ ಮೀರಿ ಡಿಜೆ ಬಳಸಿದ ಆರೋಪದ ಮೇಲೆ ಹುಬ್ಬಳ್ಳಿ-ಧಾರವಾಡದಲ್ಲಿ 6 ಡಿಜೆ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದನ್ನು ವಿಪಕ್ಷ ನಾಯಕರಾದ ಆರ್. ಅಶೋಕ್ ಹಾಗೂ ಛಲವಾದಿ ನಾರಾಯಣಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ. ಮಸೀದಿಗಳಲ್ಲಿ ಆಜಾನ್ ಕೂಗುವವರ ಮೇಲೆ ಕೇಸ್ ಹಾಕದ ಇವರು ಡಿಜೆ ಮಾಲೀಕರ ಮೇಲೆ ಕೇಸ್ ಹಾಕ್ತಾರೆ. ಯಾವತ್ತಾದರು ಮಸೀದಿಗಳಿಗೆ ನೋಟಿಸ್ ಕೊಟ್ಟಿದ್ದಾರಾ? ಈ ರೀತಿ ಮಾಡಿಕೊಂಡೇ ಎಲ್ಲ ಕಡೆ ಕಾಂಗ್ರೆಸ್ ಖಾಲಿಯಾಗಿದೆ ಎಂದು ಕೇಸರಿ ಪಡೆ ವಾಗ್ದಾಳಿ ನಡೆಸಿದೆ.

ಹುಬ್ಬಳ್ಳಿ/ಮಂಡ್ಯ, ಸೆಪ್ಟೆಂಬರ್ 16: ಗಣೇಶ ಮೂರ್ತಿ ಮೆರವಣಿಗೆ ವೇಳೆ ನಿಯಮ ಮೀರಿ ಡಿಜೆ ಬಳಕೆ ಆರೋಪ ಸಂಬಂಧ ಹುಬ್ಬಳ್ಳಿ ಎಪಿಎಂಸಿ, ಧಾರವಾಡದ ವಿದ್ಯಾಗಿರಿ, ಶಹರ ಸೇರಿ ಒಟ್ಟು ಆರು ಕೇಸ್ಗಳು ದಾಖಲಾಗಿವೆ. ಶಬ್ದ ಮಾಲಿನ್ಯ ನಿಯಮ ಉಲ್ಲಂಘನೆ ಆರೋಪದಡಿ 6 ಮಂದಿ ಡಿಜೆ ಮಾಲೀಕರು, ಆಪರೇಟರ್ಗಳ ವಿರುದ್ಧ ಪ್ರಕರಣ ದಾಖಲಿಸಿರೋದೀಗ ವಿಪಕ್ಷ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಕೇಸರಿ ಪಡೆ ಮುಗಿಬಿದ್ದಿದೆ.
‘ಯಾವತ್ತಾದರು ಮಸೀದಿಗಳಿಗೆ ನೋಟಿಸ್ ಕೊಟ್ಟಿದ್ದಾರಾ?’
ಮಸೀದಿಗಳಲ್ಲಿ ಆಜಾನ್ ಕೂಗುವವರ ಮೇಲೆ ಕೇಸ್ ಹಾಕದ ಇವರು ಡಿಜೆ ಮಾಲೀಕರ ಮೇಲೆ ಕೇಸ್ ಹಾಕ್ತಾರೆ. ಯಾವತ್ತಾದರು ಮಸೀದಿಗಳಿಗೆ ನೋಟಿಸ್ ಕೊಟ್ಟಿದ್ದಾರಾ? ಈ ರೀತಿ ಮಾಡಿಕೊಂಡೇ ಎಲ್ಲ ಕಡೆ ಕಾಂಗ್ರೆಸ್ ಖಾಲಿಯಾಗಿದೆ. ಮುಂದೆ ಕರ್ನಾಟಕದಲ್ಲೂ ಇದೇ ರೀತಿ ಆಗಲಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ನಮಗೆ ಮಸೀದಿ ಮುಂದೆ ಹೋಗಬೇಡಿ ಅಂತಾರೆ. ಅದೇ ಮುಸ್ಲಿಂ ಮೆರವಣಿಗೆ ವೇಳೆ ಹಿಂದೂ ದೇವಸ್ಥಾನದ ಮುಂದೆ ಹೋಗಬೇಡಿ ಎಂದು ಹೇಳಿದ್ದಾರಾ? ಈ ಬುದ್ಧಿಯ ಕಾರಣಕ್ಕೇ ಕಾಂಗ್ರೆಸ್ನ ಹಿಂದೂ ವಿರೋಧಿ ಎನ್ನುವುದು. ಹಿಂದೂಗಳನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ನೋಡುವುದು ಸೋನಿಯಾ ಮತ್ತು ರಾಹುಲ್ ಗಾಂಧಿ ಅವರ ರಕ್ತದಲ್ಲೇ ಬಂದಿದೆ. ರಾಜ್ಯದ ಸಿಎಂ ಅವರು ಹೇಳಿದಂತೆ ಕೇಳ್ತಿದ್ದಾರೆ ಎಂದವರು ಕಿಡಿ ಕಾರಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಎಲ್ಲರ ಗಮನ ಸೆಳೆದ ಕೇಸರಿ ಗಣೇಶ
‘ರಾಜ್ಯದಲ್ಲಿ ಇರೋದು ಹಿಂದೂ ವಿರೋಧಿ ಸರ್ಕಾರ’
ಕರ್ನಾಟಕ ರಾಜ್ಯದಲ್ಲಿ ಇರೋದು ಹಿಂದೂ ವಿರೋಧಿ ಸರ್ಕಾರ ಎಂದು ಮತ್ತೊಂದೆಡೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದು, ಡಿಜೆ ಇಟ್ಟಿರುವವರ ಮೇಲೆ ಕೇಸ್ ಹಾಕಿದ್ರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ. ಮುಂದೆ ಇವರು ಗಣಪತಿ ಕೂರಿಸುವವರ ಮೇಲೂ ಕೇಸ್ ಹಾಕಬಹುದು. ಕಾಂಗ್ರೆಸ್ನವರು ಉಮರ್ ಖಾಲಿದ್ ನ್ಯಾಷನಲಿಸ್ಟ್ ಅಂತಾರೆ. ಆದ್ರೆ ಜನ ಉಮರ್ ಖಾಲಿದ್ ಭಯೋತ್ಪಾದಕ ಎನ್ನುತ್ತಾರೆ ಎಂದವರು ಆರೋಪಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




