ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆ ಕರಡು ಪ್ರತಿಗೆ 1400 ಕ್ಕೂ ಹೆಚ್ಚು ಆಕ್ಷೇಪಣೆ; ಗಡುವು ವಿಸ್ತರಣೆ ಸಾಧ್ಯತೆ ಅನುಮಾನ
BBMP ward delimitation draft; ಇಲ್ಲಿಯವರೆಗೆ ಬಂದಿರುವ ಆಕ್ಷೇಪಣೆಗಳಲ್ಲಿ ಕೆಲವು, ತಮ್ಮ ಗಡಿಗಳನ್ನು ಒಂದು ವಿಧಾನಸಭಾ ಕ್ಷೇತ್ರದೊಳಗೆ ಸೇರಿಸುವಂತೆ ನಗರಾಭಿವೃದ್ಧಿ ಇಲಾಖೆಯನ್ನು ಕೇಳಿಕೊಂಡಿವೆ. ಏಕೆಂದರೆ ಕೆಲವು ವಾರ್ಡ್‌ಗಳನ್ನು ಎರಡು ವಿಭಿನ್ನ ಕ್ಷೇತ್ರಗಳ ಅಡಿಯಲ್ಲಿ ಬರುವ ರೀತಿಯಲ್ಲಿ ಸೇರಿಸಿರುವುದು ಕರಡು ಪ್ರತಿಯಿಂದ ತಿಳಿದುಬಂದಿತ್ತು.
ಬೆಂಗಳೂರು, ಸೆಪ್ಟೆಂಬರ್ 2: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ವಾರ್ಡ್ ಪುನರ್ ವಿಂಗಡಣೆಯ ಕರಡು ಪ್ರತಿಯು ಶನಿವಾರದವರೆಗೆ ನಾಗರಿಕರು ಮತ್ತು ನಾಗರಿಕ ವೇದಿಕೆಗಳಿಂದ 1,400 ಕ್ಕೂ ಹೆಚ್ಚು ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸ್ವೀಕರಿಸಿದೆ. ನಗರಾಭಿವೃದ್ಧಿ ಇಲಾಖೆ (UDD) ಆಗಸ್ಟ್ 18 ರಿಂದ ನಾಗರಿಕರಿಗೆ ಅಂಚೆ ಮೂಲಕ ಮಾತ್ರ ಆಕ್ಷೇಪಣೆಗಳನ್ನು ಕಳುಹಿಸಲು ಅವಕಾಶ ನೀಡಿದೆ. ಅಂಚೆ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಲು ಇಂದು (ಸೆಪ್ಟೆಂಬರ್ 2) ಕೊನೆಯ ದಿನವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ನಗರಾಭಿವೃದ್ಧಿ ಇಲಾಖೆಯು ಗಡುವನ್ನು ಮತ್ತಷ್ಟು ವಿಸ್ತರಿಸುವ ಯಾವುದೇ ಸಾಧ್ಯತೆ ಇಲ್ಲ.
ಆಗಸ್ಟ್ 18 ರಂದು, 225 ವಾರ್ಡ್‌ಗಳ ಪುನರ್ ವಿಂಗಡಣೆಯ ಕರಡು ಪ್ರತಿಯನ್ನು ಬಿಡುಗಡೆ ಮಾಡಲಾಗಿತ್ತು ಮತ್ತು 15 ದಿನಗಳ ಒಳಗಾಗಿ ಆಕ್ಷೇಪಣೆ, ಸಲಹೆ ನೀಡುವಂತೆ ಸಾರ್ವಜನಿಕರನ್ನು ಕೋರಿತ್ತು. ಕಾಂಗ್ರೆಸ್ ಸರ್ಕಾರವು ವಾರ್ಡ್‌ಗಳ ಸಂಖ್ಯೆಯನ್ನು 243 ರಿಂದ 225 ಕ್ಕೆ ಇಳಿಸಿದೆ.
ಸಲಹೆಗಳನ್ನು ಅಂಚೆ ಮೂಲಕ ಮಾತ್ರ ಕಳುಹಿಸಬೇಕು ಎಂಬ ಷರತ್ತು ವಿಧಿಸಿದ್ದಕ್ಕೆ ಹಲವಾರು ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ನೀಡಲು ಆನ್‌ಲೈನ್ ಚಾನೆಲ್ ಅನ್ನು ಸಕ್ರಿಯಗೊಳಿಸಲು ಸರ್ಕಾರವನ್ನು ಒತ್ತಾಯಿಸಿದ್ದರು.
ಇಲ್ಲಿಯವರೆಗೆ ಬಂದಿರುವ ಆಕ್ಷೇಪಣೆಗಳಲ್ಲಿ ಕೆಲವು, ತಮ್ಮ ಗಡಿಗಳನ್ನು ಒಂದು ವಿಧಾನಸಭಾ ಕ್ಷೇತ್ರದೊಳಗೆ ಸೇರಿಸುವಂತೆ ನಗರಾಭಿವೃದ್ಧಿ ಇಲಾಖೆಯನ್ನು ಕೇಳಿಕೊಂಡಿವೆ. ಏಕೆಂದರೆ ಕೆಲವು ವಾರ್ಡ್‌ಗಳನ್ನು ಎರಡು ವಿಭಿನ್ನ ಕ್ಷೇತ್ರಗಳ ಅಡಿಯಲ್ಲಿ ಬರುವ ರೀತಿಯಲ್ಲಿ ಸೇರಿಸಿರುವುದು ಕರಡು ಪ್ರತಿಯಿಂದ ತಿಳಿದುಬಂದಿತ್ತು.
ಬಿಬಿಎಂಪಿಯು ತನ್ನ ವೆಬ್‌ಸೈಟ್‌ನಲ್ಲಿ ಅಸ್ತಿತ್ವದಲ್ಲಿರುವ ಮತ್ತು ವಿಂಗಡಣೆಯಾದ ವಾರ್ಡ್, ವಾರ್ಡ್ ವಿಸ್ತೀರ್ಣ, ಜನಸಂಖ್ಯೆ, ವಿಧಾನಸಭೆ ಮತ್ತು ಸಂಸದೀಯ ಕ್ಷೇತ್ರದ ವಿವರಗಳನ್ನು ನೀಡುವ ನಕ್ಷೆಯನ್ನು ಸಹ ಅಪ್‌ಲೋಡ್ ಮಾಡಿದೆ.
ಇದನ್ನೂ ಓದಿ: ಆಪರೇಷನ್ ಕಮಲಕ್ಕೆ ಎಲ್ಲಿಂದ ಹಣ ಬರುತ್ತಿದೆ? ಬಿಎಲ್ ಸಂತೋಷ್ ಉತ್ತರಿಸಲಿ ಎಂದ ಪ್ರಿಯಾಂಕ್ ಖರ್ಗೆ
ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ, ಸರ್ಕಾರಕ್ಕೆ 12 ವಾರಗಳ ಕಾಲಾವಕಾಶ ನೀಡಿದ್ದರಿಂದ ಸೆಪ್ಟೆಂಬರ್ 18 ರೊಳಗೆ ವಾರ್ಡ್ ಗಡಿಯನ್ನು ಗುರುತಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ. ಹಿಂದಿನ ಬಿಜೆಪಿ ಸರಕಾರದ ವಾರ್ಡ್ ವಿಂಗಡಣೆಯಲ್ಲಿನ ಲೋಪದೋಷಗಳನ್ನು ಉಲ್ಲೇಖಿಸಿ ಸರಕಾರವು ಹೈಕೋರ್ಟ್‌ನಲ್ಲಿ ಸಮಯ ಕೋರಿತ್ತು.
ಡಿಸೆಂಬರ್‌ನಲ್ಲಿ ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಮುಂದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ