ಬೆಂಗಳೂರು: ಎಟಿಎಂಗೆ ಹಾಕಲು ಕೊಟ್ಟಿದ್ದ 1 ಕೋಟಿ ರೂ.ಗೂ ಅಧಿಕ ಹಣದೊಂದಿಗೆ ಸಿಬ್ಬಂದಿಯೇ ಪರಾರಿ!
ಬೆಳಗಾವಿ ಚೋರ್ಲಾ ಘಾಟ್ ಪ್ರದೇಶದಲ್ಲಿ ಸುಮಾರು 400 ಕೋಟಿ ರೂ. ನಗದು ಸಾಗಿಸುತ್ತಿದ್ದ ಕಂಟೇನರ್ಗಳ ಹೈಜಾಕ್ ಪ್ರಕರಣ ದೇಶಾದ್ಯಂತ ಸುದ್ದಿಯಲ್ಲಿದೆ. ಇದೇ ಸಂದರ್ಭದಲ್ಲಿ ಇತ್ತ ಬೆಂಗಳೂರಿನ ಕೋರಮಂಗಲದಲ್ಲಿ ಎಟಿಎಂಗೆ ಹಣ ಹಾಕಲು ಖಾಸಗಿ ಕಂಪನಿ ಕೊಟ್ಟ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣದೊಂದಿಗೆ ಸಿಬ್ಬಂದಿಯೇ ಪರಾರಿಯಾದ ಘಟನೆ ವರದಿಯಾಗಿದೆ.

ಬೆಂಗಳೂರು, ಜನವರಿ 27: ಎಟಿಎಂಗಳಿಗೆ ನಗದು ಡೆಪಾಸಿಟ್ ಮಾಡಬೇಕಿದ್ದ ಒಂದು ಕೋಟಿ ರೂಪಾಯಿಗೂ ಅಧಿಕ ಹಣವನ್ನು ದೋಚಿ ಸಿಬ್ಬಂದಿಯೇ ಪರಾರಿಯಾದ ಘಟನೆ ಬೆಂಗಳೂರಿನ (Bangalore) ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. 400 ಕೋಟಿ ರೂ. ಹಣ ದರೋಡೆ ಪ್ರಕರಣದ ಕುರಿತ ಚರ್ಚೆ ತೀವ್ರವಾಗಿರುವ ಸಂದರ್ಭದಲ್ಲೇ ಮತ್ತೊಂದು ದೊಡ್ಡ ನಗದು ಕಳವು ಪ್ರಕರಣ ಬಹಿರಂಗವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಹಿಟಾಚಿ ಪೇಮೆಂಟ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕೆಲ ಸಿಬ್ಬಂದಿ ಈ ಕೃತ್ಯ ಎಸಗಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೋರಮಂಗಲದಲ್ಲಿರುವ ಆ್ಯಕ್ಸಿಸ್ ಬ್ಯಾಂಕ್‌ಗೆ ಸೇರಿದ ಒಂದು ಕೋಟಿಗೂ ಅಧಿಕ ಹಣವನ್ನು ವಿವಿಧ ಎಟಿಎಂಗಳಿಗೆ ಡೆಪಾಸಿಟ್ ಮಾಡುವಂತೆ ಕಂಪನಿ ಅಧಿಕಾರಿ ಮಿಥುನ್ ಎಂಬವರು ಜನವರಿ 19ರಂದು ಸೂಚನೆ ನೀಡಿದ್ದರು.
ಎಟಿಎಂಗೆ ಹಣ ಹಾಕಲು ಹೋದವರು ನಗದು ಸಮೇತ ಪರಾರಿ
ಎಟಿಎಂಗೆ ಹಣ ಹಾಕಲೆಂದು ಕಂಪನಿಯ ಎರಡು ಪ್ರತ್ಯೇಕ ತಂಡಗಳಿಗೆ ನಗದು ಹಂಚಿಕೆ ಮಾಡಲಾಗಿತ್ತು. ಪ್ರವೀಣ್, ಧನಶೇಖರ್, ರಾಮಕ್ಕ, ಹರೀಶ್ ಕುಮಾರ್, ಪ್ರವೀಣ್ ಕುಮಾರ್ ಹಾಗೂ ವರುಣ್ ಎಂಬ ಸಿಬ್ಬಂದಿಗಳಿಗೆ ಎಟಿಎಂಗಳಿಗೆ ಹಣ ಹಾಕುವ ಜವಾಬ್ದಾರಿ ನೀಡಲಾಗಿತ್ತು. ಆದರೆ, ಆರೋಪಿಗಳು ಎಟಿಎಂಗಳಿಗೆ ಹಣ ಹಾಕದೇ ನಗದಿನೊಂದಿಗೆ ಪರಾರಿಯಾಗಿದ್ದಾರೆ.
ಒಂದು ತಂಡವು ಸುಮಾರು 57 ಲಕ್ಷ ರೂ. ನಗದು ತೆಗೆದುಕೊಂಡು ಪರಾರಿಯಾಗಿದ್ದರೆ, ಮತ್ತೊಂದು ತಂಡವು ಸುಮಾರು 80 ಲಕ್ಷ ರೂ. ಹಣದೊಂದಿಗೆ ಪರಾರಿಯಾಗಿದೆ ಎನ್ನಲಾಗಿದೆ. ಎಟಿಎಂಗಳಲ್ಲಿ ಹಣ ಜಮಾ ಆಗದಿರುವುದು ಗೊತ್ತಾದ ಬಳಿಕ ಕಂಪನಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ವಂಚನೆ ಬೆಳಕಿಗೆ ಬಂದಿದೆ.
ಈ ಸಂಬಂಧ ಹಿಟಾಚಿ ಪೇಮೆಂಟ್ ಸರ್ವಿಸ್ ಕಂಪನಿ ಅಧಿಕಾರಿ ಮಿಥುನ್ ಅವರು ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಹಾಗೂ ಮೊಬೈಲ್ ಕರೆ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 400 ಕೋಟಿ ಮಾಲೀಕ ಗುಜರಾತ್ ರಾಜಕಾರಣಿಯಾ? ದೇಶದ ಅತಿದೊಡ್ಡ ದರೋಡೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್!
ಈ ಪ್ರಕರಣವು ಖಾಸಗಿ ನಗದು ನಿರ್ವಹಣಾ ಕಂಪನಿಗಳ ಭದ್ರತೆ ಹಾಗೂ ನಿಗಾವ್ಯವಸ್ಥೆ ಕುರಿತು ಮತ್ತೊಮ್ಮೆ ಪ್ರಶ್ನೆಗಳನ್ನು ಎತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:18 am, Tue, 27 January 26