ಬೆಂಗಳೂರು, ಫೆ.29: ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ (Pakistan Zindabad Slogans) ಎಂಬ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ. ದೇಶದ್ರೋಹಿ ಘೋಷಣೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ (BJP) ಕೆಂಡಕಾರಿದ್ದು ಕಾಂಗ್ರೆಸ್ (Congress) ಸಮರ್ಥನೆಯ ಧಾಟಿ ಮುಂದುವರೆದಿದೆ. ವಿಧಾನ ಪರಿಷತ್ನಲ್ಲೂ ಗಲಾಟೆ-ಗದ್ದಲ ನಡೆಯುತ್ತಿದೆ. ಸದ್ಯ ಪಾಕ್ನ ಪರ ಘೋಷಣೆ ಕೂಗಲಾಗಿದೆ ಎಂದು ಆರೋಪಿಸಿರುವ ಅಸಲಿ ವಿಡಿಯೋಗಳನ್ನು ಎಫ್ಎಸ್ಎಲ್ಗೆ ರವಾನಿಸಲಾಗಿದೆ. ಎಫ್ಎಸ್ಎಲ್ನ (FSL) ಲ್ಯಾಬ್ನಲ್ಲಿ ವಿಡಿಯೋಗಳ ಅಸಲಿಯತ್ತಿನ ಪರಿಶೀಲನೆ ನಡೆಯಲಿದೆ. ಬಳಿಕವಷ್ಟೇ ಈ ಘಟನೆಯ ಅಸಲಿ ಸತ್ಯ ಹೊರ ಬೀಳಲಿದೆ. ಹಾಗಾದ್ರೆ FSL ತನಿಖೆ ನಡೆಯುವುದು ಹೇಗೆ? ಇದರಿಂದ ಅಸಲಿಯತ್ತು ಪತ್ತೆ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿರುವುದು ಆಡಳಿತ ಪಕ್ಷ ಕಾಂಗ್ರೆಸ್‌ಗೆ ಮುಜುಗರ ತಂದಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ ಪರಮೇಶ್ವರ್ ಅವರು ವಿಡಿಯೋವನ್ನು ಎಸ್‌ಎಫ್‌ಎಲ್‌ಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಖಂಡಿತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದ್ದಾರೆ. ಪಾಕ್ ಪರ ಘೋಷಣೆ ಕೂಗಲಾಗಿದೆ ಎಂದು ಹೇಳಲಾಗುತ್ತಿರುವ ಮೂಲ ವಿಡಿಯೋಗಳನ್ನು ಎಫ್ಎಸ್ಎಲ್ಗೆ ರವಾನಿಸಲಾಗಿದ್ದು ಸತ್ಯ ಅರಿಯಲು ಪೊಲೀಸರು ಮುಂದಾಗಿದ್ದಾರೆ.
ಇದನ್ನೂ ಓದಿ: ನನ್ನ ಹೇಳಿಕೆ ತಿರುಚಿದ್ದಾರೆ, ಮಾಧ್ಯಮಗಳ ಮೇಲೆ ಹಕ್ಕುಚ್ಯುತಿ ಮಂಡನೆ ಮಾಡ್ತೀನಿ -ಬಿಕೆ ಹರಿಪ್ರಸಾದ್
ಎಫ್ಎಸ್ಎಲ್ ತನಿಖೆ ಬಗ್ಗೆ ಸೈಬರ್ ತಜ್ಞರು ಟಿವಿ9ಗೆ ಮಾಹಿತಿ ನೀಡಿದ್ದಾರೆ. ಆರ್ಟಿಫಿಷಲ್ ಇಂಟೆಲಿಜೆನ್ಸ್ (AI) ಮೂಲಕ ಪರಿಶೀಲನೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಮೂಲವಲ್ಲದ ವಿಡಿಯೋ ಅಥವಾ ಆಡಿಯೋಗೆ ಮಾನ್ಯತೆ ಇಲ್ಲ. ರೆಕಾರ್ಡ್ ಆದ ಡಿವೈಸ್ನಿಂದ ವಿಡಿಯೋ, ಆಡಿಯೋ ಪಡೆದುಕೊಳ್ಳಬೇಕು. ಹೀಗಾಗಿ ಮದರ್ ವಿಡಿಯೋಗಳನ್ನು ಎಫ್ಎಸ್ಎಲ್ ತಂಡ ಸಂಗ್ರಹಿಸಲಿದೆ. ಪೊಲೀಸರು ಈಗಾಗಲೇ ಮಾಧ್ಯಮಗಳಲ್ಲಿ ಪ್ರಸಾರವಾದ ಮೂಲ ವಿಡಿಯೋಗಳನ್ನು ಸಂಗ್ರಹಿಸಿ ಎಫ್ಎಸ್ಎಲ್ಗೆ ಕಳಿಸಿದ್ದಾರೆ. ವಿಡಿಯೋ ಟ್ಯಾಂಪರ್ ಆಗಿದ್ಯಾ ಅಂತ FSL ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಎನ್ಕ್ರಿಪ್ಟ್ ಮೂಲಕ ಹ್ಯಾಷಿಂಗ್ ಆಗಿದ್ಯಾ?ಇಲ್ವಾ? ಎಂಬ ಪರಿಶೀಲನೆ ನಡೆಯಲಿದೆ. ಆ ವಿಡಿಯೋ ನೈಜ ವಿಡಿಯೋನಾ ಎಂಬುದರ ಬಗ್ಗೆ FSL ಪರಿಶೀಲನೆ ನಡೆಸುತ್ತೆ.
ಆ ವಿಡಿಯೋದಲ್ಲಿರುವ ವ್ಯಕ್ತಿ ಹಾಗೂ ಅದರ ಆಡಿಯೋ ಬಗ್ಗೆ ಸೂಕ್ಷ್ಮವಾಗಿ ಪರಿಶೀಲನೆ ಮಾಡಲಾಗುತ್ತೆ. ವಿಡಿಯೋ ಟ್ಯಾಂಪರಿಂಗ್ ಮಾಡಿದ್ರೆ ಅದರ ಲಿಪ್ ಸಿಂಕ್ಗಳನ್ನು ಹೇಗೆ ಮಾಡಲಾಗಿದೆ ಎಂದು ಕಂಡು ಹಿಡಿಯಲಾಗುತ್ತೆ. FSLನಲ್ಲಿ AI ನಿಂದ ಮಾಡಿದ್ದಾ ಅನ್ನೋದನ್ನೂ ಸಹ ಪತ್ತೆ ಹಚ್ಚಲಾಗುತ್ತದೆ. ಆಡಿರೋ ಮಾತಿಗೂ, ಕೊಟ್ಟಿರುವ ರಿಯಾಕ್ಷನ್ ಪರಿಶೀಲನೆ ಮಾಡಲಾಗುತ್ತೆ. ಸ್ಲೋ ಡೌನ್ ಮಾಡುವ ಮೂಲಕ ಸೆಕೆಂಡ್ಗಳನ್ನು ಗಮನಿಸಲಾಗುತ್ತೆ. ಹಿಂದೆ ಬರುವಂತಹ ಆಡಿಯೋಗೂ, ವ್ಯಕ್ತಿ ಮಾತಿಗೂ ಸಾಮ್ಯತೆ ಹುಡುಕಲಾಗುತ್ತೆ. ಅದನ್ನು ಮತ್ತೆ ಹ್ಯಾಷಿಂಗ್ ತಂತ್ರಜ್ಞಾನ ಬಳಸಿ ಅದನ್ನ ಮತ್ತೆ ಪರಿಶೀಲಿಸಿ ಒರಿಜಿನಲ್ ಅಥವಾ ಫೇಕ್ ಎಂಬುದರ ಬಗ್ಗೆ FSL ರಿಪೋರ್ಟ್ ತಯಾರು ಮಾಡಲಾಗುತ್ತೆ. ಸದ್ಯ ವಿಡಿಯೋ, ಆಡಿಯೋ ಕ್ಲಿಪ್ಗಳನ್ನು ಎಫ್ಎಸ್ಎಲ್ಗೆ ನೀಡಲಾಗಿದ್ದು ವರದಿ ಏನು ಹೇಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:16 pm, Thu, 29 February 24