ಬಿಎಂಟಿಸಿ ಚಾಲಕ, ನಿರ್ವಾಹಕನಿಗೆ ಸ್ಕ್ರೂಡ್ರೈವರ್ ತೋರಿಸಿ ಬೆದರಿಕೆ

ಇತ್ತೀಚಿಗೆ ಬಿಬಿಎಂಟಿಸಿ ಬಸ್​ ನಿರ್ವಾಹಕನಿಗೆ ಚಾಕು ಇರಿದ ಘಟನೆ ನಡೆದಿತ್ತು. ಈ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದ್ದು, ಬಿಎಂಟಿಸಿ ವೋಲ್ವೋ ಬಸ್​ ಚಾಲಕ ಮತ್ತು ನಿರ್ವಾಹಕನಿಗೆ ಸ್ಕ್ರೂಡ್ರೈವರ್​ ತೋರಿಸಿ ಬೆದರಿಕೆ ಹಾಕಲಾಗಿದೆ.

ಬಿಎಂಟಿಸಿ ಚಾಲಕ, ನಿರ್ವಾಹಕನಿಗೆ ಸ್ಕ್ರೂಡ್ರೈವರ್ ತೋರಿಸಿ ಬೆದರಿಕೆ
ಬಿಎಂಟಿಸಿ ಪ್ರಯಾಣಿಕನ ಬೆದರಿಕೆ
Follow us
Kiran Surya
| Updated By: ವಿವೇಕ ಬಿರಾದಾರ

Updated on:Oct 04, 2024 | 3:05 PM

ಬೆಂಗಳೂರು, ಅಕ್ಟೋಬರ್​ 04: ಬೆಂಗಳೂರು ಮಹಾನಗರ ಸಾರಿಗೆ (BMTC) ಬಸ್​ ನಿರ್ವಾಹಕನಿಗೆ ಚಾಕು ಇರಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹಲ್ಲೆ ಮತ್ತು ಬೆದರಿಕೆ ಘಟನೆ ನಡೆದಿದೆ. ಪ್ರಯಾಣಿಕ ಬಿಎಂಟಿಸಿ ಬಸ್​ ನಿರ್ವಾಹಕ ಮತ್ತು ಚಾಲಕನಿಗೆ ಸ್ಕ್ರೂಡ್ರೈವರ್ ತೋರಿಸಿ ಬೆದರಿಕೆ ಹಾಕಿದ್ದಾನೆ.

ಗುರುವಾರ ಸಂಜೆ 4:15ರ ಸುಮಾರಿಗೆ ಬಿಎಂಟಿಸಿ ವೋಲ್ವೋ ಬಸ್​ ಅತ್ತಿಬೆಲೆಯಿಂದ ಮೆಜಸ್ಟಿಕ್​ಗೆ ಹೋಗುತ್ತಿತ್ತು. ಬೆದರಿಕೆ ಹಾಕಿದ ಪ್ರಯಾಣಿಕ ಕೊನಪ್ಪನ ಅಗ್ರಹಾರದಲ್ಲಿ ಬಸ್ ಹತ್ತಿದ್ದಾನೆ. ​ನಿರ್ವಾಹಕ ಪ್ರಯಾಣಿಕರಿಗೆ ಟಿಕೆಟ್ ನೀಡುವ ಸಂಬಂಧ ಬಸ್​ ಅನ್ನು ಅದೇ ನಿಲ್ದಾಣದಲ್ಲಿ ಕೆಲ ಹೊತ್ತು ನಿಲ್ಲಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕ ಹೊಸ ರೋಡ್ ಬಸ್ ನಿಲ್ದಾಣದಲ್ಲಿ ಬಸ್​ನಿಂದ ಇಳಿದು, ಬ್ಯಾಗ್​ನಲ್ಲಿದ್ದ ಸ್ಕ್ರೂಡ್ರೈವರ್ ತೆಗೆದು, ಚಾಲಕ ಮತ್ತು ನಿರ್ವಾಹಕನಿಗೆ ತೋರಿಸಿ, ಚುಚ್ಚಿ ಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

ಇದನ್ನೂ ಓದಿ: ಕಂಡಕ್ಟರ್, ಡ್ರೈವರ್​ಗಳ ರಕ್ಷಣೆಗಾಗಿ ಗನ್ ಇಟ್ಟುಕೊಳ್ಳಲು ಅನುಮತಿ ನೀಡುವಂತೆ ಬಿಎಂಟಿಸಿ ಎಂಡಿಗೆ ಪತ್ರ

ನಿರ್ವಾಹಕನಿಗೆ ಚಾಕು ಇರಿತ

ಅಕ್ಟೋಬರ್​ 1 ರಂದು ಬೆಂಗಳೂರಿನ ವೈಟ್​ಫೀಲ್ಡ್ ಬಳಿಯ ITPL ಬಸ್ ಸ್ಟಾಪ್ ಬಳಿ ಪ್ರಯಾಣಿಕನೋರ್ವ ಬಿಎಂಟಿಸಿ ಬಸ್​ ನಿವಾರ್ವಾಹಕನಿಗೆ ಚಾಕುವಿನಿಂದ ಇರಿದಿದ್ದನು. ಅಂದು ಸಂಜೆ ವೈಟ್ ಫೀಲ್ಡ್ ಬಳಿಯ ಐಟಿಪಿಎಲ್ ಬಸ್ ಸ್ಟಾಪ್ ನಲ್ಲಿ KA- 57-F0015 ವೋಲ್ವೋ ಬಸ್ ಕಂಡಕ್ಟರ್ ಯೋಗೇಶ್​ಗೆ ಅಪರಿಚಿತ ವ್ಯಕ್ತಿ ಎರಡ್ಮೂರು ಬಾರಿ ಚಾಕುವಿನಿಂದ ಇರಿದಿದ್ದನು. ಪ್ರಯಾಣಿಕರು ತುಂಬಿದ್ದ ಬಸ್ ‌ನಲ್ಲಿ ಈ ದುಷ್ಕೃತ್ಯ ನಡೆದಿತ್ತು.

ಕಂಡಕ್ಟರ್ ಯೋಗೇಶ್​ಗೆ ಎರಡ್ಮೂರು ಬಾರಿ ಚಾಕುವಿನಿಂದ ಇರಿದ ಬಳಿಕ ಬಸ್​ನ ಗಾಜುಗಳಿಗೆ ಸುತ್ತಿಗೆ ತೆಗೆದುಕೊಂಡು ಗಾಜು ಪುಡಿಗಟ್ಟಿ ಹುಚ್ಚನಂತೆ ವರ್ತಿಸಿದ್ದನು. ಇದನ್ನು ನೋಡಿ ಸಹ ಪ್ರಯಾಣಿಕರು ಕಿರುಚಾಡಿಕೊಂಡು ಬಸ್​ನಿಂದ ಕೆಳಗೆ ಇಳಿದು ಓಡಿ ಹೋಗಿದ್ದರು. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವೈಟ್​ಫೀಲ್ಡ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.

ಇನ್ನು, ಚಾಕು ಇರಿತಕ್ಕೆ ಒಳಗಾಗಿರುವ ಕಂಡಕ್ಟರ್​ ಯೋಗೇಶ್​ ಅವರನ್ನು ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:55 am, Fri, 4 October 24