ಜನರಿಗೆ ಗೊತ್ತಾಗಬೇಕು.. ವಕ್ಫ್ ಆಸ್ತಿ ಒತ್ತುವರಿ ವರದಿ ಸದನದಲ್ಲಿ ಮಂಡಿಸುತ್ತೇವೆ- ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ
ವಕ್ಫ್ ಆಸ್ತಿ ಒತ್ತುವರಿ ಕುರಿತ ಸಂಪೂರ್ಣ ವರದಿ ಸದನದಲ್ಲಿ ಮಂಡಿಸ್ತೇವೆ ಎಂದು ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಕಾನೂನು ಉಲ್ಲಂಘನೆ ಹೇಗಾಯ್ತು ಎಂದು ಜನರಿಗೆ ಗೊತ್ತಾಗಬೇಕು ಎಂದರು.
ಬೆಂಗಳೂರು: ವಿಧಾನಸಭೆಯಲ್ಲಿ ಇಂದು ವಕ್ಫ್ ಆಸ್ತಿ ಒತ್ತುವರಿ ವರದಿಯ ಬಗ್ಗೆ ಚರ್ಚೆಯಾಗಿದೆ. ಚರ್ಚೆ ವೇಳೆ ಆಡಳಿತರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ಭಾರಿ ಪರ-ವಿರೋಧ ಚರ್ಚೆಯಾಗಿದ್ದು ಗದ್ದಲ ಸೃಷ್ಟಿಯಾಗಿತ್ತು. ವಕ್ಫ್ ಆಸ್ತಿ ಒತ್ತುವರಿ ವರದಿ ಬಗ್ಗೆ ಮಾತನಾಡುತ್ತಿದ್ದಾಗ ಬಿಜೆಪಿ ಶಾಸಕ ಯತ್ನಾಳ್ ಹಾಗೂ ಯು.ಟಿ.ಖಾದರ್ ನಡುವೆ ವಾಗ್ವಾದವಾಗಿದೆ. ಹಾಗೂ ವಕ್ಫ್ ಆಸ್ತಿ ಹಗರಣವನ್ನು ನ್ಯಾಯಾಂಗ ತನಿಖೆಗೊಳಪಡಿಸಬೇಕು ಎಂದು ಪುತ್ತೂರು ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಒತ್ತಾಯಿಸಿದ್ದಾರೆ. ನಿಯಮ 69ರಡಿ ಚರ್ಚೆಗೆ ಅವಕಾಶ ಕೊಡುವಂತೆ ಬಿಜೆಪಿ ಶಾಸಕರು ಒತ್ತಾಯಿಸಿದ್ದಾರೆ.
ವಕ್ಫ್ ವರದಿ ತಿರಸ್ಕಾರ ಮಾಡುವ ಬಗ್ಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸಂಪುಟದಲ್ಲಿ ತೀರ್ಮಾನಿಸಲಾಗಿತ್ತು ಎಂದು ವಿಧಾನಸಭೆಗೆ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಉತ್ತರಿಸಿದ್ರು. ಎರಡೂ ಸದನದಲ್ಲಿ ವರದಿ ಮಂಡನೆಗೆ ಕೋರ್ಟ್ ಸೂಚಿಸಿತ್ತು. ಬಿಎಸ್‌ವೈ ಸರ್ಕಾರದ ಅವಧಿಯಲ್ಲಿ ಸದನದಲ್ಲಿ ಮಂಡಿಸಲಾಗಿತ್ತು. ವರದಿಯನ್ನು ಮತ್ತೆ ಸದನದಲ್ಲಿ ಮಂಡಿಸುವ ಬಗ್ಗೆ ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಸಿಎಂ ಚರ್ಚಿಸಿದ್ದಾರೆ. ವರದಿ ಮತ್ತೆ ಸದನದಲ್ಲಿ ಮಂಡನೆ ಬಗ್ಗೆ ಸಿಎಂ ನಿರ್ಧಾರ ಪ್ರಕಟಿಸ್ತಾರೆ ಎಂದು ವಿಧಾನಸಭೆಗೆ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ರು.
ವಕ್ಫ್‌ನಿಂದ ದೇಶದ್ರೋಹಿ ಮುಖಂಡರು ಲಾಭ ಪಡೆದಿದ್ದಾರೆ
ಈ ವೇಳೆ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸರ್ಕಾರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ವಕ್ಫ್ ಅನ್ನೇ ದೇಶದಿಂದ ನಿರ್ಮೂಲನೆ ಮಾಡಬೇಕು. ವಕ್ಫ್‌ನಿಂದ ಸಾಮಾನ್ಯ ಮುಸ್ಲಿಮರಿಗೆ ಯಾವುದೇ ಲಾಭ ಇಲ್ಲ. ಇದರಿಂದ ದೇಶದ್ರೋಹಿ ಮುಖಂಡರು ಲಾಭ ಪಡೆದಿದ್ದಾರೆ ಎಂದರು. ಆಗ ಯತ್ನಾಳ್ ಹೇಳಿಕೆಗೆ ವಿಪಕ್ಷ ಉಪನಾಯಕ ಖಾದರ್ ಆಕ್ಷೇಪ ವ್ಯಕ್ತಪಡಿಸಿದ್ರು. ಈ ವೇಳೆ ಸದನದಲ್ಲಿ ಕೆಲ ಕಾಲ ಗದ್ದಲ ಸೃಷ್ಟಿಯಾಯ್ತು. ಖಾದರ್‌ರವರೇ ನಿಮ್ಮ ಹೆಸರು ವರದಿಯಲ್ಲಿ ಇಲ್ಲ, ಟೆನ್ಷನ್ ಬೇಡ. ಟೆನ್ಷನ್ ಮಾಡಿಕೊಳ್ಳಬೇಡಿ ಎಂದು ಸಚಿವ ಸುನೀಲ್ ಕುಮಾರ್ ಕಾಲೆಳೆದ್ರು. ಬಳಿಕ ಮಾತು ಮುಂದುವರಿಸಿದ ಬಿಜೆಪಿ ಶಾಸಕ ಯತ್ನಾಳ್, ಎಲ್ಲಾ ವಕ್ಫ್ ಆಸ್ತಿ ಕಂದಾಯ ಇಲಾಖೆ ವಾಪಸ್ ಪಡೆಯಬೇಕು. ರಾಜ್ಯವನ್ನು ಆಳಿದ ಅನೇಕ ಮುಖಂಡರು ಆಸ್ತಿ ಲೂಟಿ ಮಾಡಿದ್ದಾರೆ. ಈ ದೊಡ್ಡ ಹಗರಣದ ಬಗ್ಗೆ ಸಿಬಿಐ ತನಿಖೆ ಆಗಬೇಕು. ವಕ್ಫ್ ಆಸ್ತಿ ಲೂಟಿ ಹೊಡೆದವರನ್ನು ಸರ್ಕಾರ ಜೈಲಿಗೆ ಕಳಿಸಬೇಕು. ವಕ್ಫ್ ಬೋರ್ಡ್ ಅಮಾನತಿನಲ್ಲಿಡುವ ಆದೇಶ ಇಂದೇ ಸಿಎಂ ಮಾಡಲಿ ಎಂದು ವಿಧಾನಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದ್ರು. ಇದನ್ನೂ ಓದಿ: ‘ಗುಲಾಬಿ ಲಾಂಗ್ ಎರಡೂ ಇದೆ’: ‘ಲವ್ ಲಿ’ ಸಿನಿಮಾ ಬಗ್ಗೆ ವಸಿಷ್ಠ ಸಿಂಹ ಮಾಹಿತಿ
ವಕ್ಫ್ ಆಸ್ತಿ ಬಗ್ಗೆ ಮಾತನಾಡಿದ ಬಿಜೆಪಿಯವರಿಗೆ ಅಭಿನಂದಿಸುವೆ. ವಿ.ಸುನಿಲ್ ಕುಮಾರ್, ಸಂಜೀವ್ ಮಠಂದೂರು, ರಘುಪತಿ ಭಟ್, ಬಸನಗೌಡ ಪಾಟೀಲ್ ಯತ್ನಾಳ್ರನ್ನು ನಾನು ಅಭಿನಂದಿಸುತ್ತೇನೆ. ಬಿಜೆಪಿಯವರು ಹಿಂದೂ ಸಹೋದರರ ಬಗ್ಗೆ ಇಷ್ಟು ಮಾತನಾಡಲಿಲ್ಲ. ಕರಾವಳಿ ಭಾಗದ ಸಮಸ್ಯೆ, ಮೀನುಗಾರರ ಸಮಸ್ಯೆ ಬಗ್ಗೆ ಮಾತಾಡಿಲ್ಲ ಎಂದು ವಿಪಕ್ಷ ಉಪ ನಾಯಕ ಖಾದರ್ ಬಿಜೆಪಿ ಶಾಸಕರ ಬಗ್ಗೆ ಸದನದಲ್ಲಿ ನಗುತ್ತಲೇ ವ್ಯಂಗ್ಯ ಮಾಡಿದ್ರು.
ಇನ್ನು ಸದನದಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಮಾತನಾಡಿ, ಉಪ ಲೋಕಾಯುಕ್ತರ ವರದಿ ಪರಿಶೀಲಿಸಿ ತೀರ್ಮಾನಿಸುತ್ತೇವೆ. ತನಿಖೆಗೆ ತೆಗೆದುಕೊಳ್ಳಬೇಕಾ, ನಾವೇ ತನಿಖೆ ನಡೆಸಬೇಕೆಂಬ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು.
ವಕ್ಫ್ ಆಸ್ತಿ ಒತ್ತುವರಿ ಕುರಿತ ಸಂಪೂರ್ಣ ವರದಿ ಸದನದಲ್ಲಿ ಮಂಡಿಸ್ತೇವೆ
ವಕ್ಫ್ ಆಸ್ತಿ ಒತ್ತುವರಿ ಕುರಿತ ಸಂಪೂರ್ಣ ವರದಿ ಸದನದಲ್ಲಿ ಮಂಡಿಸ್ತೇವೆ ಎಂದು ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಕಾನೂನು ಉಲ್ಲಂಘನೆ ಹೇಗಾಯ್ತು ಎಂದು ಜನರಿಗೆ ಗೊತ್ತಾಗಬೇಕು. ಉಪ ಲೋಕಾಯುಕ್ತರ ವರದಿಯನ್ನು ಪರಿಶೀಲನೆ ಮಾಡುತ್ತೇವೆ. ಕಾನೂನು ಕ್ರಮದ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತೆ. ವಕ್ಫ್ ಆಸ್ತಿ ಒತ್ತುವರಿ ಕುರಿತ ವರದಿಯನ್ನ ಸದನದಲ್ಲಿ ಮಂಡಿಸುತ್ತೇವೆ ಎಂದರು. ಇದನ್ನೂ ಓದಿ: ನಾವು ಹೊರಗೆ ಹಿಜಾಬ್ ಅನ್ನು ನಿಷೇಧಿಸಿಲ್ಲ, ನಿರ್ಬಂಧ ಇರುವುದು ತರಗತಿಯಲ್ಲಿ ಮಾತ್ರ: ಸುಪ್ರೀಂನಲ್ಲಿ ಕರ್ನಾಟಕ ಸರ್ಕಾರ
ಬೆಂಗಳೂರಿನಲ್ಲಿ ವಕ್ಫ್ ಆಸ್ತಿ ಈಗ ಯಾರ್ಯಾರ ಹೆಸರಿನಲ್ಲಿ ಇದೆ? ವಿಂಡ್ಸರ್ ಮ್ಯಾನರ್ ಹೋಟೆಲ್ ಯಾರ ಹೆಸರಲ್ಲಿ ನೋಂದಣಿ ಆಗಿದೆ? ಈ ಬಗ್ಗೆ ಯಾರಾದರೂ ಮಾತನಾಡಿದ್ದೀರಾ ಅಥವಾ ಹೇಳಿದ್ದಾರಾ? ಎಂದು ಖಾದರ್ಗೆ ಸರ್ಕಾರಿ ಮುಖ್ಯ ಸಚೇತಕ ಸತೀಶ್ ರೆಡ್ಡಿ ಪ್ರಶ್ನೆ ಮಾಡಿದ್ರು. ನಿಮ್ಮ 40% ಕಮಿಷನ್ ಆರೋಪ ಮುಚ್ಚಿಹಾಕಲು ವಿಧಾನಸಭೆಯಲ್ಲಿ ವಕ್ಫ್ ಆಸ್ತಿ ಬಗ್ಗೆ ಚರ್ಚೆ ಮುಂದಾಗಿದ್ದೀರ ಎಂದು ಖಾದರ್ ವಾಗ್ದಾಳಿ ಮಾಡುದ್ರು. ಆಗ ವಿಷಯಾಂತರ ಮಾಡದಂತೆ ಯು.ಟಿ.ಖಾದರ್ಗೆ ಸ್ಪೀಕರ್ ಸೂಚನೆ ನೀಡಿದ್ರು.
40 ಪರ್ಸೆಂಟ್ ಕಮಿಷನ್ ಬಗ್ಗೆ ನಾಳೆ ಬೆಳಗ್ಗೆಯೇ ಚರ್ಚೆಗೆ ಸಿದ್ಧರಿದ್ದೇವೆ. ಅದರಲ್ಲಿ ಯಾರ್ಯಾರ ಹೆಸರು ಬರುತ್ತೆ ಎಂದು ನೀವೇ ಕಾದು ನೋಡಿ. ವಕ್ಫ್ ಆಸ್ತಿ ಎಂದರೆ ಅದು ಸರ್ಕಾರದ ಆಸ್ತಿ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ರು. ಆಗ ಆಸ್ತಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ, ಕಬ್ಜಾ ಮಾಡಿಕೊಂಡಿದ್ದಾರೆ. ಇದಕ್ಕಿಂತ ದೊಡ್ಡ ಭ್ರಷ್ಟಾಚಾರ ಯಾವುದು ಇದೆ ಎಂದು ಖಾದರ್ ಪ್ರಶ್ನೆ ಮಾಡುದ್ರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:06 pm, Wed, 21 September 22