ಮಹಿಳೆ ಮೇಲೆ ಸಾಕು ನಾಯಿ ದಾಳಿ: ಚಿಕಿತ್ಸಾ ವೆಚ್ಚ ಭರಿಸದೇ ನಿರ್ಲಕ್ಷ ಆರೋಪ, ದೂರು ದಾಖಲು
ಸಾಕು ನಾಯಿಯೊಂದು ಮಹಿಳೆ ಮೇಲೆ ದಾಳಿ ಮಾಡಿರುವಂತಹ ಘಟನೆ ನಗರದಲ್ಲಿ ಜೂನ್ 13 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಚಿಕಿತ್ಸೆಗೆ ಹಣ ಭರಿಸುವಂತೆ ರಾಜಣ್ಣ ಮನೆಯವರನ್ನು ಸಂಪರ್ಕ ಮಾಡಿ ಪರಿಪರಿಯಾಗಿ ಬೇಡಿಕೊಂಡರು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಲಾಗಿದೆ. ಹಾಗಾಗಿ ಮಹಿಳೆ ದೂರು ನೀಡಿದ್ದಾರೆ.
ಬೆಂಗಳೂರು: ಬೆಳಿಗ್ಗೆ ವಾಕಿಂಗ್ ಹೋದ ಸಂದರ್ಭದಲ್ಲಿ ಸಾಕು ನಾಯಿ (Pet dog) ಮಹಿಳೆ ಮೇಲೆ ದಾಳಿ ಮಾಡಿರುವಂತಹ ಘಟನೆ ನಗರದಲ್ಲಿ ಜೂನ್ 13 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರು ನಗರದ ಕೊತ್ತನೂರು ನಿವಾಸಿ ಪುಷ್ಪಾ ನಾಯಿ ದಾಳಿಗೆ ಒಳಗಾದವರು. ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಸದ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಜೂನ್ 13ರ ಬೆಳಿಗ್ಗೆ ವಾಕಿಂಗ್‌ಗೆ ಹೋದ ವೇಳೆ ಹೆಚ್‌ಎಂಟಿ ರಾಜಣ್ಣ ಎಂಬುವವರ ಸಾಕು ನಾಯಿ ಏಕಾಏಕಿ ದಾಳಿ ಮಾಡಿದೆ. ನಾಯಿ ಕಚ್ಚಿದ ಪರಿಣಾಮ ಪುಷ್ಪಾರ ಬಲಗಾಲು ಸೇರಿದಂತೆ ಬೆನ್ನಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡ ಪುಷ್ಪಾರನ್ನ ರಾಜಣ್ಣ ಮಕ್ಕಳಾದ ಗಾಯತ್ರಿ ಮತ್ತು ಬಾಬು ವಿಕ್ಟೋರಿಯಾ ಆಸ್ಪತ್ರೆಯಲ್ಲಿ 3 ದಿನ ಚಿಕಿತ್ಸೆ ಕೊಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಡೆಂಗ್ಯೂ ಏರಿಕೆ: ಕಳೆದ 11 ದಿನಗಳಲ್ಲಿ 178 ಪ್ರಕರಣಗಳು ಪತ್ತೆ
ಆಸ್ಪತ್ರೆಗೆ ದಾಖಲಾದಾಗ 3 ತಿಂಗಳು ವಿಶ್ರಾಂತಿ ಪಡೆಯುವಂತೆ ಪುಷ್ಪಾಗೆ ಡಾಕ್ಟರ್ಸ್ ಸಲಹೆ ನೀಡಿದ್ದಾರೆ. ಈ ವೇಳೆ ಕೂಲಿ ಕೆಲಸ ಮಾಡಿ ಜೀವನ ಮಾಡುತ್ತಿರುವ ನನಗೆ ಚಿಕಿತ್ಸೆ ಹಾಗೂ ಜೀವನ ನಿರ್ವಹಣೆಗೆ ತಿಂಗಳಿಗೆ 25 ಸಾವಿರ ರೂಪಾಯಿಯಂತೆ 3 ತಿಂಗಳು ಕೊಡುವಂತೆ ಮನವಿ ಮಾಡಿದ್ದಾರೆ. ಪುಷ್ಪಾರ ಮನವಿಯನ್ನು ರಾಜಣ್ಣನ ಮಕ್ಕಳು ಒಪ್ಪಿಕೊಂಡಿದ್ದಾರೆ. ಆದರೆ ಹಣ ಕೇಳಲು ಫೋನ್ ಕರೆ ಮಾಡಿದಾಗ ರಾಜಣ್ಣ ಕುಟುಂಬಸ್ಥರು ಉಢಾಪೆ ಉತ್ತರ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಗಂಭೀರ ಗಾಯವಾಗಿದ್ದರಿಂದ ಕೀವು ಕಟ್ಟಿ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಪುಷ್ಪಾ ತೆರಳಿದ್ದಾರೆ. ಈ ವೇಳೆ ಪ್ಲಾಸ್ಟಿಕ್ ಸರ್ಜರಿ ಮಾಡಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಚಿಕಿತ್ಸೆಗೆ ಹಣ ಭರಿಸುವ ಶಕ್ತಿ ಇಲ್ಲದೇ ಹಣ ಭರಿಸುವಂತೆ ರಾಜಣ್ಣ ಮನೆಯವರನ್ನು ಸಂಪರ್ಕ ಮಾಡಿ ಪರಿಪರಿಯಾಗಿ ಬೇಡಿಕೊಂಡರು ನಿರ್ಲಕ್ಷಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ರೇಬಿಸ್ ರೋಗ ತಡೆಗಟ್ಟಲು ಬಿಬಿಎಂಪಿ ವ್ಯಾಪ್ತಿಯ ಬೀದಿ ನಾಯಿಗಳ ಸಮೀಕ್ಷೆ
ನಾಯಿ ದಾಳಿಗೆ ಕಾರಣರಾದ ರಾಜಣ್ಣ ಕುಟುಂಬಸ್ಥರು ಚಿಕಿತ್ಸಾ ವೆಚ್ಚ ಭರಿಸಿಸುವುದಾಗಿ ಹೇಳಿ ಠಾಣೆಗೆ ದೂರು ಕೊಡದಂತೆ ಮನವಿ ಮಾಡಿದ್ದರು. ಇದೀಗ ಚಿಕಿತ್ಸಾ ವೆಚ್ಚ ಭರಿಸದೇ ಉಢಾಫೆ ಉತ್ತರ ಕೊಡುತ್ತಿರುವ ರಾಜಣ್ಣ ಕುಟುಂಬಸ್ಥರಾದ ಬಾಬು, ಗಾಯತ್ರಿ ಮೇಲೆ ಕ್ರಮ ಜರಗಿಸುವಂತೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪುಷ್ಪಾರಿಂದ ದೂರು ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:29 pm, Fri, 14 July 23