ಗಣೇಶ ಪ್ರತಿಷ್ಠಾಪನೆಗೆ ಬಿಬಿಎಂಪಿಯ ಏಕಗವಾಕ್ಷಿ ಅನುಮತಿ ಕಡ್ಡಾಯ : ಆಯೋಜಕರಿಗೆ ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿ

| Updated By: ವಿವೇಕ ಬಿರಾದಾರ

Updated on: Aug 27, 2022 | 7:23 PM

ಬೆಂಗಳೂರಿನಲ್ಲಿ ಗಣೇಶೋತ್ಸವ ಆಚರಣೆಗೆ ಪೊಲೀಸ್ ಇಲಾಖೆ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಗಣೇಶ ಪ್ರತಿಷ್ಠಾಪನೆಗೆ  ಬಿಬಿಎಂಪಿಯ ಏಕಗವಾಕ್ಷಿ ಅನುಮತಿ ಕಡ್ಡಾಯ : ಆಯೋಜಕರಿಗೆ ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿ
ಗಣೇಶ ಚತುರ್ಥಿ
Follow us on

ಬೆಂಗಳೂರು: ಬೆಂಗಳೂರಿನಲ್ಲಿ ಗಣೇಶೋತ್ಸವ ಆಚರಣೆಗೆ ಪೊಲೀಸ್ ಇಲಾಖೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆಯೋಜಕರು ಗಣೇಶ ಪ್ರತಿಷ್ಟಾಪನೆಗೆ ಬಿಬಿಎಂಪಿಯ ಏಕಗವಾಕ್ಷಿ ಅನುಮತಿಯನ್ನು ಕಡ್ಡಾಯವಾಗಿ ಪಡೆದಿರಬೇಕು. ಮೂರ್ತಿ ಪ್ರತಿಷ್ಟಾಪನೆ ಸ್ಥಳದಲ್ಲಿ ಸದೃಡವಾಗಿ ಚಪ್ಪರ ಅಥವಾ ಶಾಮಿಯಾನ ಹಾಕತಕ್ಕದ್ದು ಎಂದು ತಿಳಿಸಿದೆ.

ಮಾರ್ಗಸೂಚಿಗಳು

1. ಶಾಮಿಯಾನ ಹೊರತುಪಡಿಸಿ ಬೇರೆಡೆ ಬ್ಯಾನರ್ ಬಂಟಿಂಗ್ಸ್ ಹಾಕಲು ಬಿಬಿಎಂಪಿ ಅನುಮತಿ ಕಡ್ಡಾಯ.

2. ವಿವಾದಿತ ಸ್ಥಳದಲ್ಲಿ ಮೂರ್ತಿ ಪ್ರತಿಷ್ಟಾಪನೆ ಮಾಡುವಂತಿಲ್ಲ.

3.  ಆಯೋಜಕರ ಪರವಾಗಿ ಕಾರ್ಯಕರ್ತರು 24 ಗಂಟೆಯೂ ಮೇಲ್ವಿಚಾರಣೆ ನೋಡಿಕೊಳ್ಳತಕ್ಕದ್ದು.

4. ಮೇಲ್ವಿಚಾರಣೆ ನೋಡಿಕೊಳ್ಳುವವರ ಮಾಹಿತಿಯನ್ನ ಪೊಲೀಸ್ ಠಾಣೆಗೆ ನೀಡಬೇಕು.

5. ಮೂರ್ತಿ ಪ್ರತಿಷ್ಠಾಪಿಸುವ ಸ್ಥಳದಲ್ಲಿ ಬಿಬಿಎಂಪಿ ಸುತ್ತೋಲೆಯಂತೆ ಸಿಸಿಟಿವಿ ಅಳವಡಿದತಕ್ಕದ್ದು.

6. ಸ್ಥಳದಲ್ಲಿ ಅಗ್ನಿ ನಂದಕಗಳು, ನೀರು ಅಥವಾ ಮರಳಿನ ವ್ಯವಸ್ಥೆ ಇರತಕ್ಕದ್ದು.

7. ಸುತ್ತಮುತ್ತ ಕಟ್ಟಿಗೆ, ಉರುವಲು, ಸೀಮೆಎಣ್ಣೆ ಇರದಂತೆ ಎಚ್ಚರ ವಹಿಸತಕ್ಕದ್ದು.

8. ಮೂರ್ತಿ ಪ್ರತಿಷ್ಟಾಪನೆ ಸ್ಥಳದಲ್ಲಿ ಓರ್ವ ಎಲೆಕ್ಟ್ರಿಶಿಯನ್ ಇರತಕ್ಕದ್ದು.

9. ಸಮರ್ಪಕವಾಗಿ ಬೆಳಕು ಹಾಗೂ ವಿದ್ಯುತ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು.

10. ಮೂರ್ತಿ ಪ್ರತಿಷ್ಟಾಪನೆ ಸ್ಥಳದಲ್ಲಿ ಆಗಮನ ನಿರ್ಗಮನ ವ್ಯವಸ್ಥೆ ಸೂಕ್ತವಾಗಿರಬೇಕು.

11. ಬ್ಯಾರಿಕೇಡ್ ಅಳವಡಿಸಿ ಸ್ವಯಂ ಸೇವಕರನ್ನ ಸ್ಥಳದಲ್ಲಿ‌ ನಿಯೋಜಿಸತಕ್ಕದ್ದು.

12.  ಮೆರವಣಿಗೆ ಸಂದರ್ಭದಲ್ಲಿ ಅಹಿತಕರ ಘಟನೆಗಳಾಗದಂತೆ ಆಯೋಜಕರು ಎಚ್ಚರ ವಹಿಸಬೇಕು.

13. ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಮಾತ್ರ ಧ್ವನಿವರ್ಧಕ ಬಳಕೆಗೆ ಅವಕಾಶ ನೀಡಲಾಗಿದೆ.

14. ಆಯೋಜಕರು, ಅಧ್ಯಕ್ಷರು, ಪದಾಧಿಕಾರಿಗಳ ಹೆಸರು, ವಿಳಾಸ, ನಂಬರನ್ನು ಸ್ಥಳಿಯ ಠಾಣೆಗೆ ನೀಡಬೇಕು.

15. ಆಯೋಜಕರು, ಅಧ್ಯಕ್ಷರು, ಪದಾಧಿಕಾರಿಗಳ ಹೆಸರು, ವಿಳಾಸ, ನಂಬರನ್ನು ಸ್ಥಳದಲ್ಲಿ ಪ್ರದರ್ಶಿಸತಕ್ಕದ್ದು.

16. ಲೇಸರ್ ಪ್ರೊಜೆಕ್ಷನ್ ಮಾಡಲು ಅವಕಾಶವಿಲ್ಲ.

17. ಸೂಕ್ಷ್ಮ, ಅತಿಸೂಕ್ಷ್ಮ ಸ್ಥಳಗಳಲ್ಲಿ ಮೆರವಣಿಗೆ ಸಾಗುವಾಗ ಸಿಡಿಮದ್ದು, ಪಟಾಕಿಗಳನ್ನ ಸಿಡಿಸುವಂತಿಲ್ಲ.

18. ಕಾರ್ಯಕ್ರಮ ಆಯೋಜನೆಗಾಗಿ ಬಲವಂತದ ವಂತಿಗೆ ವಸೂಲಿ ಮಾಡಿದರೆ ಕಠಿಣ ಕಾನೂನು ಕ್ರಮ ತಗೆದುಕೊಳ್ಳಲಾಗುವುದು.

19. ಆಯೋಜಕರು, ಕಾರ್ಯಕರ್ತರನ್ನು ಗುರುತಿಸಲು ಅನುಕೂಲವಾಗುವಂತೆ ಶರ್ಟ್ ಅಥವಾ ಕ್ಯಾಪ್ ಧರಿಸಿರಬೇಕು.

20. ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಕಡೆ ಪೊಲೀಸರಿಗೆ ಮಾಹಿತಿ‌ ನೀಡಿ ಭದ್ರತೆ ಪಡೆಯಬೇಕು.

21. ವಿಸರ್ಜನಾ ಮೆರವಣಿಗೆ ನಿಗದಿತ ಸಂದರ್ಭದಲ್ಲಿ ನಡೆಯತಕ್ಕದ್ದು.

22.  ಮೆರವಣಿಗೆ ಸಂದರ್ಭದಲ್ಲಿ ವಿದ್ಯುತ್ ತಂತಿ, ಮರದ ಕೊಂಬೆಗಳ ಬಗ್ಗೆ ಸೂಕ್ತ ಎಚ್ಚರ ವಹಿಸಬೇಕು.

ನಗರದಲ್ಲಿ ಗಣೇಶೋತ್ಸವ ಆಚರಣೆ ವಿಚಾರವಾಗಿ ನಗರದ ಎಲ್ಲಾ ಡಿಸಿಪಿಗಳ ಜೊತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಚಾಮರಾಜಪೇಟೆ ಮೈದಾನ, ಗಣೇಶೋತ್ಸವ ಭದ್ರತೆ ಬಗ್ಗೆ ಚರ್ಚೆ‌ ಮಾಡಿದ್ದಾರೆ.

ಸಭೆ ಬಳಿಕ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಮಾತನಾಡಿ ಎರಡು ವರ್ಷಗಳ ನಂತರ ನಗರದಲ್ಲಿ ಸಾರ್ವಜನಿಕ ಗಣೆಶೋತ್ಸವ ನಡೆಯುತ್ತಿದೆ. ಭದ್ರತೆ ವಿಚಾರವಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಈದ್ಗಾ ಮೈದಾನದಲ್ಲಿ ಉತ್ಸವ ಆಚರಣೆ ನಿರ್ಧಾರ ಸರ್ಕಾರದ್ದು. ಈ ವಿಚಾರವಾಗಿ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.ಸರ್ಕಾರದ ನಿರ್ಣಯವನ್ನ ಆಧರಿಸಿ ಈದ್ಗಾ ಮೈದಾನದ ಭದ್ರತೆ ಬಗ್ಗೆ ತೀರ್ಮಾನಿಸುತ್ತೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:23 pm, Sat, 27 August 22