AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತದಾರರ ಮಾಹಿತಿ ಕಳವು: ಮತ್ತಿಬ್ಬರು ಅರೆಸ್ಟ್, ಪೊಲೀಸ್ ತನಿಖೆಯ ಮಾಹಿತಿ ಪಡೆದ ಪ್ರಾದೇಶಿಕ ಆಯುಕ್ತರು

ಚಿಲುಮೆ ಸಂಸ್ಥೆಯ ಮತ್ತಿಬ್ಬರು ನೌಕರರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಸೂಚನೆ ಮೇರೆಗೆ ಮತದಾರರ ಮಾಹಿತಿ ಕಲೆ ಹಾಕುವಲ್ಲಿ ಈ ಆರೋಪಿಗಳು ಪ್ರಮುಖ ಪಾತ್ರವಹಿಸಿದ್ದರು.

ಮತದಾರರ ಮಾಹಿತಿ ಕಳವು: ಮತ್ತಿಬ್ಬರು ಅರೆಸ್ಟ್, ಪೊಲೀಸ್ ತನಿಖೆಯ ಮಾಹಿತಿ ಪಡೆದ ಪ್ರಾದೇಶಿಕ ಆಯುಕ್ತರು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Dec 01, 2022 | 10:10 AM

Share

ಬೆಂಗಳೂರು: ಚಿಲುಮೆ ಸಂಸ್ಥೆಯಿಂದ ಮತದಾರರ ಮಾಹಿತಿ ಕಳವು(Voters Data Theft Case) ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆಯ ಮತ್ತಿಬ್ಬರು ನೌಕರರನ್ನು ಹಲಸೂರು ಗೇಟ್ ಠಾಣೆ ಪೊಲೀಸರು(Halasuru Gate Police Station) ಬುಧವಾರ ಬಂಧಿಸಿದ್ದಾರೆ. ಮಲ್ಲೇಶ್ವರ ದೋಬಿಘಾಟ್ ನಿವಾಸಿಗಳಾದ ಮಾರುತಿ ಗೌಡ ಮತ್ತು ಅಭಿಷೇಕ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಸೂಚನೆ ಮೇರೆಗೆ ಮತದಾರರ ಮಾಹಿತಿ ಕಲೆ ಹಾಕುವಲ್ಲಿ ಈ ಇಬ್ಬರು ಆರೋಪಿಗಳು ಪ್ರಮುಖ ಪಾತ್ರವಹಿಸಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು ಮತ್ತೊಂದೆಡೆ ಇಂದು ವಿಚಾರಣೆಗೆ ಹಾಜರಾಗುವಂತೆ ಹಲಸೂರು ಗೇಟ್ ಪೊಲೀಸರು ಐಎಎಸ್ ಅಧಿಕಾರಿಗಳಾದ ರಂಗಪ್ಪ ಮತ್ತು ಶ್ರೀನಿವಾಸ್ ಗೆ ನೋಟಿಸ್ ನೀಡಿದ್ದಾರೆ. ಆಡಳಿತ ಮತ್ತು ಚುನಾವಣಾ ವಿಭಾಗದ ವಿಶೇಷ ಆಯುಕ್ತ, ಶಿವಾಜಿನಗರ ಮತ್ತು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಯೂ ಆಗಿದ್ದ ರಂಗಪ್ಪ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ, ಮಹದೇವಪುರ ಕ್ಷೇತ್ರದ ಉಸ್ತುವಾರಿಯಾಗಿದ್ದ ಶ್ರೀನಿವಾಸ್ ಅವರಿಗೆ ವಿಚಾರಣೆಗೆ ಕರೆಯಲಾಗಿದ್ದು ಅಧಿಕಾರಿಗಳು ವಿಚಾರಣೆಗೆ ಹಾಜರಾಗುತ್ತಾರ ಎಂಬ ಶಂಕೆ ವ್ಯಕ್ತವಾಗಿದೆ.

ಪೊಲೀಸ್ ತನಿಖೆಯ ಮಾಹಿತಿ ಪಡೆದ ಪ್ರಾದೇಶಿಕ ಆಯುಕ್ತರು

ಬೆಂಗಳೂರು ವಿಭಾಗ ಪ್ರಾದೇಶಿಕ ಆಯುಕ್ತರು ಹಾಗೂ ಬಿಬಿಎಂಪಿ ಎಸ್ಎಸ್ಆರ್​ನ ಸೂಪರ್ ವೈಸರ್ ಆಗಿರುವ ಆದಿತ್ಯ ಆಮ್ಲಾನ್ ಬಿಸ್ವಾಸ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಪ್ರಕರಣದ ಮಾಹಿತಿ ಪಡೆದಿದ್ದಾರೆ. ಪ್ರಕರಣದಲ್ಲಿ ಈವರೆಗೆ ಎಷ್ಟು ಬಂಧನವಾಗಿದೆ, ಆರ್​ಓಗಳ ಪಾತ್ರ ಏನು? ಎಷ್ಟು ಬಿಎಲ್ಓ ಕಾರ್ಡ್ ವಿತರಣೆಯಾಗಿದೆ. ಪೊಲೀಸ್ ತನಿಖೆ ವೇಳೆ ಪತ್ತೆಯಾದ ಸಾಕ್ಷ್ಯಾಧಾರಗಳು ಹಾಗೂ ಮುಂದಿನ ಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಇದನ್ನೂ ಓದಿ: ಮೈಸೂರು: ಮತದಾರರ ಪಟ್ಟಿಯಿಂದ 1.20 ಲಕ್ಷ ಹೆಸರುಗಳನ್ನು ಕೈಬಿಟ್ಟ ಜಿಲ್ಲಾಡಳಿತ; ಆಕ್ಷೇಪಕ್ಕೆ ಡಿ 12 ಕೊನೆಯ ದಿನ

ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸಗೌಡ ಹಾಗೂ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಬಳಿ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಇನ್ನೊಂದೆಡೆ ಇದೇ ವಿಚಾರವಾಗಿ ಚುನಾವಣಾ ಆಯೋಗ ತನಿಖೆ ನಡೆಸುತ್ತಿದೆ. ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಪೊಲೀಸ್ ಇಲಾಖೆಯಿಂದಲೂ ಕೇಸ್ ವಿವರ ಪಡೆದು ತನಿಖೆ ನಡೆಸಲಾಗುತ್ತಿದೆ. ಪೊಲೀಸ್ ತನಿಖೆಯಲ್ಲಿ ಬಿಎಲ್ಓ ಕಾರ್ಡ್ ವಿತರಣೆಯಲ್ಲಿ ಲೋಪ ಎಸಗಿರುವುದು ಬೆಳಕಿಗೆ ಬಂದಿತ್ತು. ಅದ್ರಿಂದ ಬಿಎಲ್ಓ ಕಾರ್ಡ್ ವಿತರಣೆ ಬಗ್ಗೆ ಹಲಸೂರು ಗೇಟ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಸುಮಾರು 45 ಆರ್​ಓಗಳು, ಎಆರ್​ಓಗಳ ವಿಚಾರಣೆ ನಡೆಸಲಾಗಿದೆ.

ಸದ್ಯ ಈಗ ಅಮಾನತುಗೊಂಡ ಇಬ್ಬರು ಅಧಿಕಾರಿಗಳ ವಿಚಾರಣೆಗೆ ಪೊಲೀಸರು ಮುಂದಾಗಿದ್ದಾರೆ. ರಂಗಪ್ಪ ಮತ್ತು ಶ್ರೀನಿವಾಸ್ ವಿಚಾರಣೆ ಇಂದು ನಡೆಯಲಿದೆ. ಈಗಾಗಲೇ ವಿಚಾರಣೆಗೆ ಹಾಜರಾಗಲು ಇಬ್ಬರಿಗೂ ನೋಟಿಸ್ ನೀಡಲಾಗಿದೆ.