ಪೂಜಾ ದತ್ತ ಸಾವಿಗೆ ಕಾರಣ ಇನ್ನೂ ನಿಗೂಢ: ಮರಣೋತ್ತರ ಪರೀಕ್ಷೆ ವರದಿಯಲ್ಲೂ ಇಲ್ಲ ಸ್ಪಷ್ಟತೆ

ಬೆಂಗಳೂರಿನಲ್ಲಿ 34 ವರ್ಷದ ಖಾಸಗಿ ಕಂಪನಿ ಉದ್ಯೋಗಿ ಪೂಜಾ ದತ್ತ ಅವರ ನಿಗೂಢ ಸಾವಿನ ತನಿಖೆಯೇ ಸವಾಲಾಗಿ ಪರಿಣಮಿಸಿದೆ. ಆಡುಗೋಡಿ ಬಾಡಿಗೆ ಮನೆಯಲ್ಲಿ ಅರೆಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮೃತದೇಹದ ಮರಣೋತ್ತರ ವರದಿಯಲ್ಲೂ ಸಾವಿಗೆ ಸ್ಪಷ್ಟ ಕಾರಣ ಸಿಕ್ಕಿಲ್ಲ. ಈ ನಡುವೆ ಪೊಲೀಸರು ಆಕೆಯ ಹಣಕಾಸು ಮೂಲ ಮತ್ತು ಮೊಬೈಲ್ ಕರೆಗಳ ಬಗ್ಗೆ ತನಿಖೆ ನಡೆಸುತ್ತಿದ್ದು, FSL ವರದಿಗಾಗಿ ಕಾಯುತ್ತಿದ್ದಾರೆ.

ಪೂಜಾ ದತ್ತ ಸಾವಿಗೆ ಕಾರಣ ಇನ್ನೂ ನಿಗೂಢ: ಮರಣೋತ್ತರ ಪರೀಕ್ಷೆ ವರದಿಯಲ್ಲೂ ಇಲ್ಲ ಸ್ಪಷ್ಟತೆ
ಮೃತ ಪೂಜಾ ದತ್ತ
Image Credit source: Tv9 Kannada
Edited By:

Updated on: May 07, 2026 | 11:37 AM

ಬೆಂಗಳೂರು, ಮೇ 07: ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ 34 ವರ್ಷದ ಪೂಜಾ ದತ್ತ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆಕೆಯ ಸಾವಿನ ಹಿಂದಿನ ಅಸಲೀ ಕಾರಣ ಏನೆಂದು ಪತ್ತೆ ಮಾಡುವುದೇ ಈಗ ಸವಾಲಿನ ಕೆಲಸವಾಗಿದೆ. ಪೂಜಾ ಸಾವು ಹೇಗಾಯ್ತು ಎಂಬುವುದು ಇನ್ನೂ ನಿಗೂಢವಾಗಿಯೇ ಉಳಿದಿದ್ದು, ಮರಣೋತ್ತರ ಪರೀಕ್ಷೆಯ ವರದಿಯಲ್ಲಿಯೂ ಈ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ ಎನ್ನಲಾಗಿದೆ. ಹೀಗಾಗಿ ಪೂಜಾದ್ದು ಆತ್ಮಹತ್ಯೆಯೋ? ಅಥವಾ ಯಾವುದಾದರೂ ಕಾಯಿಲೆಯಿಂದ ಮೃತಪಟ್ಟರಾ ಎಂಬ ಪ್ರಶ್ನೆಗಳೀಗ ಉದ್ಭವಿಸಿವೆ. ಇನ್ನು ಸಾವಿನ ಕಾರಣ ಪತ್ತೆ ಸಂಬಂಧ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ನಿಖರ ಮಾಹಿತಿ ಸಿಗದ ಕಾರಣ, ದೇಹದ ಮಾದರಿಗಳನ್ನು ಎಫ್​​ಎಸ್​​ಎಲ್​​ಗೆ ಕಳುಹಿಸಲಾಗಿದೆ.

  • ಆಡುಗೋಡಿಯಲ್ಲಿ ಪೂಜಾ ದತ್ತ ಅನುಮಾನಾಸ್ಪದ ಸಾವು ಪ್ರಕರಣ
  • ಖಾಸಗಿ ಕಂಪನಿ ಉದ್ಯೋಗಿ ಸಾವಿಗೆ ಕಾರಣ ಏನೆಂಬುದೇ ನಿಗೂಢ
  • ಮರಣೋತ್ತರ ಪರೀಕ್ಷೆ ವರದಿಯಲ್ಲೂ ಸಿಕ್ಕಿಲ್ಲವಂತೆ ಸ್ಪಷ್ಟ ಕಾರಣ

ಇದನ್ನೂ ಓದಿ: ಯುವತಿಯ ಬೆತ್ತಲೆ ಮೃತದೇಹ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಮನೆ ಮಾಲಕಿ ಸ್ಫೋಟಕ ಹೇಳಿಕೆ

ಹಣದ ಮೂಲ ಹುಡುಕುತ್ತಿರುವ ಪೊಲೀಸರು

ಇನ್ನು ಪೂಜಾ ದತ್ತ ಮೂರು ತಿಂಗಳಿನಿಂದ ಹೊರಗಡೆ ಅಷ್ಟು ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಏನೂ ಕೆಲಸ ಮಾಡದೇ ಇದ್ದರೂ ಆಕೆ ಖರ್ಚನ್ನು ಹೇಗೆ ನಿಭಾಯಿಸುತ್ತಿದ್ದಳು ಎಂಬ ಪ್ರಶ್ನೆ ಹಿನ್ನೆಲೆ ಆಕೆಯ ಹಣದ ಮೂಲದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಂಪನಿ ಬಿಡುವಾಗ ಅಕೆಗೆ ಬಂದ ಹಣ ಎಷ್ಟು ಎಂಬ ಕುರಿತು ಹೆಚ್​​ಆರ್​​ಗಳ ಮೂಲಕ ಮಾಹಿತಿ ಪಡೆಯಲು ಖಾಕಿ ಮುಂದಾಗಿದೆ. ಆಕೆಯ ಬ್ಯಾಂಕ್ ಖಾತೆಗಳ ಮಾಹಿತಿ ಪಡೆಯುತ್ತಿರುವ ಜೊತೆಗೆ, ಮೊಬೈಲ್​​ನಲ್ಲಿನ ಸರ್ಚ್​​ ಹಿಸ್ಟರಿ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ. ಸ್ನೇಹಿತರಿಂದ ಏನಾದರೂ ಆಕೆ ಹಣ ಪಡೆದಿದ್ದಳಾ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಮೂಲತಃ ಜಾರ್ಖಂಡ್‌ನ ಧನಬಾದ್ ಸಮೀಪದ ಹಿರಾಪುರ ನಿವಾಸಿಯಾಗಿದ್ದ ಪೂಜಾ ದತ್ತ ಮೃತದೇಹ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಕೆ ವಾಸವಿದ್ದ ಬಾಡಿಗೆ ಮನೆಯಲ್ಲಿಯೇ ಪತ್ತೆಯಾಗಿತ್ತು. ಮನೆಯಿಂದ ಭಾರಿ ದುರ್ನಾತ ಬರುತ್ತಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಬಂದು ಬಾಗಿಲು ಮುರಿದು ನೋಡಿದಾಗ ಸಂಪೂರ್ಣವಾಗಿ ಬೆತ್ತಲೆ ಮತ್ತು ಅರೆಕೊಳೆತ ಸ್ಥಿತಿ ಪೂಜಾ ಮೃತದೇಹ ಕಂಡುಬಂದಿತ್ತು. ಮೃತದೇಹ ಸಂಪೂರ್ಣ ಕೊಳೆತು ಹೋಗಿದ್ದರಿಂದ ಸಾವು ಸಂಭವಿಸಿ ಕನಿಷ್ಠ 2-3 ದಿನಗಳು ಕಳೆದಿರಬಹುದು ಎಂದು ಶಂಕಿಸಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:36 am, Thu, 7 May 26

Loading...
Unable to load recommendations.
Follow Us