Praveen Nettaru: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂತಾಪ ಸೂಚಿಸಿದ ರಾಜ್ಯ ನಾಯಕರು

ರಾಜ್ಯದಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಕಿಚ್ಚು ಹೊತ್ತುಕೊಂಡಿದೆ. ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಮೃತ ಪ್ರವೀಣ್ ನೆಟ್ಟಾರು ಕುಟುಂಬಗಳಿಗೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.

Praveen Nettaru: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂತಾಪ ಸೂಚಿಸಿದ ರಾಜ್ಯ ನಾಯಕರು
ಸಚಿವ ಸುನಿಲ್ ಕುಮಾರ್, ಮೃತ ಪ್ರವೀಣ್ ನೆಟ್ಟಾರು, ಮಾಜಿ ಸಿಎಂ ಸಿದ್ಧರಾಮಯ್ಯ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jul 27, 2022 | 1:25 PM


ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆ ಪ್ರಕರಣ ಸಂಬಂಧ ಸಚಿವ ಸುನಿಲ್ ಕುಮಾರ್​ ಪ್ರತಿಕ್ರಿಯಿಸಿದ್ದು, ಪ್ರವೀಣ್ ನೆಟ್ಟಾರು ಹತ್ಯೆಯಿಂದ ನಾನು ಆಘಾತಗೊಂಡಿದ್ದೇನೆ. ಪ್ರವೀಣ್​ ನೆಟ್ಟಾರು ಮತಾಂಧರ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ. ಪ್ರವೀಣ್ ಕುಟುಂಬದ ಜತೆ ಸರ್ಕಾರ ಹಾಗೂ ಸಮಾಜ ಇರುತ್ತೆ. ಹಿಂದೂಗಳ ಒಗ್ಗಟ್ಟು ಒಡೆಯಲು ಮತಾಂಧಶಕ್ತಿಗಳಿಂದ ಇಂಥ ಕೃತ್ಯ ಮಾಡಿದ್ದಾರೆ. ಇಂತಹ ಹೇಯ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಟ್ವಿಟರ್​ ಮೂಲಕ ಎಚ್ಚರಿಕೆ ನೀಡಿದ್ದಾರೆ. ಇನ್ನು ಹತ್ಯೆ ಖಂಡಿಸಿ ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದು, ಬಜರಂಗದಳದ ನಾಯಕ ಪ್ರವೀಣ್ ಹತ್ಯೆ ಖಂಡನೀಯ. ಪೊಲೀಸರು ತಕ್ಷಣ ಕೊಲೆಗಡುಕರನ್ನು ಬಂಧಿಸಬೇಕು. ಶಾಂತಿ-ಸುವ್ಯವಸ್ಥೆ ಕದಡುವುದನ್ನು ತಪ್ಪಿಸಬೇಕು. ಕೊಲೆಗಡುಕರ ಪಕ್ಷ, ಜಾತಿ, ಧರ್ಮವನ್ನು ಲೆಕ್ಕಿಸದೇ, ಪೊಲೀಸರು ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಇದನ್ನೂ ಓದಿ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಐವರು ಶಂಕಿತರು ಪೊಲೀಸರ ವಶಕ್ಕೆ

ಚಂದ್ರು, ಹರ್ಷ, ನಾಳೆ ಇನ್ಯಾರೋ ಎಂದ ಸಿ.ಟಿ.ರವಿ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ನೀಡಿದ್ದು, ಜಿಹಾದಿ ಮಾನಸಿಕತೆಗೆ ಕೊನೆ ಇಲ್ವಾ ಎಂಬ ಪ್ರಶ್ನೆ ಕಾಡುತ್ತಿದೆ. ಈ ವಿಚಾರವಾಗಿ ಸಿಎಂ ಭೇಟಿ ಮಾಡಲು ಹೋಗುತ್ತಿದ್ದೇನೆ. ಚಂದ್ರು, ಹರ್ಷ, ನಾಳೆ ಇನ್ಯಾರೋ? ನಾವು ಕೇವಲ‌ ಅಧಿಕಾರ ಮಾಡುವುದಕ್ಕೆ ಬಂದಿಲ್ಲ. ಕಾರ್ಯಕರ್ತರ ಭಾವನೆಗಳ ಜೊತೆಗೂ ನಾವಿದ್ದೇವೆ‌. ಜಿಹಾದ್ ವಿರುದ್ಧ ಹೋರಾಡಲು ವ್ಯವಸ್ಥೆ ಸಿದ್ಧಗೊಳಿಸಬೇಕು. ಜಿಹಾದ್ ಕಿತ್ತುಹಾಕಲು ನಾವು ಬದ್ಧರಿದ್ದೇವೆ ಎಂದು ಸಿ.ಟಿ.ರವಿ ಹೇಳಿದರು.

ಸರ್ಕಾರ ಸುಮ್ನೆ ಇಲ್ಲ: ಸಚಿವ ಡಾ.ಸುಧಾಕರ್

ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್​ ಪ್ರತಿಕ್ರಿಯೆ ನೀಡಿದ್ದು, ಆರೋಪಿಗಳ ಬಂಧನಕ್ಕೆ ಐದು ತಂಡ ರಚನೆ ಮಾಡಲಾಗಿದೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮಕೈಗೊಳ್ಳಲಾಗುವುದು. ಸರ್ಕಾರ ಸುಮ್ನೆ ಇಲ್ಲ, ಕೊಲೆಗಡುಕರನ್ನು ಬಂಧಿಸಲಾಗುತ್ತದೆ. ಇವೆಲ್ಲದರ ಹಿಂದೆ ಕೆಲ ಪಕ್ಷಗಳು ಬೆನ್ನೆಲುಬಾಗಿ ನಿಂತಿವೆ. NIAಯಿಂದ ಈ ಎಲ್ಲ ಕೊಲೆ ಪ್ರಕರಣಗಳ ತನಿಖೆ ಆಗಬೇಕು ಎಂದು ಸಚಿವ ಡಾ.ಸುಧಾಕರ್​ ಹೇಳಿಕೆ ನೀಡಿದರು.

ರಾಜ್ಯ ಸರ್ಕಾರದ ವಿರುದ್ಧ; ಎಂ.ಎಸ್.ಹರೀಶ್ ತೀವ್ರ ಆಕ್ರೋಶ

ಇನ್ನೂ ರಾಜ್ಯ ಸರ್ಕಾರದ ವಿರುದ್ಧ ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ಎಂ.ಎಸ್.ಹರೀಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಾಲು ಸಾಲು ಹಿಂದೂ ಕಾರ್ಯಕರ್ತರ ಕೊಲೆಗಳು ನಡೀತಿವೆ. ಕಠಿಣ ಕ್ರಮ ಕೈಗೊಳ್ತಿವಿ ಅಂತಾ ಹೇಳಿಕೊಂಡು ತಿರುಗಾಡುತ್ತಿದ್ದಾರೆ. SDPI ಬ್ಯಾನ್ ಮಾಡಬೇಕೆಂದು ಪ್ರೊಟೆಸ್ಟ್ ಮಾಡಿದ್ರಲ್ಲ ನೀವು. ರಾಜ್ಯದಲ್ಲಿ ಈಗ ನಿಮ್ಮದೇ ಸರ್ಕಾರವಿದೆ ಏನು ಮಾಡುತ್ತಿದ್ದೀರಿ. ಸಂಸದ ಪ್ರತಾಪ್ ಸಿಂಹ, ಸಿ.ಟಿ.ರವಿ ಎಲ್ಲಿದ್ದೀರಾ? ಸರ್ಕಾರ ಕಣ್ಣು ಮುಚ್ಕೊಂಡು ಕುಳಿತುಕೊಂಡಿದೆ ಎಂದು ಕಿಡಿ ಕಾರಿದರು.

ಸರಕಾರದ ಮತ್ತು ಹಿಂದುತ್ವ ವಾದಿಗಳ ದೌರ್ಬಲ್ಯವಲ್ಲ: ಸಚಿವ ಕೆ.ಎಸ್ ಈಶ್ವರಪ್ಪ

ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದು, ನಿಜಕ್ಕೂ ಇದನ್ನು ಎಲ್ಲ ರಾಜಕೀಯ ಪಕ್ಷಗಳು ಖಂಡನೆ ಮಾಡಬೇಕು. ಸಿಎಂ ಮತ್ತು ಗೃಹ ಸಚಿವರ ಕಠಿಣ ಕ್ರಮದ ಭರವಸೆ ನೀಡಿದ್ದಾರೆ. ಸರಕಾರದ ಮತ್ತು ಹಿಂದುತ್ವ ವಾದಿಗಳ ದೌರ್ಬಲ್ಯವಲ್ಲ. ಹಿಂದೂಗಳ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಮುಸ್ಲಿಂ ಗೂಂಡಾಗಳಿಗೆ ಈಶ್ವರಪ್ಪ ಎಚ್ಚರಿಕೆ ನೀಡಿದರು.
ಈ ಕುರಿತು ಸಿಎಂ ಬೊಮ್ಮಾಯಿ ಜೊತೆ ನಾಳೆ ಮಾತುಕತೆ ನಡೆಸುವೆ. ಕೊಲೆಗಡಕರ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲು ಮನವಿ ಮಾಡುತ್ತೇನೆ ಎಂದು ಹೇಳಿದರು.

ಜಿಲ್ಲಾ‌ ಯುವ ಮೋರ್ಚಾ ಘಟಕದಿಂದ ಸಾಮೂಹಿಕ ರಾಜೀನಾಮೆ

ಹತ್ಯೆ ಪ್ರಕರಣ ಸಂಬಂಧ ಸರ್ಕಾರದ ವಿರುದ್ಧ ಚಿಕ್ಕಮಗಳೂರಿನಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಆಕ್ರೋಶ ವ್ಯಕ್ತಪಡಿಸಿದ್ದು,
ಜಿಲ್ಲಾ‌ ಯುವ ಮೋರ್ಚಾ ಘಟಕದಿಂದ ಸಾಮೂಹಿಕ ರಾಜೀನಾಮೆ ಮಾಡಲಾಗುತ್ತಿದೆ. ಕಾರ್ಯಕರ್ತರ ರಕ್ಷಣೆಗೆ ನಿಲ್ಲದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada