ಬೆಂಗಳೂರು: ತಪಾಸಣೆ ನೆಪದಲ್ಲಿ ಹೊರರಾಜ್ಯಗಳ ವಾಹನಗಳ ಚಾಲಕರುಗಳಿಂದ ಕೇವಲ ದಾಖಲಾತಿ ಪರಿಶೀಲನೆಗಾಗಿ ವಾಹನ ನಿಲ್ಲಿಸಿ ಅಕ್ರಮ ಹಣ ಸಂಗ್ರಹಿಸುತ್ತಿದ್ದ ಹಿನ್ನೆಲೆ ಎ.ಎಸ್.ಐ ಮತ್ತು ಹೆಡ್ ಕಾನ್ಸ್‌ಟೇಬಲ್ ಇಬ್ಬರನ್ನೂ ಅಮಾನತುಗೊಳಿಸಲಾಗಿದೆ. ಜೂನ್ 10ರಂದು ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ( Ulsoor Gate Traffic Police Station) ಸರಹದ್ದಿನ ದೇವಾಂಗ ಜಂಕ್ಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಪೊಲೀಸ್ ಸಿಬ್ಬಂದಿ ಮತ್ತು ಹೆಡ್ ಕಾನ್ಸ್‌ಟೇಬಲ್ ಇಬ್ಬರೂ ದಾಖಲಾತಿ ಪರಿಶೀಲಿಸುವುದಕ್ಕಾಗಿ ಕೇರಳದ ಸಂತೋಷ್ ಕುಮಾರ್ ಎಂಬುವರ ಕಾರನ್ನು ನಿಲ್ಲಿಸಿ, ಅವರ ಕಾರಿನಲ್ಲಿ ವಾಷ್ ಬೇಸಿನ್ ಇರುವ ಕಾರಣಕ್ಕಾಗಿ, ಕಾರನ್ನು ಸೀಜ್ ಮಾಡುವುದಾಗಿ ಹೇಳಿ 20 ಸಾವಿರ ದಂಡದ ಮೊತ್ತವನ್ನು ಕೋರ್ಟ್ ನಲ್ಲಿ ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಆಗ ಸಂತೋಷ್, ಕೋರ್ಟ್ಗೆ ಹೋದರೆ 20 ಸಾವಿರ ಕಟ್ಟಬೇಕಾಗುತ್ತೆ ಎಂದು ಯಾವುದೇ ರಸೀದಿಯನ್ನು ನೀಡದೆ 2,500 ರೂ ನೀಡಿದ್ದಾರೆ. ಈ ದೂರನ್ನು ಈ-ಮೇಲ್ ಮೂಲಕ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಇನ್ನು ಈ ಸಂಬಂಧ ವಿಚಾರಣೆಯನ್ನು ಕೈಗೊಂಡು ಪರಿಶೀಲಿಸಿದ್ದು, ದೇವಾಂಗ ಜಂಕ್ಷನ್‌ನಲ್ಲಿ ಜೂನ್ 19 ರಂದು ಮಹೇಶ್, ಡಿ.ಸಿ. ಎಎಸ್‌ಐ ಮತ್ತು ಅವರ ಸಹಾಯಕ ಗಂಗಾಧರಪ್ಪ, ಹೆಚ್.ಸಿ. 9813 ಕರ್ತವ್ಯಕ್ಕೆ ನೇಮಕ ಮಾಡಲಾಗಿರುತ್ತದೆ. ವಿಚಾರಣಾ ಕಾಲದಲ್ಲಿ ಸದರಿಯವರುಗಳು ಕರ್ತವ್ಯದ ಅವಧಿಯಲ್ಲಿ ಕೇವಲ ದಾಖಲಾತಿ ಪರಿಶೀಲನೆಗಾಗಿ ವಾಹನವನ್ನು ನಿಲ್ಲಿಸಿದ್ದು, ಬಾಡಿವೋರ್ನ್ ಕ್ಯಾಮರಾ ಧರಿಸದೆ ಕರ್ತವ್ಯ ನಿರ್ವಹಿಸುತ್ತಿದ್ದು, ಅರ್ಜಿದಾರರಿಂದ ಅಕ್ರಮವಾಗಿ ರೂ. 2500/- ಗಳನ್ನು ಪಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದನ್ನೂ ಓದಿ: ಬಸವಣ್ಣನಿಗೆ ನೀಡಿದಷ್ಟೇ ಪ್ರಾಮುಖ್ಯತೆಯನ್ನು ಕೆಂಪೇಗೌಡರಿಗೆ ನೀಡಿದ ಮುಖ್ಯಮಂತ್ರಿಯೆಂದರೆ ಯಡಿಯೂರಪ್ಪ: ಶ್ರೀ ನಂಜಾವಧೂತ ಸ್ವಾಮೀಜಿ
ವಿಚಾರಣಾ ಕಾಲದಲ್ಲಿ ಕಂಡು ಬಂದ ಅಂಶಗಳನ್ನು ಆಧರಿಸಿ, ಸದರಿಯವರು ಅಕ್ರಮ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿ ಅತೀವ ನಿರ್ಲಕ್ಷ್ಯತೆ, ಬೇಜವಾಬ್ದಾರಿತನ ಹಾಗೂ ದುರ್ನಡತೆ ಪ್ರದರ್ಶಿಸಿರುವ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆಯ ಮಹೇಶ್.ಡಿ.ಸಿ, ಎಎಸ್‌ಐ ಮತ್ತು ಗಂಗಾಧರಪ್ಪ, ಹೆಚ್‌ಸಿ 9813 ರವರುಗಳನ್ನು ಕರ್ತವ್ಯದಿಂದ ಅಮಾನತ್ತುಗೊಳಿಸಿ, ಶಿಸ್ತು ಕ್ರಮ ಜರುಗಿಸಲಾಗಿದೆ. ಈ ಬಗ್ಗೆ ಜಂಟಿ ಪೊಲೀಸ್ ಆಯುಕ್ತರು ಡಾ ಬಿ.ಆರ್. ರವಿಕಾಂತೇಗೌಡ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಇದನ್ನೂ ಓದಿ: IPS transfer: ಐಪಿಎಸ್ ಅಧಿಕಾರಿಗಳ ಭಾರೀ ವರ್ಗಾವಣೆ, ಸಂಜೀವ್ ಪಾಟೀಲ್ ಬೆಳಗಾವಿ ಎಸ್ಪಿ, ಹಾಸನ ಎಸ್ಪಿ ಎತ್ತಂಗಡಿ
Published On - 3:55 pm, Mon, 27 June 22