
ಬೆಂಗಳೂರು, ಸೆಪ್ಟೆಂಬರ್ 24: ನಗರದಲ್ಲಿ ಕಸದ ಸಮಸ್ಯೆಗೆ ಮುಕ್ತಿ ಕೊಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವತಿಯಿಂದ ಇಂದು ನೆಹರು ತಾರಾಲಯದಲ್ಲಿ ಸಚಿವ ಕೃಷ್ಣಬೈರೇಗೌಡ ಅವರೊಂದಿಗೆ ಸಾರ್ವಜನಿಕ ಸಮಾಲೋಚನಾ ಸಭೆ ನಡೆಯಿತು. ನಗರದಲ್ಲಿ ಕಸದ ಬಗ್ಗೆ ನಿರಂತರ ದೂರುಗಳು ಕೇಳಿ ಬರುತ್ತಿದ್ದ ಹಿನ್ನಲೆ ಸಮಸ್ಯೆ ನಿವಾರಿಸುವ ಬಗ್ಗೆ ಸಭೆ ಮಾಡಲಾಯಿತು. ಈ ವೇಳೆ ನಾಗರಿಕರ ಸಮಸ್ಯೆಗಳನ್ನು ಸಚಿವ ಕೃಷ್ಣಬೈರೇಗೌಡ ಆಲಿಸಿದರು.
ಸಭೆ ಬಳಿಕ ಮಾತನಾಡಿದ ಕೃಷ್ಣಬೈರೇಗೌಡ, ‘ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಮಾತ್ರವಲ್ಲದೆ ಕಸದ ಸಮಸ್ಯೆಯೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ನಗರದ ಸ್ವಚ್ಛತೆ ಸೇರಿದಂತೆ ಸ್ಟ್ರೀಟ್ ಲೈಟ್, ಫುಟ್‌ಪಾತ್ ಹಾಗೂ ಖಾತಾ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕೂ ಸರ್ಕಾರ ಗಮನ ಹರಿಸುತ್ತಿದ್ದು, ಸಂಪೂರ್ಣ ವ್ಯವಸ್ಥೆಯಲ್ಲಿ ಶಿಸ್ತು ತರಲು ಕಾರ್ಯನಿರ್ವಹಿಸಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.
‘ಮನೆ-ಮನೆಗಳಿಂದ ಕಸ ಸಂಗ್ರಹಿಸುವ ಪ್ರಕ್ರಿಯೆಯಲ್ಲಿ ಹಲವು ಸುಧಾರಣೆಗಳನ್ನು ತರಲಾಗುತ್ತಿದೆ. ನಗರದಲ್ಲಿ ಮನೆಗಳ ಸಂಖ್ಯೆ ಹೆಚ್ಚಾಗಿದ್ದು, ಕೆಲವು ಟೆಂಡರ್‌ಗಳ ಅವಧಿ ಮುಗಿದಿರುವುದರಿಂದ ಸಪ್ಲೈ ಆರ್ಡರ್ ಮೂಲಕ ಕೆಲಸಗಳನ್ನು ಮುಂದುವರಿಸಲಾಗುತ್ತಿದೆ. ಹೊಸ ಟೆಂಡರ್ ಕರೆಯದೆ ಬೇಸ್ ಲೇನ್ ಬದಲಾಯಿಸಲು ಸಾಧ್ಯವಾಗುತ್ತಿಲ್ಲ. ಹಲವು ಬಾರಿ ಟೆಂಡರ್ ಕರೆದರೂ ಅದು ಸಾಧ್ಯವಾಗುತ್ತಿಲ್ಲ’ ಎಂದು ಸಚಿವರು ತಿಳಿಸಿದರು.
‘ಸುಪ್ರೀಂಕೋರ್ಟ್ ನಿರ್ದೇಶನದಂತೆ ಬಲ್ಕ್ ಜನರೇಟರ್ಸ್‌ಗಳು ಪ್ರತ್ಯೇಕ ವೆಂಡರ್‌ಗಳ ಜೊತೆ ಕೈಜೋಡಿಸಬೇಕು ಅಥವಾ ತ್ಯಾಜ್ಯವನ್ನು ಸ್ಥಳದಲ್ಲೇ ಕಾಂಪೋಸ್ಟ್ ಮಾಡಬೇಕು. ಆದರೆ, ನಗರದಲ್ಲಿ ಕೇವಲ 2 ಸಾವಿರ ಜನ ಮಾತ್ರ ಅಧಿಕೃತವಾಗಿ ಟೈ-ಅಪ್ ಆಗಿದ್ದು, ಉಳಿದ ಸುಮಾರು 48 ಸಾವಿರ ಬಲ್ಕ್ ಜನರೇಟರ್ಸ್‌ಗಳು ಮನೆ ಕಸ ಸಂಗ್ರಹಿಸುವವರಿಗೆ ಸ್ಥಳೀಯವಾಗಿ ಅಡ್ಜಸ್ಟ್ ಮಾಡಿಕೊಂಡು ಕಸ ನೀಡುತ್ತಿದ್ದಾರೆ’ ಎಂದು ವಿವರಿಸಿದರು.
‘ಈ ಅಕ್ರಮ ವ್ಯವಸ್ಥೆಯಿಂದಾಗಿ ಮನೆ ಮನೆಗೆ ಹೋಗಿ ಕಸ ಸಂಗ್ರಹಿಸುವ ಪೌರಕಾರ್ಮಿಕರಿಗೆ ತೊಂದರೆಯಾಗುತ್ತಿದ್ದು, ಪ್ರತಿದಿನ ಸುಮಾರು 1,000 ಟನ್ ಅಕ್ರಮ ಕಸ ವ್ಯವಸ್ಥೆಯ ಮೇಲೆ ಓವರ್ ಲೋಡ್ ಆಗುತ್ತಿದೆ. ಕಾಂಪೋಸ್ಟ್ ಡಿಸ್ಪೋಸಲ್‌ಗೆ ಸರ್ಕಾರ ಉಚಿತ ಲಿಫ್ಟಿಂಗ್ ಸೇರಿದಂತೆ ಎಲ್ಲಾ ರೀತಿಯ ನೆರವು ನೀಡಲು ಸಿದ್ಧವಿದೆ’ ಎಂದು ಅವರು ತಿಳಿಸಿದರು.
‘ನಾನು ಬೆಂಗಳೂರಿನ ಶಾಸಕನಾಗಿದ್ದೇನೆ. ಬೆಂಗಳೂರು ಇರುವುದರಿಂದಲೇ ಅಧಿಕಾರಿಗಳಿಗೆ ಕೆಲಸ ಸಿಕ್ಕಿದೆ. ಒಂದಲ್ಲ ಒಂದು ರೀತಿಯಲ್ಲಿ ನಾವೆಲ್ಲರೂ ಈ ನಗರದ ಋಣದಲ್ಲಿದ್ದು, ಆ ಋಣ ತೀರಿಸುವ ನಿಟ್ಟಿನಲ್ಲಿ ಹೊಣೆಗಾರಿಕೆಯಿಂದ ಕೆಲಸ ಮಾಡಬೇಕಿದೆ. ಹೊಣೆಗಾರಿಕೆ ಇಲ್ಲದಿದ್ದರೆ ನಾವು ಮನೆಗೆ ಹೋಗಬೇಕಾಗುತ್ತದೆ. ಹೀಗಾಗಿ ವ್ಯವಸ್ಥೆಯಲ್ಲಿ ಅಕೌಂಟೆಬಿಲಿಟಿ ತರಲು ಶ್ರಮಿಸುತ್ತಿದ್ದೇವೆ’ ಎಂದರು.
ಇದನ್ನೂ ಓದಿ: ಸಚಿವ ಕೃಷ್ಣಬೈರೇಗೌಡ ಕ್ಷಮೆಯಾಚನೆಗೆ ಪೌರಕಾರ್ಮಿಕರ ಆಗ್ರಹ: ಜಿಬಿಎ ಕಚೇರಿ ಎದುರು ಪ್ರತಿಭಟನೆ
‘ಇದೇ ವೇಳೆ, ಕಸ, ಸ್ವಚ್ಛತೆ, ರಸ್ತೆ, ಟ್ರಾಫಿಕ್ ಹಾಗೂ ಪಾರ್ಕಿಂಗ್ ಸಮಸ್ಯೆಗಳ ಪರಿಹಾರಕ್ಕೆ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡರೂ ಟೀಕೆ ಮಾಡುವವರು ಇದ್ದೇ ಇರುತ್ತಾರೆ’ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.