ಸಚಿವ ಕೃಷ್ಣಬೈರೇಗೌಡ ಕ್ಷಮೆಯಾಚನೆಗೆ ಪೌರಕಾರ್ಮಿಕರ ಆಗ್ರಹ: ಜಿಬಿಎ ಕಚೇರಿ ಎದುರು ಪ್ರತಿಭಟನೆ
ಕೃಷ್ಣಬೈರೇಗೌಡ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗುತ್ತಿದ್ದಂತೆಯೇ ನಗರದಲ್ಲಿ ಕೆಲ ಮಹತ್ವದ ಬದಲಾವಣೆ ತರಲು ಮುಂದಾಗಿದ್ದಾರೆ. ಒತ್ತುವರಿ ಫುಟ್ಪಾತ್ ತೆರವು, ರಸ್ತೆ ಪಕ್ಕ ನಿಲ್ಲಿಸುವ ವಾಹನಗಳ ತೆರವು ಸೇರಿದಂತೆ ಕೆಲ ಮಹತ್ತರ ಕಾರ್ಯಕ್ರಮಗಳನ್ನ ಕೈಗೆತ್ತುಕೊಂಡಿದ್ದು, ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಸಭೆಯಲ್ಲಿ ಅಧಿಕಾರಗಳ ಬೆವರಿಳಿಸುತ್ತಿದ್ದಾರೆ. ಆದರೆ ಇದೀಗ ಪೌರ ಕಾರ್ಮಿಕರ ವಿಚಾರದಲ್ಲಿ ಅವರು ಆಡಿದ ಮಾತುಗಳು ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೂ ಕಾರಣವಾಗಿದೆ.

ಬೆಂಗಳೂರು, ಸೆಪ್ಟೆಂಬರ್ 17: ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಮುಂದಾಗಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ವಿರುದ್ಧ ಇದೀಗ ಪೌರ ಕಾರ್ಮಿಕರು ಅಸಮಾಧಾನಗೊಂಡಿದ್ದಾರೆ. ಸಚಿವರ ಮಾತಿನಿಂದ ಪೌರಕಾರ್ಮಿಕರಿಗೆ ನೋವಾಗಿದ್ದು, ಗ್ರೇಟರ್ ಬೆಂಗಳೂರು ಅಥಾರಿಟಿ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಬೆಂಗಳೂರಿನ ಹಲವೆಡೆ ಭಿತ್ತಿಪತ್ರ ಹಿಡಿದು ಕ್ಷಮೆಯಾಚನೆಗೆ ಒತ್ತಾಯಿಸಿದ್ದಾರೆ.
ಮಾಹಿತಿ ತಿಳಿದು ಮಾತನಾಡಲಿ: ಪೌರ ಕಾರ್ಮಿಕರು ಅಸಮಾಧಾನ
ಸಚಿವ ಕೃಷ್ಣಬೈರೇಗೌಡ ಅವರು ಸರಿಯಾದ ಮಾಹಿತಿ ಇಟ್ಟುಕೊಳ್ಳದೆ ಮಾತನಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ‘ಕರ್ತವ್ಯಕ್ಕೆ ಯಾರು ಗೈರಾಗಿದ್ದಾರೆ ಮತ್ತು ಯಾವ ಕಾರಣಕ್ಕಾಗಿ ಗೈರಾಗಿದ್ದಾರೆ ಎಂಬುದನ್ನು ಮೊದಲು ಪರಿಶೀಲಿಸಬೇಕಿತ್ತು’ ಎಂದರು.
ಇದನ್ನೂ ಓದಿ: ಕೇವಲ ಬಿಲ್ ಮಾಡೋದಕ್ಕಷ್ಟೇ ಕೆಲಸ ಮಾಡ್ತಿದ್ದೀರಾ?: ಜಿಬಿಎ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡರಿಂದ ಕ್ಲಾಸ್
‘ಸಮರ್ಪಕ ಕಾರಣ ನೀಡದೆ ಕರ್ತವ್ಯಕ್ಕೆ ಹಾಜರಾಗದವರನ್ನು ಕೆಲಸದಿಂದ ವಜಾಗೊಳಿಸುವುದಕ್ಕೆ ನಮ್ಮ ತಕರಾರಿಲ್ಲ, ಆದರೆ ನೈಜ ಪರಿಸ್ಥಿತಿಯನ್ನು ಅರಿಯದೆ ಎಲ್ಲರ ವಿರುದ್ಧ ಮಾತನಾಡುವುದು ಸರಿಯಲ್ಲ’ ಎಂದು ಪೌರ ಕಾರ್ಮಿಕರು ಆಕ್ಷೇಪ ವ್ಯಕ್ತಪಡಿಸಿದರು.
ಶೋಷಣೆ ತಪ್ಪಿಸಿ; ಗೌರವಯುತ ವಾತಾವರಣ ಕಲ್ಪಿಸುವಂತೆ ಒತ್ತಾಯ
ಇನ್ನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ ನಿರಂತರವಾಗಿ ಶೋಷಣೆ ಆಗುತ್ತಿದ್ದು, ಇದರ ಬಗ್ಗೆ ಸಚಿವರಿಗೆ ಮಾಹಿತಿಯಿಲ್ಲ ಎಂದು ಕಾರ್ಮಿಕರು ದೂರಿದರು. ‘ಸರಿಯಾದ ಸಮಯಕ್ಕೆ ವೇತನ ನೀಡುತ್ತಿಲ್ಲ, ವಾರದ ರಜೆಯನ್ನೂ ಒದಗಿಸುತ್ತಿಲ್ಲ ಹಾಗೂ ನಿಷ್ಠೆಯಿಂದ ದುಡಿಯುತ್ತಿರುವ ಎಷ್ಟೋ ಕಾರ್ಮಿಕರನ್ನು ಇಂದಿಗೂ ಖಾಯಂ ಮಾಡಿಲ್ಲ’ ಎಂದು ಅಳಲು ತೋಡಿಕೊಂಡರು.
‘ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಪೌರಕಾರ್ಮಿಕರನ್ನು ಸರ್ಕಾರ ಕೂಡಲೇ ಖಾಯಂಗೊಳಿಸಬೇಕು ಮತ್ತು ಗೌರವಯುತವಾದ ಕೆಲಸದ ವಾತಾವರಣವನ್ನು ಖಾತ್ರಿಪಡಿಸಬೇಕು’ ಎಂದು ಪೌರಕಾರ್ಮಿಕರು ಆಗ್ರಹಿಸಿದರು.
ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?
ಇತ್ತೀಚೆಗೆ ವಿಕಾಸಸೌಧದಲ್ಲಿ ಜಿಬಿಎ ಅಧಿಕಾರಿಗಳೊಂದಿಗೆ ಸಭೆ ಬಳಿಕ ಮಾತನಾಡಿದ್ದ ಸಚಿವ ಕೃಷ್ಣಬೈರೇಗೌಡ, ‘ನಿಯೋಜಿತ ಸ್ಥಳಗಳಲ್ಲಿ ಪ್ರತಿದಿನ ಸರಿಸುಮಾರು ಶೇಕಡಾ 30ರಷ್ಟು ಪೌರಕಾರ್ಮಿಕರು ಗೈರುಹಾಜರಾಗುತ್ತಿರುವುದು ನಗರದ ನೈರ್ಮಲ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇಷ್ಟೊಂದು ಪ್ರಮಾಣದಲ್ಲಿ ಸಿಬ್ಬಂದಿ ಕೆಲಸಕ್ಕೆ ಬಾರದಿದ್ದರೆ ನಗರವನ್ನು ಸ್ವಚ್ಛವಾಗಿಡಲು ಹೇಗೆ ಸಾಧ್ಯ’ ಎಂದು ಗರಂ ಆಗಿದ್ದರು.
ಇದನ್ನೂ ಓದಿ: ಗುಂಡಿ ಇಲ್ಲದ ರಸ್ತೆ ನಿರ್ಮಾಣ ರಾಕೆಟ್ ಸೈನ್ಸಾ? ಮೊದಲ ಸಭೆಯಲ್ಲೇ ಜಿಬಿಎ ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ಕ್ಲಾಸ್
‘ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವುದು ಪೌರಕಾರ್ಮಿಕರ ಪ್ರಮುಖ ಜವಾಬ್ದಾರಿಯಾಗಿದ್ದು, ಕರ್ತವ್ಯ ಲೋಪದಿಂದಾಗಿ ಸಾರ್ವಜನಿಕರು ಬೀದಿಬದಿಯಲ್ಲೇ ತ್ಯಾಜ್ಯ ಎಸೆಯುವಂತಾಗಿ ಹೊಸ ಬ್ಲಾಕ್‌ಸ್ಪಾಟ್‌ಗಳು ಸೃಷ್ಟಿಯಾಗುತ್ತಿವೆ. ಹೀಗಾಗಿ, ನಿಯಮ ಉಲ್ಲಂಘಿಸಿ ಸತತವಾಗಿ ಕೆಲಸಕ್ಕೆ ಚಕ್ಕರ್ ಹಾಕುವ ಪೌರಕಾರ್ಮಿಕರಿಗೆ ಹಂತ ಹಂತವಾಗಿ ಮೂರು ಬಾರಿ ಎಚ್ಚರಿಕೆ ನೋಟಿಸ್ ಜಾರಿಗೊಳಿಸಿ. ಅದಕ್ಕೂ ಬಗ್ಗದವರನ್ನು ನಿಯಮಾವಳಿಗಳ ಪ್ರಕಾರ ಸೇವೆಯಿಂದಲೇ ಮುಲಾಜಿಲ್ಲದೆ ವಜಾ ಮಾಡುವಂತೆ’ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




