ಮಸೀದಿ ಮೇಲೆ ಕಲ್ಲುತೂರಾಟ ಕೇಸ್ಗೆ ಟ್ವಿಸ್ಟ್: ಗಣೇಶ ಮೆರವಣಿಗೆ ಮೇಲೂ ಕಲ್ಲು ಎಸೆತ; ಇಬ್ಬರು ವಶಕ್ಕೆ
ಭಟ್ಕಳದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲು ತೂರಾಟ ನಡೆದಿರುವ ಪ್ರಕರಣ ಹೊಸ ತಿರುವು ಪಡೆದಿದೆ. ಗಣೇಶ ಮೆರವಣಿಗೆ ಮೇಲೂ ಕಲ್ಲು ತೂರಾಟ ಆರೋಪ ಕೇಳಿಬಂದಿದೆ. ಸದ್ಯ ಎರಡೂ ಕಡೆಯಿಂದ ದೂರು ದಾಖಲಾಗಿದ್ದು, ಭಟ್ಕಳ ನಗರ ಠಾಣೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಕಾರವಾರ, ಸೆಪ್ಟೆಂಬರ್ 17: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ ಹಾಗೂ ಮದರಸಾ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಗಣೇಶ ಮೂರ್ತಿ ಮೆರವಣಿಗೆ ಮೇಲೂ ಕಲ್ಲು ತೂರಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಗಣೇಶ ಸಮಿತಿ ಸಹ ದೂರು ದಾಖಲಿಸಿದೆ. ಅಷ್ಟೇ ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ನಗರ ಠಾಣೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಇಬ್ಬರು ವಶಕ್ಕೆ: ಎರಡು ದೂರಿನ ಸಮಗ್ರ ತನಿಖೆ ಭರವಸೆ
ಪ್ರಕರಣ ಸಂಬಂಧ ಭಟ್ಕಳ ನಗರ ಠಾಣೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆಯುತ್ತಿದ್ದಂತೆ ಭಟ್ಕಳ ನಗರ ಪೊಲೀಸ್ ಠಾಣೆ ಮುಂದೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಜಮಾಯಿಸಿದರು. ಮೊದಲು ಗಣೇಶ ಮೂರ್ತಿಗೆ ಕಲ್ಲು ಎಸೆದಿದ್ದಾರೆ. ಆದಾದ ಬಳಿಕ ಮಸೀದಿಗೆ ಕಲ್ಲು ತೂರಾಟ ನಡೆದಿದೆ. ಹಾಗಾಗಿ ಗಣೇಶ ಮೂರ್ತಿಯತ್ತ ಕಲ್ಲು ತೂರಾಟ ನಡೆಸಿದವರನ್ನು ಬಂಧಿಸುವಂತೆ ಆಗ್ರಹಿಸಿದರು.
ಇದನ್ನೂ ಓದಿ: ಗಣೇಶೋತ್ಸವ ಮೆರವಣಿಗೆ ವೇಳೆ ಭಟ್ಕಳದಲ್ಲಿ ಮಸೀದಿ, ಮದರಸಾ ಮೇಲೆ ಕಲ್ಲು ತೂರಾಟ ಆರೋಪ: ಬಿಗಿ ಬಂದೋಬಸ್ತ್
ಅಪ್ರಾಪ್ತರು ಎಂದು ಸಲುಗೆ ನೀಡುತ್ತಿರುವುದೇ ಈ ರೀತಿಯ ಕೃತ್ಯ ಮರುಕಳಿಸಲು ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಈ ವೇಳೆ ಪೊಲೀಸ್ ಅಧಿಕಾರಿಗಳ ಜೊತೆ ಹಿಂದೂಪರ ಸಂಘಟನೆ ಕಾರ್ಯಕರ್ತರು ವಾಗ್ವಾದ ನಡೆಸಿದರು. ಸದ್ಯ ಎರಡು ದೂರಿನ ಸಮಗ್ರ ತನಿಖೆ ನಡೆಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
ಉತ್ತರ ಕನ್ನಡ ಎಸ್ಪಿ. ಎಂಎನ್ ದೀಪನ್ ಹೇಳಿದ್ದಿಷ್ಟು
ಇನ್ನು ಘಟನೆ ಕುರಿತಾಗಿ ಉತ್ತರ ಕನ್ನಡ ಎಸ್ಪಿ. ಎಂಎನ್ ದೀಪನ್ ಪ್ರತಿಕ್ರಿಯಿಸಿದ್ದು, ‘ಘಟನೆ ಸಂಬಂಧ ದೂರು ಪ್ರತಿದೂರು ದಾಖಲಾಗಿದೆ. ಮಸೀದಿಗೆ ಕಲ್ಲು ತೂರಿದ ಬಗ್ಗೆ ಮಸೀದಿಯ ಕಾರ್ಯದರ್ಶಿ ದೂರು ನೀಡಿದ್ದಾರೆ. ಮೆರವಣಿಗೆಯ ಕಡೆಗೆ ಗೊಜ್ಜು ತೂರಿದ ಬಗ್ಗೆ ಆಯೋಜಕರು ದೂರು ನೀಡಿದ್ದಾರೆ. ಎರಡು ದೂರಿನ ಸಂಬಂಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದರು.
ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡ ರಚನೆ
‘ಆರೋಪಿಗಳ ಪತ್ತೆಗೆ ಭಟ್ಕಳ ಎಎಸ್ಪಿ ನೇತ್ರತ್ವದಲ್ಲಿ ಮೂರು ವಿಶೇಷ ತಂಡ ರಚಿಸಲಾಗಿದೆ. ಠಾಣೆಯಲ್ಲಿ ಸೇರಿದ ಜನರಿಗೆ ಪ್ರಕರಣ ದಾಖಲಾದ ಬಗ್ಗೆ ತಿಳಿಸಲಾಗಿದೆ. ಅವರೆಲ್ಲಾ ಠಾಣೆಯಿಂದ ಶಾಂತಿಯುತವಾಗಿ ತೆರಳಿದ್ದಾರೆ. ಈಗ ಪರಿಸ್ಥಿತಿ ಶಾಂತಿಯುತವಾಗಿದೆ. ಈ ಬಗ್ಗೆ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




