
ಬೆಂಗಳೂರು, (ಜೂನ್ 02): ಗ್ರೇಟರ್ ಬೆಂಗಳೂರು ಪ್ರಾಧಿಕಾರ (Greater Bengaluru Authority) ನಾಗರಿಕರಿಗೆ 1 ಕಿಲೋಮೀಟರ್ ಚಾಲೆಂಜ್ ನೀಡಿ, 1 ಕಿಲೋಮೀಟರ್ ವರೆಗಿನ ದೂರ ಕ್ರಮಿಸಲು ವಾಹನಗಳ ಬದಲು ಕಾಲ್ನಡಿಗೆಯನ್ನು ಆಯ್ಕೆ ಮಾಡಬೇಕು ಎಂದು ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿತ್ತು. ಫುಟ್‌ಪಾತ್‌ಗಳನ್ನು ಬಳಸಿಕೊಂಡು ಪರಿಸರ ಸ್ನೇಹಿಯಾಗಿ ನಡೆದುಕೊಳ್ಳಿ ಎಂಬ ಸಂದೇಶವನ್ನು ನೀಡಿದ್ದ GBA, ಈ ಅಭಿಯಾನದ ಮೂಲಕ ವಾಹನ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸಂರಕ್ಷಣೆಗೆ ಉತ್ತೇಜನ ನೀಡುವ ಉದ್ದೇಶ ಹೊಂದಿತ್ತು. ಆದರೆ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿ, ನಾಗರಿಕರಿಂದ ತೀವ್ರ ಟೀಕೆಗೆ ಗುರಿಯಾಗಿದೆ.
ಹೌದು.. GBA ನೀಡಿದ ಸಲಹೆಗೆ ಪ್ರತಿಕ್ರಿಯಿಸಿದ ಸಾರ್ವಜನಿಕರು, “ಮೊದಲು ನಡೆಯಲು ಯೋಗ್ಯವಾದ ಫುಟ್‌ಪಾತ್‌ಗಳನ್ನು ನಿರ್ಮಿಸಿ, ನಂತರ ಇಂತಹ ಚಾಲೆಂಜ್‌ಗಳನ್ನ ನೀಡಿ ಎಂದು ಪ್ರಶ್ನಿಸಿದರು. ನಗರದಲ್ಲಿ ನೆಟ್ಟಗೆ 100 ಮೀಟರ್ ಕೂಡ ಸುರಕ್ಷಿತವಾಗಿ ನಡೆಯಬಹುದಾದ ಫುಟ್‌ಪಾತ್ ಸಿಗದ ಪರಿಸ್ಥಿತಿ ಇದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಟಿವಿ9 ಕನ್ನಡ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ನಗರದ ಹಲವು ಭಾಗಗಳ ಫುಟ್‌ಪಾತ್‌ಗಳ ದುಸ್ಥಿತಿ ಬಯಲಾಗಿದ್ದು, ಜೆ.ಸಿ ರಸ್ತೆ ಬಳಿ ಕೂಡ ಪಾದಾಚಾರಿ ಮಾರ್ಗ ಹಾಳಾಗಿದೆ.
ಕೆಲವೆಡೆ ಪಾದಚಾರಿಗಳು ರಸ್ತೆ ಮೇಲೆ ನಡೆದು ಜೀವ ಪಣಕ್ಕಿಡುವ ಪರಿಸ್ಥಿತಿ ಕಂಡುಬಂದರೆ, ಇನ್ನೂ ಕೆಲವು ಕಡೆಗಳಲ್ಲಿ ಫುಟ್‌ಪಾತ್‌ಗಳು ಅಪಾಯಕಾರಿಯಾಗಿ ಮಾರ್ಪಟ್ಟಿರುವುದು ಬೆಳಕಿಗೆ ಬಂದಿದೆ. ನಾಗರಿಕರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸದೇ ಬಿಟ್ಟಿ ಸಲಹೆ ನೀಡುವುದಕ್ಕಿಂತ ಮೊದಲು ಸುರಕ್ಷಿತ ಮತ್ತು ಸುಗಮ ಪಾದಚಾರಿ ಮಾರ್ಗಗಳನ್ನು ಕಲ್ಪಿಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಮತ್ತಷ್ಟು ಗಟ್ಟಿಯಾಗುತ್ತಿದೆ.
ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು
Published On - 8:52 pm, Tue, 2 June 26