ಬೆಂಗಳೂರು, ಆಗಸ್ಟ್ 28: ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಎಲ್ಲಂದರಲ್ಲಿ ಬಿಎಂಟಿಸಿ ಬಸ್ಗಳು ಕೆಟ್ಟು ನಿಲ್ಲುತ್ತಿವೆ. ಇದರಿಂದ ಕಿಲೋಮೀಟರ್ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಟ್ರಾಫಿಕ್ ಜಾಮ್ ತಪ್ಪಿಸಲು ಟ್ರಾಫಿಕ್ ಪೊಲೀಸರು ಪೀಕ್ ಅವರ್ನಲ್ಲಿ ಪ್ರತಿದಿನ ಹರಸಾಹಸ ಪಡುತ್ತಾರೆ. ಇದಕ್ಕೆ ಕಾರಣ ಅಂದರೆ, ಇಷ್ಟು ದಿನ ನಗರದಲ್ಲಿ ಸುಮ್ಮನಿದ್ದ ಪಂಕ್ಚರ್ ಮಾಫಿಯಾ ಮತ್ತೆ ತಲೆ ಎತ್ತಿರುವುದು, ಇದರಿಂದ ಕಳೆದ ಆರು ತಿಂಗಳಲ್ಲಿ 482 ಬಿಎಂಟಿಸಿ ಬಸ್ಗಳು ಪಂಕ್ಚರ್ ಆಗಿವೆಯಂತೆ. ಇದರಿಂದ ನಡು ರೋಡಲ್ಲಿ ಬಿಎಂಟಿಸಿ ಬಸ್ಗಳು ಕೈ ಕೊಡುತ್ತಿದ್ದು ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ. ಈ ಬಗ್ಗೆ ಪೋಲಿಸ್ ಕಮೀಷನರ್ಗೆ ದೂರು ಕೊಡಲು ಮುಂದಾಗುತ್ತೇವೆ ಎಂದು ಬಿಎಂಟಿಸಿ ಅಧಿಕಾರಿ ಗಜೇಂದ್ರ ಕುಮಾರ್ ತಿಳಿಸಿದ್ದಾರೆ.
ನಗರದ ಯಾವುದೇ ರೋಡ್, ಫ್ಲೈ ಓವರ್, ಅಂಡರ್ ಪಾಸ್ಗಳಲ್ಲೂ ಕಬ್ಬಿಣದ ಮೊಳೆಗಳನ್ನು ಸುರಿಯಲಾಗುತ್ತಿದೆ. ಈ ಸಮಸ್ಯೆ ಬಿಎಂಟಿಸಿಗೆ ಮಾತ್ರವಲ್ಲದೆ ಬೈಕ್, ಕಾರುಗಳಿಗೂ ಇವೆ. ಎಲ್ಲೆಂದರಲ್ಲಿ ಕಬ್ಬಿಣದ ಮೊಳೆಗಳನ್ನು ಕಿರಾತಕರು ರಾತ್ರಿ ವೇಳೆಯಲ್ಲಿ ಬಿಸಾಡಿ ಹೋಗುತ್ತಾರೆ. ಇದರಿಂದ ವಾಹನಗಳ ಚಕ್ರಗಳು ಪಂಕ್ಚರ್ ಆಗುತ್ತವೆ. ನಂತರ ಅಕ್ಕಪಕ್ಕದಲ್ಲಿರುವ ಪಂಕ್ಚರ್ ಅಂಗಡಿಗಳಿಗೆ ವಾಹನ ಮಾಲೀಕರು ಹೋಗುತ್ತಾರೆ, ಆಗ ದುಪ್ಪಟ್ಟು ಹಣ ಪೀಕಿ ಪಂಕ್ಚರ್ ಹಾಕಿ ಕಳುಹಿಸುತ್ತಾರೆ. ಈ ಬಗ್ಗೆ ಬಿಎಂಟಿಸಿ ಪ್ರಯಾಣಿಕರು ಮತ್ತು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮನೆ ಬೆಲೆ ಹೆಚ್ಚಳ: ಭಾರತದ ಟಾಪ್ 3 ಪ್ರದೇಶಗಳಲ್ಲಿ ಬೆಂಗಳೂರಿನ ಬಾಗಲೂರು, ವೈಟ್ಫೀಲ್ಡ್; ಯಾಕಿಷ್ಟು ಏರಿಕೆ ಆಗ್ತಿದೆ ಗೊತ್ತಾ?
ಒಟ್ಟಿನಲ್ಲಿ ಕೆಲ ವರ್ಷಗಳ ಹಿಂದೆ ಈ ಪಂಕ್ಚರ್ ಮಾಫಿಯಾ ದೊಡ್ಡ ಮಟ್ಟದಲ್ಲಿ ರಾಜಧಾನಿ ಜನರನ್ನು ಕಾಡಿತ್ತು. ನಂತರ ಪೋಲಿಸ್ ಇಲಾಖೆ ಕಠಿಣ ಕ್ರಮಗಳನ್ನು ತೆಗೆದುಕೊಂಡ ಬಳಿಕ ಚೂರು ಸೈಲೆಂಟ್ ಆಗಿದ್ದ ಈ ಕಿರಾತಕರು ಈಗ ಮತ್ತೆ ತಮ್ಮ ಕೈಚಳಕ ತೋರಿಸಲು ಮುಂದಾಗಿದ್ದಾರೆ. ಕೂಡಲೇ ಪೋಲಿಸ್ ಇಲಾಖೆ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ