ಪುಣೆ–ಬೆಂಗಳೂರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ: ಕಾಮಗಾರಿ ಯಾವಾಗ ಶುರು? ಏನೆಲ್ಲ ಉಪಯೋಗ?

ಕೇಂದ್ರದ ಅನುಮೋದನೆಗೆ ಕಾಯುತ್ತಿರುವ ಪುಣೆ-ಬೆಂಗಳೂರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಯೋಜನೆಗೆ ಶೀಘ್ರದಲ್ಲಿ ಅಂತಿಮ ಮುದ್ರೆ ಬೀಳಲಿದೆ. 700 ಕಿ.ಮೀ ಉದ್ದದ ಈ 45-50 ಸಾವಿರ ಕೋಟಿ ರೂ. ವೆಚ್ಚದ ರಸ್ತೆಯು ಪ್ರಯಾಣ ಸಮಯವನ್ನು 15ರಿಂದ 7 ಗಂಟೆಗೆ ಇಳಿಸಲಿದ್ದು, ಮಹಾರಾಷ್ಟ್ರ-ಕರ್ನಾಟಕ ಸಂಪರ್ಕಿಸುವ ಈ ಯೋಜನೆ ಸರಕು ಸಾಗಣೆ, ಕೈಗಾರಿಕೆಗಳು ಮತ್ತು ಆರ್ಥಿಕ ಬೆಳವಣಿಗೆಗೂ ಉತ್ತೇಜನ ನೀಡಲಿದೆ.

ಪುಣೆ–ಬೆಂಗಳೂರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ: ಕಾಮಗಾರಿ ಯಾವಾಗ ಶುರು? ಏನೆಲ್ಲ ಉಪಯೋಗ?
ಸಾಂದರ್ಭಿಕ ಚಿತ್ರ
Image Credit source: AI Image

Updated on: Apr 16, 2026 | 3:32 PM

ಬೆಂಗಳೂರು, ಏಪ್ರಿಲ್​​ 16: ಕೇಂದ್ರ ಸರ್ಕಾರದಿಂದ ಶೀಘ್ರವೇ ಶುಭಸುದ್ದಿ ಸಿಗುವ ಸಾಧ್ಯತೆಯಿದ್ದು, ಪ್ರಸ್ತಾವಿತ ಪುಣೆ–ಬೆಂಗಳೂರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಯೋಜನೆಗೆ ಅಂತಿಮ ಮುದ್ರೆಗೆ ದಿನಗಣನೆ ಆರಂಭವಾಗಿದೆ. ಕೆಲವಾರಗಳಲ್ಲಿ ಇದರ ಮಾರ್ಗರೇಖೆಗೆ ಕೇಂದ್ರ ಅನುಮತಿ ನೀಡುವ ಸಾಧ್ಯತೆ ಇದೆ. ಭಾರತಮಾಲಾ ಯೋಜನೆಯಡಿ ರೂಪಿಸಲಾದ 25 ಗ್ರೀನ್‌ಫೀಲ್ಡ್ ಕಾರಿಡಾರ್‌ಗಳಲ್ಲಿ ಇದೂ ಒಂದಾಗಿದ್ದು, ಅನುಮೋದನಾ ಪ್ರಕ್ರಿಯೆ ಈಗ ಅಂತಿಮ ಹಂತದಲ್ಲಿದೆ. ಆ ಬಳಿಕ ಭೂಸ್ವಾಧೀನ ಪ್ರಕ್ರಿಯೆ ನಡೆದು, ಕಾಮಗಾರಿಯೂ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 700 ಕಿ.ಮೀ ಉದ್ದದ ಈ ಎಕ್ಸ್‌ಪ್ರೆಸ್‌ವೇ 6ರಿಂದ 8 ಲೇನ್‌ಗಳನ್ನು ಹೊಂದಿರಲಿದೆ. ಒಟ್ಟು ವೆಚ್ಚವನ್ನು 45 ಸಾವಿರ ಕೋಟಿ ರೂಪಾಯಿಗಳಿಂದ 50 ಸಾವಿರ ಕೋಟಿ ಎಂದು ಅಂದಾಜಿಲಸಲಾಗಿದೆ. ಈ ಮಾರ್ಗವು ಮಹಾರಾಷ್ಟ್ರ ಮತ್ತು ಕರ್ನಾಟಕದ ಪ್ರಮುಖ ಜಿಲ್ಲೆಗಳ ಮೂಲಕ ಸಾಗಲಿದೆ. ಪುಣೆಯಿಂದ ಆರಂಭವಾಗಿ ಸತಾರಾ, ಸಾಂಗ್ಲಿ ಮೂಲಕ ಸಾಗಲಿರುವ ಈ ಮಾರ್ಗ ಬಳಿಕ ಬೆಳಗಾವಿ, ವಿಜಯನಗರ ಮತ್ತು ದಾವಣಗೆರೆ ಮೂಲಕ ಬೆಂಗಳೂರು ತಲುಪಲಿದೆ.

ಇದನ್ನೂ ಓದಿ: ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಇನ್ನಷ್ಟು ವಿಳಂಬ? ಕಾರಣ ಇಲ್ಲಿದೆ

ಪುಣೆ–ಬೆಂಗಳೂರು ನಡುವಿನ ರಸ್ತೆ ಪ್ರಯಾಣಕ್ಕೆ ಟ್ರಾಫಿಕ್ ದಟ್ಟಣೆ ಮತ್ತು ಕಿರಿದಾದ ಮಾರ್ಗಗಳ ಕಾರಣದಿಂದ ಹಾಲಿ ಸುಮಾರು 14ರಿಂದ 15 ಗಂಟೆಗಳು ಬೇಕಾಗುತ್ತವೆ. ಆದರೆ ಈ ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡ ನಂತರ ಪ್ರಯಾಣ ಸಮಯವು ಸುಮಾರು 7 ಗಂಟೆಗಳವರೆಗೆ ಕಡಿಮೆಯಾಗುವ ನಿರೀಕ್ಷೆ ಇದೆ. ಇದರಿಂದ ಪ್ರಯಾಣಿಕರಿಗೂ, ಸರಕು ಸಾಗಣೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಕ್ಕೂ ದೊಡ್ಡ ಅನುಕೂಲವಾಗುವ ನಿರೀಕ್ಷೆ ಇದೆ.

ಈ ಎಕ್ಸ್‌ಪ್ರೆಸ್‌ವೇ ಸಂಪರ್ಕವನ್ನು ಸುಧಾರಿಸುವುದರ ಜೊತೆಗೆ ಆರ್ಥಿಕ ಬೆಳವಣಿಗೆಗೂ ಉತ್ತೇಜನ ನೀಡಲಿದೆ. ಮಾರ್ಗದ ಸುತ್ತಮುತ್ತ ಕೈಗಾರಿಕೆಗಳು, ಗೋದಾಮುಗಳು, ಲಾಜಿಸ್ಟಿಕ್ಸ್ ಪಾರ್ಕ್‌ಗಳು ಮತ್ತು ಇತರೆ ವ್ಯಾಪಾರಿಕ ಚಟುವಟಿಕೆಗಳು ಬೆಳೆಯುವ ಸಾಧ್ಯತೆ ಇದೆ. ವೇಗವಾದ ಪ್ರಯಾಣ ಮತ್ತು ಉತ್ತಮ ರಸ್ತೆ ಮೂಲಸೌಕರ್ಯದೊಂದಿಗೆ ಪುಣೆ–ಬೆಂಗಳೂರು ಎಕ್ಸ್‌ಪ್ರೆಸ್‌ವೇ ಪಶ್ಚಿಮ ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಪ್ರಮುಖ ಸಂಪರ್ಕ ಮಾರ್ಗವಾಗಿ ರೂಪುಗೊಳ್ಳಲಿದ್ದು, ಪ್ರಯಾಣಿಕರು ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಮಹತ್ವದ ಬೆಂಬಲ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿರೋದಾಗಿ ಬೆಂಗಳೂರು ನೌ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Published On - 3:31 pm, Thu, 16 April 26

Loading...
Unable to load recommendations.
Follow Us