ಬೆಂಗಳೂರಿನಲ್ಲೆಡೆ ಮಳೆ ನೀರು: NDRF, SDRF ಮರು ನಿಯೋಜನೆ

ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ, ಮುಂಜಾನೆಯೇ ಮಳೆರಾಯನ ಅಬ್ಬರ ಶುರುವಾಗಿತ್ತು. ಕೆಲಸಕ್ಕೆ ಹೋಗಬೇಕಾದ ಉದ್ಯೋಗಿಗಳು ತೊಂದರೆ ಅನುಭವಿಸಿದ್ರೆ, ಮಳೆ ನೀರು ರೋಡ್​ನಲ್ಲಿ ನಿಂತಿದ್ದರಿಂದ ವಾಹನ ಸವಾರರು ಹೈರಾಣಾದರು‌. ಇನ್ನೂ ಮಳೆ ಮುಂದುವರೆಯುವ ಮುನ್ಸೂಚನೆ ಇದ್ದು, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಸಿಬ್ಬಂದಿಯನ್ನು ಬೆಂಗಳೂರಿಗೆ ಮರು ನಿಯೋಜಿಸಲಾಗಿದೆ.

ಬೆಂಗಳೂರಿನಲ್ಲೆಡೆ ಮಳೆ ನೀರು: NDRF, SDRF ಮರು ನಿಯೋಜನೆ
ಬೆಂಗಳೂರಿನಲ್ಲೆಡೆ ಮಳೆ ನೀರು: NDRF, SDRF ಮರು ನಿಯೋಜನೆ
Follow us
ಪ್ರಸನ್ನ ಗಾಂವ್ಕರ್​
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 15, 2024 | 10:13 PM

ಬೆಂಗಳೂರು, ಅ.15: ಬೆಂಗಳೂರಿನಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಇನ್ನೂ ಮುಂದುವರೆಯುವ ಮುನ್ಸೂಚನೆ ಇದೆ. ಹೀಗಾಗಿ ಕಟ್ಟೆಚ್ಚರ ವಹಿಸಲು ಬಿಬಿಎಂಪಿ ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣಭೈರೇಗೌಡ(Krishna Byre Gowda) ಅವರು ಸೂಚಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಈಗಾಗಲೇ 60 ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಸಿಬ್ಬಂದಿಯನ್ನು ಬೆಂಗಳೂರಿಗೆ ಮರು ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ 40 ಸಿಬ್ಬಂದಿ ತುಕಡಿಯನ್ನೂ ಇರಿಸಲಾಗಿದೆ.

ಇನ್ನು ತಕ್ಷಣ  ಪ್ರತಿಕ್ರಿಯೆಗೆ ಅಗ್ನಿಶಾಮಕ, ತುರ್ತು ಸೇವಾದಳ ನಿಯೋಜನೆ ಮಾಡಲಾಗಿದ್ದು, ಬೆಂಗಳೂರು ಜಿಲ್ಲಾಡಳಿತ ಈಗಾಗಲೇ ಶಾಲೆಗಳಿಗೆ ರಜೆ ಘೋಷಿಸಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಇದನ್ನೂ ಓದಿ:ಅ.19 ರವರೆಗೆ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ: ಬೆಂಗಳೂರಿನಲ್ಲಿ ಆರೆಂಜ್ ಅಲರ್ಟ್

ಈ ಬಗ್ಗೆ ಬೆಂಗಳೂರಿನ ಬಿಬಿಎಂಪಿ ಕಚೇರಿಯಲ್ಲಿ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್​, ‘ಬಂಗಾಳ‌ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ 4 ದಿನ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ‌ಯವರು ತಿಳಿಸಿದ್ದಾರೆ. ಈಗಾಗಲೇ ನಾವು ಎಚ್ಚರಿಕೆ ವಹಿಸಿದ್ದೇನೆ. 24 ಗಂಟೆ ಮಾರ್ಗದರ್ಶನ ಮಾಡಬೇಕು ಎಂದು ಹೇಳಿದ್ದೇನೆ. ಟ್ರಾಫಿಕ್, ಮಳೆ ಹೆಚ್ಚಾಗುವ ಕಾರಣ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ ಎಂದರು.

ಜೊತೆಗೆ ಬೆಂಗಳೂರಿನಲ್ಲಿ 65 ಎಂಎಂ ಮಳೆ ಬಿದ್ದಿದ್ದು, ಕೆಲ ವಾರ್ಡ್​​ಗಳಲ್ಲಿ ನೀರು ನುಗ್ಗಿರುವ ಬಗ್ಗೆ ಹಾಗೂ 130 ಮರ ಬಿದ್ದಿದ್ದೆ ಎಂದು ದೂರು ಬಂದಿವೆ. ಅದರಲ್ಲಿ 25 ವಿಲೇವಾರಿ ಮಾಡಲಾಗಿದೆ. ಇನ್ನು 27 ಕಂಬಗಳನ್ನು ತೆರವು ಮಾಡಿದ್ದೇವೆ. ಯಲಹಂಕ, ಪೂರ್ವ ಹಾಗೂ ಪಶ್ಚಿಮ, ಮಹದೇವಪುರ ಸೇರಿ ಬೆಂಗಳೂರು ನಗರದ ಹಲವೆಡೆ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ಇನ್ನೂ 3 ದಿನಗಳ ಕಾಲ ಭಾರಿ ಮಳೆಯಾಗಲಿದೆ. ಇದಕ್ಕೆ‌ ನಾವು ಮುನ್ನೆಚ್ಚರಿಕೆ ವಹಿಸಿದ್ದೇವೆ. ಜೊತೆಗೆ ಹುಷಾರಾಗಿರಿ ಎಂದು ನಾನು ಜನರಿಗೆ ಮನವಿ ಮಾಡುತ್ತೇನೆ. ಮಳೆ ಬಗ್ಗೆ ವೆಬ್​ಸೈಟ್ ತೆರೆಯಲಾಗಿದೆ. ಸಮಸ್ಯೆ ಇದ್ದರೆ 1533 ನಂಬರ್​ಗೆ ಕರೆ ಮಾಡಬಹುದು ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ