ತಾಯಿಗೆ ಬೈದಿದನ್ನು ಪ್ರಶ್ನಿಸಿದ್ದಕ್ಕೆ ಹಣೆಗೆ ಗನ್ ಇಟ್ಟು ಮನಸೋ ಇಚ್ಚೆ ಹಲ್ಲೆ ನಡೆಸಿದ ಬೋರ್ ವೆಲ್ ಮಾಲೀಕ ಮತ್ತು ಗ್ಯಾಂಗ್
ಆಫೀಸ್ ನಲ್ಲೆ ಹಲ್ಲೆ ಮಾಡಿದ್ದು ಸಾಲದು ಅಂತ ರಸ್ತೆಗೆ ಎಳೆತಂದು ಅನಿಲ ಅಂಡ್ ಗ್ಯಾಂಗ್ ಹಲ್ಲೆ ನಡೆಸಿದ್ದಾರೆ. ಇನ್ನು ಅನಿಲನ ಮೇಲೆ ಈ ರೀತಿ ಆರೋಪ ಕೇಳಿ ಬರ್ತಿರೋದು ಇದೆ ಮೊದಲಲ್ಲ.
ಬೆಂಗಳೂರು: ತನ್ನ ತಾಯಿಗೆ ಬೈದಿದ್ದನ್ನು ಪ್ರಶ್ನಿಸಿದ್ದಕ್ಕೆ ಹಣೆಗೆ ಗನ್ ಇಟ್ಟು ನಡು ರಸ್ತೆಯಲ್ಲಿ ಹಾಡಹಗಲೇ ಮನಸೋ ಇಚ್ಚೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾಯಲ್ ಬೋರ್ ವೆಲ್ ಮಾಲೀಕ ಅನಿಲ ಮತ್ತು ಆತನ ಗ್ಯಾಂಗ್ ಮಾರಾಕಸ್ತ್ರಗಳಿಂದ ಹಲ್ಲೆ ನಡೆಸಿ ನಾನ್ ಯಾರು ಗೊತ್ತಾ? ನನ್ನ ತಂಟೆಗೆ ಬಂದ್ರೆ ಸುಟ್ಟು ಬಿಡ್ತೀನಿ ಅಂತ ಗನ್ ಇಟ್ಟು ಅವಾಜ್ ಹಾಕಿದ್ದಾರೆ. ಅಣ್ಣ ತಮ್ಮನಿಗೆ ಹಣೆ ಮತ್ತು ಬಾಯಿಗೆ ಗನ್ ಇಟ್ಟು ದರ್ಪ ಮೆರೆದಿದ್ದಾರೆ. ಸದ್ಯ ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವರದರಾಜು ಮತ್ತು ಚಂದನ್ ಬಂಧಿತ ಆರೋಪಿಗಳು. ಪ್ರಮುಖ ಆರೋಪಿ ಅನಿಲ್ ಮತ್ತು ಭರತ್ ಗಾಗಿ ಪೊಲೀಸರಿಂದ ಶೋಧ ಮುಂದುವರೆದಿದೆ.
ಬೆಂಗಳೂರಿನ ಮುದ್ದಯ್ಯನಪಾಳ್ಯ ಮುಖ್ಯರಸ್ತೆಯಲ್ಲಿ ರಾಯಲ್ ಬೋರ್ ವೆಲ್ ಮಾಲೀಕ ಅನಿಲನ ಆರ್ಭಟ ನೋಡಿ ಏರಿಯ ಜನ ಕಂಗಾಲಾಗಿದ್ದಾರೆ. ಬಾಡಿಗೆ ಮನೆ ಖಾಲಿ ಮಾಡೋ ವಿಚಾರಕ್ಕೆ ಮಹಿಳೆ ಜೊತೆ ಅನಿಲನ ಭಾಮೈದ ಕಿರಿಕ್ ಮಾಡಿಕೊಂಡಿದ್ದ. ಹೀಗಾಗಿ ತನ್ನ ತಾಯಿಗೆ ಬೈದಿದ್ದನ್ನ ಪ್ರಶ್ನಿಸಿ ಕೌಶಿಕ್ ಎಂಬಾತ ಫೋನ್ ನಲ್ಲಿ ಮಾತನಾಡಿದ್ದ. ಈ ವೇಳೆ ಮಾತುಕತೆಗೆ ಅಂತ ಅನಿಲನ ಬೋರ್ ವೆಲ್ ಆಫೀಸ್ ಗೆ ಕೌಶಿಕ್ ಮತ್ತು ತಮ್ಮ ನಂದನ್ ಬಂದಿದ್ದರು. ಈ ವೇಳೆ ನಾವ್ಯಾರು ಅಂತ ಗೊತ್ತಿಲ್ಲದೆ ಮಾತಾಡ್ತಿಯಾ ಆಫೀಸ್ ಗೆ ಬರೋವಷ್ಟು ಧಮ್ ಇದ್ಯಾ ಎಂದು ಹಲ್ಲೆ ಮಾಡಿದ್ದಾರೆ. ಅನಿಲ, ಭರತ್ ಮತ್ತು ಆತನ ಪುಂಡ ಪಟಾಲಂ ನಿಂದ ಕೌಶಿಕ್ ಹಾಗೂ ನಂದನ್ ಮೇಲೆ ಹಲ್ಲೆ ನಡೆದಿದೆ.
ಆಫೀಸ್ ನಲ್ಲೆ ಹಲ್ಲೆ ಮಾಡಿದ್ದು ಸಾಲದು ಅಂತ ರಸ್ತೆಗೆ ಎಳೆತಂದು ಅನಿಲ ಅಂಡ್ ಗ್ಯಾಂಗ್ ಹಲ್ಲೆ ನಡೆಸಿದ್ದಾರೆ. ಇನ್ನು ಅನಿಲನ ಮೇಲೆ ಈ ರೀತಿ ಆರೋಪ ಕೇಳಿ ಬರ್ತಿರೋದು ಇದೆ ಮೊದಲಲ್ಲ. ಈ ಹಿಂದೆ ಕೂಡ ಸರ್ವಿಸ್ ಗನ್ ನಿಂದ ಏರ್ ಫೈರ್ ಮಾಡಿ ಠಾಣೆ ಮೆಟ್ಟಿಲೇರಿದ್ದ. ಸದ್ಯ ಅನಿಲ ಮತ್ತು ಆತನ ಗ್ಯಾಂಗ್ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕೊಲೆಯತ್ನ ಸೇರಿದಂತೆ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಕೇಸ್ ದಾಖಲಾಗಿದೆ. ಎಫ್ಐಆರ್ ಆಗ್ತಿದ್ದಂತೆ ಪೊಲೀಸರಿಗೆ ಹೆದರಿ ಅನಿಲ ತಲೆ ಮರೆಸಿಕೊಂಡಿದ್ದಾನೆ. ಅನ್ನಪೂರ್ಣೇಶ್ವರಿ ನಗರ ಪೊಲೀಸರು ಅನಿಲನನ್ನ ಸೆರೆ ಹಿಡಿಯಲು ಬಲೆ ಬೀಸಿದ್ದಾರೆ.
Published On - 2:41 pm, Wed, 2 November 22