ಸಕಾಲ ದಶಮಾನೋತ್ಸವ: ನೂತನ ವೆಬ್‌ಸೈಟ್ ಲೋಕಾರ್ಪಣೆ
ಸಕಾಲ ಜಾರಿಯಲ್ಲಿ ಉತ್ತಮ ಸಾಧನೆ ಮಾಡಿ, ಮೊದಲ ಮೂರು ಸ್ಥಾನದಲ್ಲಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸಚಿವರು ಪ್ರಶಂಸನಾ ಪತ್ರ ವಿತರಿಸಿದರು
ಬೆಂಗಳೂರು: ಕಾಲಮಿತಿಯಲ್ಲಿ ಸರ್ಕಾರಿ ಸೇವೆಗಳನ್ನು ಒದಗಿಸುವ ಭರವಸೆ ನೀಡುವ ಸಕಾಲ ಯೋಜನೆ ಜಾರಿಗೊಳಿಸಿ 10 ವರ್ಷವಾದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಸೋಮವಾರ (ಏಪ್ರಿಲ್ 4) ಸಕಾಲ ದಶಮಾನೋತ್ಸವ ಕಾರ್ಯಕ್ರಮಕ್ಕೆ ಶಿಕ್ಷಣ ಮತ್ತು ಸಕಾಲ ಖಾತೆ ಸಚಿವ ಬಿ.ಸಿ.ನಾಗೇಶ್ ಚಾಲನೆ ನೀಡಿದರು. 2012-2022ರ 10 ವರ್ಷಗಳಲ್ಲಿ ಒಟ್ಟು 26 ಕೋಟಿಗೂ ಹೆಚ್ಚು (26,56,63,232) ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ 26,41,38,646 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಶೇ 95.07ರಷ್ಟು ಅರ್ಜಿಗಳಿಗೆ ಸರಿಯಾದ ರೀತಿಯಲ್ಲಿ ಪರಿಹಾರ ಒದಗಿಸಲಾಗಿದೆ. 99 ವಿವಿಧ ಇಲಾಖೆಗಳ 1,115 ಸೇವೆಗಳು ಸಕಾಲದ ಅಧೀನಕ್ಕೆ ಬರುತ್ತವೆ ಎಂದು ಸಚಿವರು ಮಾಹಿತಿ ನೀಡಿದರು. ಸಕಾಲ ಇಲಾಖೆಯ ನೂತನ ವೆಬ್‌ಸೈಟ್ ಮತ್ತು ಸಕಾಲ ಪೋಸ್ಟರ್ಗಳನ್ನೂ ಇದೇ ಸಂದರ್ಭ ಲೋಕಾರ್ಪಣೆ ಮಾಡಲಾಯಿತು. ಸಕಾಲ ಜಾರಿಯಲ್ಲಿ ಉತ್ತಮ ಸಾಧನೆ ಮಾಡಿ, ಮೊದಲ ಮೂರು ಸ್ಥಾನದಲ್ಲಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸಚಿವರು ಪ್ರಶಂಸನಾ ಪತ್ರ ವಿತರಿಸಿದರು. ಸಕಾಲ ಕಿಯೋಸ್ಕ್ ವ್ಯವಸ್ಥೆ, ಕಾರ್ಯನಿರ್ವಹಣೆಯ ವಿವರಣೆ ಆಧರಿತ ಮ್ಯಾಪಿಂಗ್, ತಿರಸ್ಕೃತ ಅರ್ಜಿಗಳ ವಿಶ್ಲೇಷಣಾ ವ್ಯವಸ್ಥೆ, ಆನ್ಲೈನ್ ಮೂಲಕ ಮೇಲ್ಮನವಿ ಸಲ್ಲಿಸುವ ವ್ಯವಸ್ಥೆ, ತೀವ್ರತರವಾದ ಐಇಸಿ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸುರೇಶ್ ಕುಮಾರ್, ಮುಖ್ಯ ಕಾರ್ಯದರ್ಶಿ ರವಿಕುಮಾರ್, ಸಕಾಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಸಕಾಲ ಮಿಷನ್ ನಿರ್ದೇಶಕ ಪೊನ್ನುರಾಜ್, ಹೆಚ್ಚುವರಿ ನಿರ್ದೇಶಕಿ ಡಾ.ಬಿ.ಆರ್.ಮಮತಾ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ಯಾವುದೇ ಸೇವೆಗೆ ಸಾರ್ವಜನಿಕರು ಅರ್ಜಿ ಹಾಕಿದರೆ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದಾರೆ. ಸಕಾಲ ಬಂದ ನಂತರ ಆಡಳಿತ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಅಮೆರಿಕ ಮಾದರಿಯ ಸರ್ಕಾರಿ ವ್ಯವಸ್ಥೆಯು ಭಾರತದಲ್ಲಿಯೂ ಬರಬೇಕಿದೆ. ಅಲ್ಲಿ ಕೆಲಸ ಮಾಡಿದರೆ ಮಾತ್ರ ಉಳಿಯುತ್ತಾರೆ, ಇಲ್ಲದಿದ್ರೆ ನೋಟೀಸ್ ಕೊಡುತ್ತಾರೆ. ಇಲ್ಲಿಯೂ ಅದೇ ಮಾದರಿಯ ಕೆಲಸಗಳು ಆಗಬೇಕಿದೆ. ಹೊಸ ವೆಬ್‌ಸೈಟ್‌ನಲ್ಲಿ ಸಾಕಷ್ಟು ಸುಧಾರಣೆ ಆಗಿದೆ. ಸಕಾಲದಲ್ಲಿಯೂ ತತ್ಕಾಲ್ ಸೇವೆ ತರುವಂತೆ ಮನವಿ ಬಂದಿದೆ. ಮುಂದಿನ ದಿನಗಳ ಈ ಬೇಡಿಕೆ ಈಡೇರಿಸಲು ಯತ್ನಿಸಲಾಗುವುದು. ಮಕ್ಕಳು ಆದಾಯ ಪ್ರಮಾಣ ಪತ್ರ ಕೇಳಿದರೆ ಅದಕ್ಕಾಗಿ ಸತಾಯಿಸಬಾರದು. ಆದರೆ ಕೆಲವೆಡೆ ತಡವಾಗುತ್ತಿದೆ. ಇಂಥ ಸಂದರ್ಭಗಳಲ್ಲಿ ಸಕಾಲ ಉಪಯೋಗಕ್ಕೆ ಬರಲಿದೆ ಎಂದು ನುಡಿದರು. ಆಜಾನ್ ವಿಚಾರವಾಗಿ ಕೇಳಿದ ಪ್ರಶ್ನಿಗೆ ಪ್ರತಿಕ್ರಿಯಿಸಲು ಸಚಿವರು ನಿರಾಕರಿಸಿದರು. ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸುತ್ತಾರೆ ಎಂದು ಹೇಳಿದರು.
ಹಿಜಾಬ್ ವಿವಾದ ಕುರಿತ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಈವರೆಗೂ ತರಗತಿಗಳಲ್ಲಿ ಯಾರೂ ಹಿಜಾಬ್ ಹಾಕಿ ಬರುತ್ತಿಲ್ಲ. ಮೊದಲ ದಿನ ಮಾತ್ರ ತೊಂದರೆ ಆಯಿತು. ವಿದ್ಯಾರ್ಥಿನಿಯರ ಬಗ್ಗೆ ಸಂತೋಷ ಇದೆ. ಸರ್ಕಾರದ ನೊಟೀಸ್ ಪಾಲಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 98.3ರಷ್ಟು ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದಾರೆ. ಈ ಪೈಕಿ ಇಸ್ಲಾಂ ಧರ್ಮೀಯರ ಸರಾಸರಿ ಹಾಜರಾತಿ ಶೇ 98.4 ರಷ್ಟು ಇದೆ. ಊಹಾಪೂಹಕ್ಕೆ ಯಾವುದೇ ಬೆಲೆ ಇಲ್ಲ. ಹಾಜರಾತಿ ಎರಡೂ ಕಡೆ ಒಂದೇ ಸಂಖ್ಯೆಯಲ್ಲಿದೆ. ಕಳೆದ ವರ್ಷ ಸುಮ್ಮನೆ ಪಾಸ್ ಮಾಡುತ್ತೇವೆ ಎಂದಾಗಲೂ 8 ಲಕ್ಷ ಮಕ್ಕಳು ಪರೀಕ್ಷೆಗೆ ಬಂದಿದ್ದರು. ಈ ವರ್ಷ ಕೂಡ 8 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಪ್ರತಿವರ್ಷವೂ ಕೆಲ ಮಕ್ಕಳು ಪರೀಕ್ಷೆಗೆ ಗೈರು ಹಾಜರಾಗುತ್ತವೆ. ಅದೇ ರೀತಿ ಈ ವರ್ಷವೂ ಆಗಿದೆ. ಈ ಬಾರಿ ಪ್ರಿಪ್ರೇಟರಿ, ಮಿಡ್ ಟರ್ಮ್ ಪರೀಕ್ಷೆಗಳು ನಡೆದಿದ್ದವು. ಫಲಿತಾಂಶ ಸುಧಾರಣೆಗೆ ಇದು ನೆರವಾಗುತ್ತದೆ. ಇಂಗ್ಲಿಷ್ ವಿಷಯದ ಪರೀಕ್ಷೆ ನಡೆಯುವಾಗ ಹೆಚ್ಚು ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು ಎಂದು ವಿವರಿಸಿದರು.
ಕಾಲಮಿತಿಯಲ್ಲಿ ಸರ್ಕಾರಿ ಸೇವೆಗಳನ್ನು ಒದಗಿಸುವ ಸಕಾಲ ಯೋಜನೆ ಜಾರಿಗೊಳಿಸಿ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಇಂದು ಆಯೋಜಿಸಲಾಗಿದ್ದ ‘ಸಕಾಲ ದಶಮಾನೋತ್ಸವ’ ಕಾರ್ಯಕ್ರಮದಲ್ಲಿ ಸಕಾಲ ಇಲಾಖೆಯ ನೂತನ ವೆಬ್ಸೈಟ್ನ್ನು ಲೋಕಾರ್ಪಣೆ ಮಾಡಲಾಯಿತು ಹಾಗೂ ಸಕಾಲ ಪೋಸ್ಟರ್ ಬಿಡುಗಡೆ ಮಾಡಲಾಯಿತು. (1/2)#Sakala@CMofKarnataka pic.twitter.com/Z5ZYXWfBUY
— B.C Nagesh (@BCNagesh_bjp) April 4, 2022
ಇದನ್ನೂ ಓದಿ: Mutual Fund: ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಆರಂಭಿಸಲು ಇದು ಸಕಾಲವೇ
ಇದನ್ನೂ ಓದಿ: ಬೆಂಗಳೂರು: ಸಕಾಲಕ್ಕೆ ಚಿಕಿತ್ಸೆ ಸಿಕ್ಕರೆ ಹೃದಯ ಸ್ತಂಭನಕ್ಕೀಡಾದ ವ್ಯಕ್ತಿ ಸಾವನ್ನು ಜಯಿಸಬಹುದು; ಇಲ್ಲಿದೆ ಯಶಸ್ವಿ ಉದಾಹರಣೆ