ಬೆಂಗಳೂರು: ಬೇಸಿಗೆ ರಜೆಯಲ್ಲಿದ್ದ ಶಾಲಾ ವಿದ್ಯಾರ್ಥಿಗಳಿಗೆ ಇಂದಿನಿಂದ ರಾಜ್ಯದ್ಯಂತ ಶಾಲೆ (School) ಆರಂಭವಾಗಿದೆ. ಕೊವಿಡ್ ಕಾರಣದಿಂದ ಎರಡು ವರ್ಷ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಬಾರಿ ಬೇಗ ಅಂದರೆ ಇಂದಿನಿಂದ ಶಾಲೆ ಆರಂಭಿಸುವುದಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ. ಬೆಂಗಳೂರಿನಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಬಿಎಂಟಿಸಿ ಬಸ್ಗಳಲ್ಲಿ (BMTC Buses) ಶಾಲೆಗೆ ತೆರಳುತ್ತಾರೆ. ಹೀಗಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಾಧ್ಯಮ ಪ್ರಕಟಣೆ ಹೊರಡಿಸಿ, ಬಿಎಂಟಿಸಿ ಬಸ್ಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆ.
2021-22ರಲ್ಲಿ ಪಡೆದಿರುವ ಪಾಸ್ಗಳಿಗೆ ಜೂನ್ 30ರವರೆಗೆ ಮಾನ್ಯತೆ ಇರುತ್ತದೆ. ಮೇ 31ರವರೆಗೆ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇರುತ್ತದೆ. ಪ್ರವೇಶಾತಿ ರಶೀತಿ, ಐಡಿ ಕಾರ್ಡ್ ತೋರಿಸಿ ಮಕ್ಕಳು ಉಚಿತವಾಗಿ ಬಿಎಂಟಿಸಿ ಬಸ್ನಲ್ಲಿ ಓಡಾಡಬಹುದು ಎಂದು ಸಾರಿಗೆ ಸಂಸ್ಥೆ ತಿಳಿಸಿದೆ.
ಹಳೇ ಪಾಸ್ ತೋರಿಸಿ KSRTC ಬಸ್ಗಳಲ್ಲಿ ಸಂಚಾರ:
ಇನ್ನು ಕೆಎಸ್ಆರ್ಟಿಸಿ ಬಸ್ಗಳಲ್ಲಿ ವಿದ್ಯಾರ್ಥಿಗಳು ಇಂದಿನಿಂದ ಹಳೆ ಬಸ್ ಪಾಸ್ ತೋರಿಸಿ ಸಂಚಾರ ಮಾಡಬಹುದು. 2022-23ರ ಸಾಲಿನ ಬಸ್ ಪಾಸ್ ವಿತರಣೆ ದಿನಾಂಕ ಪ್ರಕಟಿಸುತ್ತೇವೆ. ಶೀಘ್ರದಲ್ಲೇ ದಿನಾಂಕ ಪ್ರಕಟಿಸಲಾಗುತ್ತದೆ ಎಂದು ಕೆಎಸ್ಆರ್ಟಿಸಿ ಮಾಹಿತಿ ನೀಡಿದೆ. ಪಾಸ್ಗಾಗಿ ಸೇವಾಸಿಂಧು ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಬಹುದು. ನಿಯಮಾನುಸಾರ ಉಚಿತ, ರಿಯಾಯಿತಿ ಪಾಸ್ ಪಡೆಯಬಹುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಮಾಧ್ಯಮ ಪ್ರಕಟಣೆ ಬಿಡುಗಡೆಯಾಗಿದೆ.
ಮೊದಲ ದಿನದಿಂದಲೇ ಬಿಸಿಯೂಟ:
ಎರಡು ವಾರಗಳ ಬೇಸಿಗೆ ರಜೆಗೆ ಬ್ರೇಕ್ ಹಾಕಿ ಶಾಲೆಗಳು ಆರಂಭವಾಗುತ್ತಿದ್ದು, ಮೊದಲ ದಿನದಿಂದಲೇ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸಿಗಲಿದೆ. ಇಂದಿನಿಂದ ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗುತ್ತಿದೆ. ಕೊರೊನಾದಿಂದ ಕಲಿಕಾ ಹಿನ್ನಡೆ ಸರಿದೂಗಿಸಲು ಮಕ್ಕಳಿಗೆ ವರ್ಷ ಪೂರ್ತಿ ಕಲಿಕಾ ಚೇತರಿಕೆ ನಡೆಯಲಿದೆ. ಮಕ್ಕಳನ್ನು ಬಹಳ ಸಂತೋಷದಿಂದ ಬರಮಾಡಿಕೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ. ಶಾಲೆಗಳಲ್ಲಿ ಸಿಹಿ ಖಾದ್ಯವನ್ನು ನೀಡಿ ಮಕ್ಕಳ ಸ್ವಾಗತಕ್ಕೆ ತಯಾರಿ ಮಾಡಲಾಗುತ್ತಿದೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:59 am, Mon, 16 May 22