ಬೆಂಗಳೂರಿನಲ್ಲಿ ಐಷಾರಾಮಿ ಆಡಿ ಕ್ಯೂ3 ಕಾರು ಭೀಕರ ಅಪಘಾತ; ಕಾರಿನಲ್ಲಿದ್ದ 7 ಮಂದಿ ದುರ್ಮರಣ
ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಐಷಾರಾಮಿ ಆಡಿ ಕ್ಯೂ (Audi Car) 3 ಕಾರಿನಲ್ಲಿದ್ದ ಮೂವರು ಮಹಿಳೆಯರು ನಾಲ್ಕು ಪುರುಷರು ಸಾವಿಗೀಡಾಗಿದ್ದಾರೆ.
ಬೆಂಗಳೂರು: ಬೆಂಗಳೂರಿನ ಕೋರಮಂಗಲದಲ್ಲಿ ತಡರಾತ್ರಿ ಭೀಕರ ಅಪಘಾತವೊಂದು (Accident) ಸಂಭವಿಸಿದ್ದು, ಐಷಾರಾಮಿ ಕಾರು ಫುಟ್‌ಪಾತ್ ಮೇಲಿನ ಕಂಬಕ್ಕೆ ಡಿಕ್ಕಿಯಾಗಿ 7 ಜನರ ದುರ್ಮರಣಕ್ಕೀಡಾಗಿದ್ದಾರೆ. ಮಂಗಳ ಕಲ್ಯಾಣ ಮಂಟಪದ ಬಳಿ ಈ ಭೀಕರ ದುರಂತ ಘಟಿಸಿದ್ದು, ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಐಷಾರಾಮಿ ಆಡಿ ಕ್ಯೂ3 (Audi Car) ಕಾರಿನಲ್ಲಿದ್ದ ಮೂವರು ಮಹಿಳೆಯರು ನಾಲ್ಕು ಪುರುಷರು ಸಾವಿಗೀಡಾಗಿದ್ದಾರೆ.
ತಡರಾತ್ರಿ ರಾತ್ರಿ 1:30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕೋರಮಂಗಲದ ಮಂಗಳ ಕಲ್ಯಾಣಮಂಟಪದ ಬಳಿ ಫುಟ್‌ಪಾತ್ ಮೇಲಿನ ಕಂಬಕ್ಕೆ ಕಾರು ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಟಿವಿ9ಗೆ ಹೇಳಿಕೆ ನೀಡಿದ್ದಾರೆ. ತಡರಾತ್ರಿ 1.45ರಿಂದ 2 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ 7 ಜನರೂ ಮೃತಪಟ್ಟಿದ್ದಾರೆ. 6 ಜನರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬರು ಆಸ್ಪತ್ರೆಗೆ ದಾಖಲಿಸಿದ ವೇಳೆ ಮೃತಪಟ್ಟಿದ್ದಾರೆ. ಅಪಘಾತಕ್ಕೆ ಅತಿ ವೇಗವೇ ಕಾರಣ. ನಿರ್ಲಕ್ಷ್ಯ, ವೇಗದ ಚಾಲನೆಯಿಂದ ಅಪಘಾತ ಸಂಭವಿಸಿದೆ. ಫುಟ್‌ಪಾತ್ ಹತ್ತಿ 2 ಬೊಲ್ಲಾರ್ಡ್ಸ್‌ಗೆ ಕಾರು ಡಿಕ್ಕಿಯಾಗಿದೆ. ಬಳಿಕ ಪಕ್ಕದ ಕಟ್ಟಡದ ಗೋಡೆಗೂ ಗುದ್ದಿದೆ ಎಂದು ಮಾಹಿತಿ ನೀಡಿದ್ದಾರೆ.
ಕಾರಿನಲ್ಲಿದ್ದವರು ಎಲ್ಲಿಂದ ಬರುತ್ತಿದ್ದರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಮದ್ಯ ಸೇವಿಸಿದ್ದರಾ ಎಂಬ ಬಗ್ಗೆ ತನಿಖೆಗೆ ಸೂಚಿಸಿದ್ದೇನೆ. ಎಲ್ಲಾ ಬೀದಿಗಳಲ್ಲಿ ನಿರ್ಜನವಾಗಿದ್ದಾಗ ಚಾಲಕ ವೇಗವಾಗಿ ಓಡಿಸಿದ್ದಾನೆ. ಎಲ್ಲಿಗೆ ಹೋಗ್ತಿದ್ರು, ಎಲ್ಲಿಂದ ಬರ್ತಾ ಇದ್ರು ಎಂಬ ಬಗ್ಗೆ ತನಿಖೆಯಾಗುತ್ತಿದೆ ಎಂದಿದ್ದಾರೆ.
ಕಾರಿನ ಮುಂದಿನ ಸೀಟ್‌ನಲ್ಲಿ ಮೂವರು ಕುಳಿತಿದ್ದರು ಹಾಗೂ ಹಿಂಬದಿ ಸೀಟ್‌ನಲ್ಲಿ ನಾಲ್ವರು ಕುಳಿತಿದ್ದರು. ಕಾರಿನಲ್ಲಿದ್ದ 7 ಜನರಲ್ಲಿ ಯಾರೂ ಸೀಟ್ ಬೆಲ್ಟ್ ಹಾಕಿರಲಿಲ್ಲ. ಇದರಿಂದ ಕಾರಿನಲ್ಲಿದ್ದ ಏರ್‌ಬ್ಯಾಗ್ ಸಹ ಓಪನ್ ಆಗಿಲ್ಲ ಎಂದು ಬೆಂಗಳೂರಿನಲ್ಲಿ ಡಾ.ಬಿ.ಆರ್.ರವಿಕಾಂತೇಗೌಡ ಹೇಳಿದ್ದಾರೆ. ಮೃತರೆಲ್ಲರೂ 25ರಿಂದ 30 ವರ್ಷ ವಯಸ್ಸಿನವರು. ಓರ್ವ ದಂಪತಿ ಸಹ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದೆ. ಬೆಂಗಳೂರಲ್ಲಿ ಕೆಲಸ ಮಾಡಿಕೊಂಡು ಕೆಲವರು ಪಿಜಿಯಲ್ಲಿದ್ದರು. ಮೃತರೆಲ್ಲರೂ ಸ್ನೇಹಿತರು, 20 ರಿಂದ 30 ವರ್ಷದವರು. ಹೊಸೂರು ಮೂಲದ ಕರುಣಾಸಾಗರ್, ಪತ್ನಿ ಬಿಂದು(28), ಕೇರಳ ಮೂಲದ ಅಕ್ಷಯ್ ಗೋಯಲ್, ಇಶಿತಾ(21), ಧನುಷಾ(21), ಹುಬ್ಬಳ್ಳಿಯ ರೋಹಿತ್, ಹರಿಯಾಣ ಮೂಲದ ಉತ್ಸವ್ ಮೃತ ದುರ್ದೈವಿಗಳಾಗಿದ್ದು ಮೃತರಲ್ಲಿ ಕೆಲವರು ಕೋರಮಂಗಲದ ಪಿಜಿಯಲ್ಲಿ ವಾಸವಿದ್ದರು ಎಂದು ತಿಳಿದುಬಂದಿದೆ. ಆಡಿ Q3 ಕಾರು 5 ಆಸನವನ್ನು ಹೊಂದಿದ್ದು, ಅಪಘಾತದ ವೇಳೆ 7 ಜನ ಪ್ರಯಣಿಸುತ್ತಿದ್ದರು. ಯಾರೊಬ್ಬರೂ ಸಹ ಸೀಟ್ ಬೆಲ್ಟ್ ಧರಿಸಿರಲಿಲ್ಲ. ಅತಿವೇಗವಾಗಿ ಹೋಗುತ್ತಿದ್ದರು. ಸಂಚಾರಿ ನಿಯಮ ಉಲ್ಲಂಘನೆಯೇ ಅಪಘಾತಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ. ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೋರಮಂಗಲದಲ್ಲಿ ಐಷಾರಾಮಿ ಕಾರು ಅಪಘಾತ, ಎಸಿಪಿಯಿಂದ ತನಿಖೆ: ಸಂಚಾರಿ ಆಯುಕ್ತ ರವಿಕಾಂತೇಗೌಡ ಹೇಳಿದ್ದೇನು?
(Seven Killed in Bengaluru Audi q Car Accident)
Published On - 6:33 am, Tue, 31 August 21