ಮುಜರಾಯಿ ದೇಗುಲಗಳ ಆದಾಯಕ್ಕೆ ಬೂಸ್ಟ್​​ ಕೊಟ್ಟ ಶಕ್ತಿ ಯೋಜನೆ: ಭಕ್ತರ ಜೊತೆ ಕಾಣಿಕೆ ಸಂಗ್ರಹವೂ ಹೆಚ್ಚಳ

ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಕರ್ನಾಟಕದ ಮುಜರಾಯಿ ದೇವಸ್ಥಾನಗಳ ಆದಾಯದಲ್ಲಿ ಭಾರಿ ಏರಿಕೆ ಕಂಡಿದೆ. ಮಹಿಳೆಯರ ಉಚಿತ ಬಸ್ ಪ್ರಯಾಣದಿಂದ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಪ್ರಮುಖ ದೇಗುಲಗಳ ಕಾಣಿಕೆ ಸಂಗ್ರಹದಲ್ಲಿಯೂ ಗಣನೀಯ ಏರಿಕೆ ಕಂಡುಬಂದಿದೆ. ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಪ್ರಮುಖ ದೇವಸ್ಥಾನಗಳಿರುವ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಬಸ್ ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆಯೂ ದ್ವಿಗುಣವಾಗಿದೆ ಎನ್ನಲಾಗಿದೆ.

ಮುಜರಾಯಿ ದೇಗುಲಗಳ ಆದಾಯಕ್ಕೆ ಬೂಸ್ಟ್​​ ಕೊಟ್ಟ ಶಕ್ತಿ ಯೋಜನೆ: ಭಕ್ತರ ಜೊತೆ ಕಾಣಿಕೆ ಸಂಗ್ರಹವೂ ಹೆಚ್ಚಳ
ಸಾಂದರ್ಭಿಕ ಚಿತ್ರ

Updated on: May 28, 2026 | 7:44 PM

ಬೆಂಗಳೂರು, ಮೇ 28: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯ ಪರಿಣಾಮ ರಾಜ್ಯದ ಮುಜರಾಯಿ ದೇಗುಲಗಳಲ್ಲಿನ ಆದಾಯದಲ್ಲಿ ಗಣನೀಯ ಹೆಚ್ಚಳ ಆಗಿರುವುದು ಕಂಡುಬಂದಿದೆ. ಈ ಯೋಜನೆಯಡಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಸಿಗುತ್ತಿರುವ ಕಾರಣ ದೇಗುಲಗಳಿಗೆ ಬರುತ್ತಿರುವ ಭಕ್ತರ ಸಂಖ್ಯೆ ಹಡೆಚ್ಚಿದೆ. ಹೀಗಾಗಿ ಆದಾಯವೂ ಏರಿಕೆ ಕಾಣುತ್ತಿದೆ ಎನ್ನಲಾಗಿದೆ.

ಆದಾಯದಲ್ಲಿ ಗಮನಾರ್ಹ ಹೆಚ್ಚಳ

ವಿಶೇಷವಾಗಿ ಮಹಿಳೆಯರು ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವ ಪರಿಣಾಮ, ರಾಜ್ಯದ ಪ್ರಮುಖ 15 ದೇವಸ್ಥಾನಗಳ ಆದಾಯದಲ್ಲಿ ಗಮನಾರ್ಹ ಹೆಚ್ಚಳವಾಗಿದೆ. ಬೆಂಗಳೂರಿನ ಬನಶಂಕರಿ ದೇವಸ್ಥಾನ ಹಾಗೂ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಹಲವು ದೇವಾಲಯಗಳಲ್ಲಿನ ಕಾಣಿಕೆ ಸಂಗ್ರಹದಲ್ಲಿ ಏರಿಕೆಯಾಗಿದೆ. 2025-26ನೇ ಸಾಲಿನಲ್ಲಿ ಈ ದೇವಸ್ಥಾನಗಳ ಒಟ್ಟು ಆದಾಯ 613.5 ಕೋಟಿಯಿಂದ 666.2 ಕೋಟಿಗೆ ಏರಿಕೆಯಾಗಿ, ಶೇಕಡಾ 8.6ರಷ್ಟು ಹೆಚ್ಚಳ ಕಂಡಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳ ಪರಿಷ್ಕರಣೆಗೆ ನಿರ್ಧರಿಸಿದ ರಾಜ್ಯ ಸರ್ಕಾರ

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಮೂರು ವರ್ಷಗಳ ಹಿಂದೆ ಆರಂಭವಾದ ಶಕ್ತಿ ಯೋಜನೆ ರಾಜ್ಯದ ಯಾತ್ರಾ ಪ್ರವಾಸೋದ್ಯಮಕ್ಕೆ ಮಹತ್ವದ ಉತ್ತೇಜನ ನೀಡಿದೆ. ಮಹಿಳೆಯರು ಪ್ರಯಾಣಿಸುವಾಗ ಕುಟುಂಬದವರನ್ನೂ ಜೊತೆ ಕರೆದುಕೊಂಡು ಬರುತ್ತಾರೆ. ಇದರಿಂದ ಭಕ್ತರ ಆಗಮನ ಹೆಚ್ಚಾಗಿದೆ. ದೇವಸ್ಥಾನಗಳಿಂದ ಬರುವ ಆದಾಯವನ್ನು ಅದೇ ದೇವಸ್ಥಾನದ ಅಭಿವೃದ್ಧಿಗೆ ಬಳಸಲಾಗುತ್ತದೆ. ಇತರೆ ಮುಜರಾಯಿ ದೇವಸ್ಥಾನಗಳಿಗೆ ಅನುದಾನ ವರ್ಗಾಯಿಸಲು ಸರ್ಕಾರದ ಅನುಮತಿ ಅಗತ್ಯ ಎಂದು ಅವರು ತಿಳಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರ ಪ್ರಕಾರ, ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಪ್ರಮುಖ ದೇವಸ್ಥಾನಗಳಿರುವ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಬಸ್ ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಕೆಎಸ್‌ಆರ್‌ಟಿಸಿ ಬಳಿ 8,900 ಬಸ್‌ಗಳಿದ್ದು, ಅದರಲ್ಲಿ 7,000ಕ್ಕೂ ಹೆಚ್ಚು ಸಾಮಾನ್ಯ ಬಸ್‌ಗಳಲ್ಲಿ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಸೌಲಭ್ಯ ಇದೆ. ರಾಜ್ಯದ ಪ್ರಮುಖ ದೇವಾಲಯಗಳ ಮಾರ್ಗಗಳಲ್ಲಿ ಈ ಬಸ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಓಡಿಸಲಾಗುತ್ತಿದೆ. ಹಬ್ಬದ ಸಂದರ್ಭಗಳು ಹಾಗೂ ಶಾಲಾ ರಜಾದಿನಗಳಲ್ಲಿ ಹೆಚ್ಚುವರಿ ಬಸ್‌ಗಳನ್ನೂ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿರೋದಾಗಿ ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us