ಬೆಂಗಳೂರಿನಲ್ಲಿ ಆಯೋಜಿಸಿದ್ದ ದಕ್ಷಿಣ ಆಫ್ರಿಕಾದ ಹಾಸ್ಯನಟ ಟ್ರೆವರ್ ನೋಹ್ನ ಕಾರ್ಯಕ್ರಮ ರದ್ದು
ಪ್ರಿಯ ಬೆಂಗಳೂರಿಗರೇ, ನಿಮ್ಮ ಅದ್ಭುತ ನಗರದಲ್ಲಿ ಪ್ರದರ್ಶನ ನೀಡಲು ನಾನು ತುಂಬಾ ಎದುರು ನೋಡುತ್ತಿದ್ದೆ. ಆದರೆ ತಾಂತ್ರಿಕ ಸಮಸ್ಯೆಯಿಂದ ನಾವು ಎರಡೂ ಪ್ರದರ್ಶನಗಳನ್ನು ರದ್ದುಗೊಳಿಸಬೇಕಾಯಿತು ಎಂದು ದಕ್ಷಿಣ ಆಫ್ರಿಕಾದ ಖ್ಯಾತ ಹಾಸ್ಯನಟ ಟ್ರೆವರ್ ನೋಹ್ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು ಸೆ.28: ಬುಧವಾರ ನಗರದಲ್ಲಿ ಆಯೋಜನೆಗೊಂಡಿದ್ದ ದಕ್ಷಿಣ ಆಫ್ರಿಕಾದ (South Africa) ಹಾಸ್ಯನಟ ಟ್ರೆವರ್ ನೋಹ್ ಹ್ಯಾಸ ಕಾರ್ಯಕ್ರಮ ತಾಂತ್ರಿಕ ಕಾರಣದಿಂದ ರದ್ದಾಗಿದ್ದು, ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಕಾರ್ಯಕ್ರಮ ರದ್ದಾದ ಹಿನ್ನೆಲೆಯಲ್ಲಿ ಟ್ರೆವರ್ ನೋಹ್ (Trevor Noah) ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿ ಹಣ ವಾಪಸ್ ನೀಡುವುದಾಗಿ ತಿಳಿಸಿದ್ದಾರೆ. ಹೆಬ್ಬಾಳ ಮೇಲ್ಸೇತುವೆ ಬಳಿಯ ಮ್ಯಾನ್ಫೋ ಕನ್ವೆನ್ಷನ್ ಸೆಂಟರ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. BookMyShow ನಲ್ಲಿ 2 ಸಾವಿರ ರೂ.ಗೆ ಟಿಕೆಟ್ ಮಾರಾಟವಾಗಿವೆ. ಕಾರ್ಯಕ್ರಮವು ಸಂಜೆ 7.30 ಕ್ಕೆ ಪ್ರಾರಂಭವಾಯಿತು. ಆದರೆ ಸರಿಯಾಗಿ ನೋಹ ಅವರ ಧ್ವನಿ ಪ್ರೇಕ್ಷಕರಿಗೆ ಕೇಳಿಸುತ್ತಿರಲಿಲ್ಲ.
ಹೀಗಾಗಿ ಪ್ರೇಕ್ಷಕರು ನಿಮ್ಮ ಧ್ವನಿ ಸ್ಪಷ್ಟವಾಗಿ ಕೇಳಿಸುತ್ತಿಲ್ಲ ಎಂದು ದೂರಿದರು. ಇದಕ್ಕೆ ನೋಹ್ ಮತ್ತು ಅವರ ತಂಡವು ಧ್ವನಿ ವ್ಯವಸ್ಥೆಗಳನ್ನು ಪರಿಶೀಲಿಸಿದರು. ರಾತ್ರಿ 8.30 ಆದರೂ ಸರಿಹೋಗದೆ ಇದ್ದಾಗ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಸಂಘಟಕರು ಘೋಷಿಸಿದರು.
#TrevorNoah leaves the stage at his show in #Bengaluru after people who finally managed to enter the event crossing the #ORR traffic gridlock were unable to hear the performers due to audio issues. pic.twitter.com/eyvWoDuyn5
— TheNewsMinute (@thenewsminute) September 27, 2023
ಕಾರ್ಯಕ್ರಮ ರದ್ದಾದ ಬಗ್ಗೆ ನೋಹ್ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಟ್ವೀಟ್ ಮಾಡಿ “ಪ್ರಿಯ ಬೆಂಗಳೂರಿಗರೇ, ನಿಮ್ಮ ಅದ್ಭುತ ನಗರದಲ್ಲಿ ಪ್ರದರ್ಶನ ನೀಡಲು ನಾನು ತುಂಬಾ ಎದುರು ನೋಡುತ್ತಿದ್ದೆ. ಆದರೆ ತಾಂತ್ರಿಕ ಸಮಸ್ಯೆಯಿಂದ ನಾವು ಎರಡೂ ಪ್ರದರ್ಶನಗಳನ್ನು ರದ್ದುಗೊಳಿಸಬೇಕಾಯಿತು. ಸಕಲ ಪ್ರಯತ್ನದ ಬಳಿಕವೂ ತಾಂತ್ರಿಕ ಸಮಸ್ಯೆ ನಿವಾರಣೆಯಾಗಲಿಲ್ಲ. ಕೊನೆಗೆ ಯಾವುದೇ ಮಾರ್ಗವಿಲ್ಲದೆ ರದ್ದುಗೊಳಿಸಬೇಕಾಯಿತು. ಎಲ್ಲಾ ಟಿಕೆಟ್ ಹಣವನ್ನು ಪೂರ್ಣ ಮರುಪಾವತಿ ಮಾಡುತ್ತೇವೆ. ಇದು ಹಿಂದೆಂದೂ ಸಂಭವಿಸಿಲ್ಲ ಕ್ಷಮಿಸಿ” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ರಿಮೇಕ್ ಹೆಸರಲ್ಲಿ ದಕ್ಷಿಣದ ಮತ್ತೊಂದು ಚಿತ್ರವನ್ನು ಹಾಳು ಮಾಡಿದ ಬಾಲಿವುಡ್; ಇಲ್ಲಿದೆ ಟ್ರೇಲರ್
ಕಾರ್ಯಕ್ರಮ ರದ್ದಿಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ
ಟಿನು ಚೆರಿಯನ್ ಅಬ್ರಹಾಂ ಎಂಬುವರು ಪ್ರತಿಕ್ರಿಯಿಸಿ “ಟ್ರಾಫಿಕ್ ಜಾಮ್ನಲ್ಲಿ ಹಲವು ಗಂಟೆಗಳ ಕಾಲ ನಿಂತು ನಿಮ್ಮ ಕಾರ್ಯಕ್ರಮಕ್ಕೆ ಬಂದ ಅಭಿಮಾನಗಳ ಬಗ್ಗೆ ಏನು ಹೇಳುತ್ತೀರಿ? ನಿಮ್ಮ ಹಣ ಸಮಯವನ್ನು ಮರುಕಳಿಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಮಾಧವಿ ಸೋಲಂಕಿ ಎಂಬುವರು ಟ್ವೀಟ್ ಮಾಡಿ, ನಿಮ್ಮನ್ನು ನೋಡಲು ತಿಂಗಳ ಹಿಂದೆಯೇ ಟಿಕೆಟ್ ಬುಕ್ ಮಾಡಿದ್ದೆ. ನಾವು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದೇವೆ. ಕಾರ್ಯಕ್ರಮ ರದ್ದಾಗಿದ್ದರಿಂದ ನಮಗೆ ತುಂಬಾ ದುಃಖವಾಗಿದೆ. ನಿಮ್ಮನ್ನು ನೋಡಲು ಎದುರು ನೋಡುತ್ತಿದ್ದ ಎಲ್ಲಾ ಭಾರತೀಯ ಅಭಿಮಾನಿಗಳ ಪರವಾಗಿ ನಾವು ವಿಷಾದಿಸುತ್ತೇವೆ ಎಂದಿದ್ದಾರೆ.
ಗುರುವಾರದಂದು ಈದ್, ಶುಕ್ರವಾರ ಕರ್ನಾಟಕ ಬಂದ್, ಶನಿವಾರ, ಭಾನುವಾರದಂದು ಮತ್ತು ಸೋಮವಾರ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಸಾಲು ಸಾಲು ರಜೆ ಬಂದಿದೆ. ಹೀಗಾಗಿ ಬೆಂಗಳೂರು ವಾಸಿಗರು ತಮ್ಮ ತಮ್ಮ ಊರುಗಳಿಗೆ ಮತ್ತು ಪ್ರವಾಸಕ್ಕೆ ತೆರಳಲು ಬುಧುವಾರ ರಾತ್ರಿ ಮುಗಿಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ನಗರದ ಹೊರಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:18 am, Thu, 28 September 23