AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅ 30ಕ್ಕೆ ಕಲಬುರ್ಗಿಯಲ್ಲಿ ಬೃಹತ್ ಒಬಿಸಿ ಸಮಾವೇಶ, 5 ಲಕ್ಷ ಜನ ಸೇರುವ ನಿರೀಕ್ಷೆ: ಸಚಿವ ಸುನಿಲ್ ಕುಮಾರ್

Sunil Kumar: ದೈವ ನರ್ತನವನ್ನು ಇಷ್ಟು ದಿನ ಜಾನಪದ ಚಟುವಟಿಕೆಯಿಂದ ಹೊರಗಿಡಲಾಗಿದ್ದು, ಈಗ ಅದನ್ನು ಜಾನಪದ ಚಟುವಟಿಕೆಯಾಗಿ ಪರಿಗಣಿಸಿ ಮಾಸಾಶನ ಘೋಷಿಸಿದ್ದೇವೆ ಎಂದು ಸುನಿಲ್ ಕುಮಾರ್ ಹೇಳಿದರು.

ಅ 30ಕ್ಕೆ ಕಲಬುರ್ಗಿಯಲ್ಲಿ ಬೃಹತ್ ಒಬಿಸಿ ಸಮಾವೇಶ, 5 ಲಕ್ಷ ಜನ ಸೇರುವ ನಿರೀಕ್ಷೆ: ಸಚಿವ ಸುನಿಲ್ ಕುಮಾರ್
ಸಚಿವ ಸುನಿಲ್ ಕುಮಾರ್ (ಎಡಚಿತ್ರ) ಮತ್ತು ದೈವ ನರ್ತನ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Oct 27, 2022 | 3:32 PM

Share

ಬೆಂಗಳೂರು: ವೀರಗಾಸೆ ಮತ್ತು ಕಂಸಾಳೆ ಕಲಾವಿದರಿಗೆ ಈ ಮೊದಲಿನಿಂದಲೂ ಮಾಸಾಶನವನ್ನು ಕೊಡಲಾಗುತ್ತಿದೆ. ಆದರೆ ದೈವ ನರ್ತನವನ್ನು ಜಾನಪದ ಚಟುವಟಿಕೆಯಿಂದ ಹೊರಗಿಟ್ಟಿದ್ದ ಕಾರಣ ಅವರಿಗೆ ಮಾಸಾಶನ ಸಿಗುತ್ತಿರಲಿಲ್ಲ. ಈಗ ಅವರನ್ನೂ ಜಾನಪದ ಕಲಾವಿದರ ಪಟ್ಟಿಯಲ್ಲಿ ಸೇರಿಸಿ ಮಾಸಾಶನ ಘೋಷಿಸಿದ್ದೇವೆ. ಇದರಲ್ಲಿ ಯಾವುದೇ ಗೊಂದಲ ಮಾಡುವುದು ಬೇಡ ಎಂದು ಸಚಿವ ಸುನಿಲ್ ಕುಮಾರ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು. ಹೆಡ್ ಬುಷ್ ಸಿನಿಮಾ‌ ವಿವಾದ ಕುರಿತು ಪ್ರತಿಕ್ರಿಯಿಸಿದ ಅವರು, ಚಿತ್ರದ ನಿರ್ಮಾಪಕರು ಮರು ಪರಿಶೀಲನೆ ಮಾಡುವುದು ಒಳಿತು. ನಾನು ಆ ಸಿನಿಮಾ‌ ನೋಡಿಲ್ಲ. ಪುರುಸೊತ್ತಾದರೆ ಸಿನಿಮಾ ನೋಡುತ್ತೇನೆ. ರಾಜ್ಯೋತ್ಸವ ಪ್ರಶಸ್ತಿಗಳ ಪಟ್ಟಿಯನ್ನು ಅ 30 ರಂದು ಪ್ರಕಟಿಸಬಹುದು ಎಂದು ಹೇಳಿದರು.

ರಾಜ್ಯದಲ್ಲಿ ನಾಳೆ ನಡೆಸಲು ಉದ್ದೇಶಿಸಿರುವ ಕೋಟಿ ಕಂಠಗಳ ಗಾಯನ ಕಾರ್ಯಕ್ರಮಕ್ಕೆ ಸಿನಿಮಾ ರಂಗದ ಸಹಕಾರ ಇಲ್ಲದಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಈ ಕುರಿತಂತೆ ಸಿನಿಮಾ‌ ರಂಗದ ಗಣ್ಯರೊಂದಿಗೆ ಪತ್ರ ವ್ಯವಹಾರ ಮಾಡಲಾಗಿದೆ. ಅವರಿಗೆ ಆಮಂತ್ರಣ ಕೂಡಾ ಕೊಡಲಾಗಿದೆ. ನಾಳೆ ಕಂಠೀರವ ಕ್ರೀಡಾಂಗಣ ಮತ್ತು ವಿಧಾನಸೌಧದ ಮುಂದೆ ಅವರು ಪಾಲ್ಗೊಳ್ಳುವ ವಿಶ್ವಾಸ ಇದೆ ಎಂದು ಹೇಳಿದರು.

ಕಲಬುರ್ಗಿಯಲ್ಲಿ ಒಬಿಸಿ ಸಮಾವೇಶ

ಅ 30ರಂದು ಕಲಬುರಗಿಯಲ್ಲಿ ಒಬಿಸಿ ಸಮಾವೇಶ ಆಯೋಜಿಸಲಾಗುವುದು ಎಂದು ಸುನಿಲ್ ಕುಮಾರ್ ಇದೇ ಸಂದರ್ಭದಲ್ಲಿ ಘೋಷಿಸಿದರು. ಬಿಜೆಪಿಯ ಒಬಿಸಿ ಮೋರ್ಚಾ ಸಮಾವೇಶ ಆಯೋಜಿಸಿದೆ. ಸಮಾವೇಶದಲ್ಲಿ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್​, ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಲಕ್ಷ್ಮಣ ಸೇರಿ ಪ್ರಮುಖರು ಭಾಗವಹಿಸಲಿದ್ದಾರೆ. 5 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಕಲಬುರ್ಗಿ ಕೇಂದ್ರಿತವಾಗಿ ಐತಿಹಾಸಿಕ ಸಮಾವೇಶ ನಡೆಯಲಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಹಿಂದುಳಿದ ವರ್ಗಗಳಿಗೆ ಪ್ರಾಧಾನ್ಯತೆ ಕೊಡಲಾಗಿದೆ. ಬಿಜೆಪಿಯು ಹಿಂದುಳಿದ ವರ್ಗದಲ್ಲಿ ಸಣ್ಣಸಣ್ಣ ಸಮುದಾಯಗಳನ್ನು ಗುರುತಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಸಿದ್ದರಾಮಯ್ಯ ತಾವು ಹಿಂದುಳಿದ ವರ್ಗಗಳ ಧ್ವನಿ ಎನ್ನುವುದನ್ನು ಭಾಷಣದಲ್ಲಿ ಹೇಳಿದ್ದಾರೆಯೇ ಹೊರತು ಕಾರ್ಯರೂಪಕ್ಕೆ ತರಲಿಲ್ಲ. ಒಬಿಸಿ ಸಮುದಾಯಗಳು ದೊಡ್ಡ ರಾಜಕೀಯ ಶಕ್ತಿಯಾಗಿ ಮುಂದಿನ ದಿನಗಳಲ್ಲಿ ಸಕ್ರೀಯರಾಗುತ್ತವೆ. ಮೊದಲ ಬಾರಿಗೆ 5 ಲಕ್ಷ ಓಬಿಸಿ ಸಮುದಾಯದ ಜನ ಒಂದು ಕಡೆ ಸೇರುತ್ತಿದ್ದಾರೆ. ಸಮಾವೇಶದ ಪೂರ್ವ ತಯಾರಿಗಾಗಿ ಕೆ.ಎಸ್. ಈಶ್ವರಪ್ಪನವರೇ ಹಲವು ಪ್ರವಾಸ ಮಾಡಿದ್ದಾರೆ. ಸಮಾವೇಶವು ಅವರ ನೇತೃತ್ವದಲ್ಲೇ ನಡೆಯುತ್ತದೆ ಎಂದರು.

Published On - 3:27 pm, Thu, 27 October 22