ರೋಹಿಣಿ ಸಿಂಧೂರಿ ವಿರುದ್ಧದ ಪೋಸ್ಟ್ ಡಿಲೀಟ್ ಮಾಡುವಂತೆ ಡಿ ರೂಪಾಗೆ ಸುಪ್ರೀಂಕೋರ್ಟ್ ಸೂಚನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 14, 2023 | 9:20 PM

ಐಪಿಎಸ್​ ಡಿ.ರೂಪಾ ಮೌದ್ಗಿಲ್​ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕೇಸ್​ಗೆ ಸಂಬಂಧಿಸಿದಂತೆ ಸಿಂಧೂರಿ ದಾಖಲಿಸಿರುವ ದೂರು ರದ್ದುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಡಿ.ರೂಪಾ ಅರ್ಜಿ ಸಲ್ಲಿಸಿದ್ದರು. ಮಧ್ಯಸ್ಥಿಕೆ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಸುಪ್ರೀಂ ಸೂಚಿಸಿತ್ತು. ಸದ್ಯ ರೋಹಿಣಿ ಸಿಂಧೂರಿ ವಿರುದ್ಧದ ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್​ನ್ನು 24 ಗಂಟೆಯೊಳಗೆ ಡಿಲೀಟ್ ಮಾಡುವಂತೆ ಡಿ.ರೂಪಾಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ರೋಹಿಣಿ ಸಿಂಧೂರಿ ವಿರುದ್ಧದ ಪೋಸ್ಟ್ ಡಿಲೀಟ್ ಮಾಡುವಂತೆ ಡಿ ರೂಪಾಗೆ ಸುಪ್ರೀಂಕೋರ್ಟ್ ಸೂಚನೆ
ಡಿ ರೂಪಾ, ರೋಹಿಣಿ ಸಿಂಧೂರಿ
Follow us on

ಬೆಂಗಳೂರು, ಡಿಸೆಂಬರ್​​ 14: ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಹಾಗೂ ಐಪಿಎಸ್‌ ಅಧಿಕಾರಿ ಡಿ.ರೂಪಾ (Roopa Maudgil)​ ನಡುವಿನ ಜಟಾಪಟಿ ವಿಚಾರವಾಗಿ ರೋಹಿಣಿ ಸಿಂಧೂರಿ ವಿರುದ್ಧದ ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್​ನ್ನು 24 ಗಂಟೆಯೊಳಗೆ ಡಿಲೀಟ್ ಮಾಡುವಂತೆ ಡಿ.ರೂಪಾಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಎಲ್ಲಾ ಪೋಸ್ಟ್‌ ಅಳಿಸುವುದು ಅಸಾಧ್ಯವಾದರೆ, ಎಲ್ಲಾ ಕಾಮೆಂಟ್‌ಗಳನ್ನು, ಹೇಳಿಕೆ‌ ಹಿಂಪಡೆದಿದ್ದೇನೆ ಎಂಬ ಕನಿಷ್ಠ ಪೋಸ್ಟ್ ಹಾಕಬೇಕೆಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಪಂಕಜ್ ಮಿಥಾಲ್ ಪೀಠದಿಂದ ಮೌಖಿಕ ನಿರ್ದೇಶನ ನೀಡಲಾಗಿದೆ. ಪೋಸ್ಟ್ ಡಿಲೀಟ್ ಮಾಡಿದರ ಬಗ್ಗೆ ನಾಳೆಯೇ ಡಿ.ರೂಪಾ ಅಫಿಡವಿಟ್ ಸಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

ಇದನ್ನೂ ಓದಿ: Roopa vs Rohini Sindhuri: ಡಿ ರೂಪಾಗೆ ಹೈಕೋರ್ಟಿನಲ್ಲಿ ಮುನ್ನಡೆ, ವಿಚಾರಣಾ ನ್ಯಾಯಾಲಯದ ಪ್ರತಿಬಂಧಕಾಜ್ಞೆ ವಜಾ

ಸೋಶಿಯಲ್​ ಮೀಡಿಯಾಗಳಲ್ಲಿ ತಮ್ಮ ವಿರುದ್ಧ ಆಕ್ಷೇಪಾರ್ಹ ಪೋಸ್ಟ್​ ಹಂಚಿಕೊಂಡಿದ್ದ ಐಪಿಎಸ್‌ ಅಧಿಕಾರಿ ಡಿ.ರೂಪಾ ವಿರುದ್ಧ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಸಿಂಧೂರಿ ದಾಖಲಿಸಿರುವ ದೂರು ರದ್ದುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಡಿ.ರೂಪಾ ಅರ್ಜಿ ಸಲ್ಲಿಸಿದ್ದರು.

ಮಧ್ಯಸ್ಥಿಕೆ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಸುಪ್ರೀಂ ಸೂಚಿಸಿತ್ತು. ಹಾಗಾಗಿ ಇಬ್ಬರೂ ಇಂದು ಸುಪ್ರೀಂಕೋರ್ಟ್‌ಗೆ ಖುದ್ದು ಹಾಜರಾಗಿದ್ದರು. ಮಧ್ಯಸ್ಥಿಕೆ ವಿಫಲವಾಗಿದೆ ಎಂದು ಇಂದು ಕೋರ್ಟ್‌ಗೆ ತಿಳಿಸಲಾಗಿದೆ. ವಿವಾದ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಬೇಸರ ವ್ಯಕ್ತಪಡಿಸಿದೆ.

ಇದನ್ನೂ ಓದಿ: ರೋಹಿಣಿ ಸಿಂಧೂರಿ ಮಾನನಷ್ಟ ಮೊಕದ್ದಮೆ: ರೂಪಾ ಮೌದ್ಗಿಲ್​ಗೆ ಸಮನ್ಸ್ ಜಾರಿಗೊಳಿಸಿದ ಮ್ಯಾಜಿಸ್ಟ್ರೇಟ್​​​ ಕೋರ್ಟ್

ಐಎಎಸ್-ಐಪಿಎಸ್ ಅಧಿಕಾರಿಗಳು ಹೀಗೆ ಜಗಳವಾಡಿದರೆ ಆಡಳಿತ ಹೇಗೆ ಎಂದು ರೋಹಿಣಿ ಸಿಂಧೂರಿ, ಡಿ.ರೂಪಾ ಇಬ್ಬರನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಬಳಿಕ ಪೋಸ್ಟ್ ಡಿಲಿಟ್ ಮಾಡುವಂತೆ ರೂಪಾಗೆ ಸುಪ್ರೀಂಕೋರ್ಟ್ ಸೂಚನೆ ನೀಡಲಾಗಿದೆ.

ರೋಹಿಣಿ ಸಿಂಧೂರಿ ಮತ್ತು ರೂಪಾ ನಡುವೆ ವಾಕ್ಸಮರ, ಆರೋಪ ಪ್ರತ್ಯಾರೋಗಳು ನಡೆಯುತ್ತಿದ್ದವು. ಅದರಂತೆ, ರೋಹಿಣಿ ಸಿಂಧೂರಿ ವಿರುದ್ಧ​​ ಡಿ.ರೂಪಾ ಅವರು 19 ಆರೋಪ ಪಟ್ಟಿ ಬಿಡುಗಡೆ ಮಾಡಿದ್ದರು. ಶಾಸಕ ಸಾ.ರಾ.ಮಹೇಶ್ ಬಳಿ ರೋಹಿಣಿ ಸಂಧಾನಕ್ಕೆ ಹೋಗಿದ್ದು, ಡಿಕೆ ರವಿ ಆತ್ಮಹತ್ಯೆ ಪ್ರಕರಣ, ಚಾಮರಾಜನಗರ ಆಕ್ಸಿಜನ್ ದುರಂತ, ಐಎಎಸ್ ಅಧಿಕಾರಿಗಳಾದ ಶಿಲ್ಪಾ ನಾಗ್, ಹರ್ಷ ಗುಪ್ತ, ಮಣಿವಣ್ಣನ್, ಜೊತೆಗಿನ ಜಗಳ ಸೇರಿದಂತೆ ಅನೇಕ ವಿಚಾರಗಳನ್ನು ಕೆದಕಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.