ಉತ್ಪಾದನೆ ವೆಚ್ಚ ಹೆಚ್ಚಾದರೆ, ವಿದ್ಯುತ್ ದರ ಹೆಚ್ಚಳ ಅನಿವಾರ್ಯ: ಬೆಸ್ಕಾಂ ತಾಂತ್ರಿಕ ನಿರ್ದೇಶಕ ನಾಗಾರ್ಜುನ್ ಹೇಳಿಕೆ
ಮಾರುಕಟ್ಟೆಯಲ್ಲಿ ಕಲ್ಲಿದ್ದಲು ದರ ಹೆಚ್ಚಾಗಿದೆ. ವಿದ್ಯುತ್ ಉತ್ಪಾದನೆಗೆ ಬೇಕಾದ ಕಚ್ಚಾ ಸಾಮಾಗ್ರಿ ದರ ಹೆಚ್ಚಾಗಿದೆ. ಹಾಗಾಗಿ ವಿದ್ಯುತ್ ದರ ಹೆಚ್ಚಳ ಅನಿವಾರ್ಯವಾಗಿದೆ.
ಬೆಂಗಳೂರು: ಎಫ್ಎಸಿ ಬೆಲೆ ಹೆಚ್ಚಾದರೆ ವಿದ್ಯುತ್ ದರ (electricity rates) ಹೆಚ್ಚಳ ಅನಿವಾರ್ಯ. ಉತ್ಪಾದನೆ ವೆಚ್ಚ ಹೆಚ್ಚಾದರೆ ವಿದ್ಯುತ್ ದರ ಏರಿಸಬೇಕಾಗುತ್ತೆ ಎಂದು ಟಿವಿ9ಗೆ ಬೆಸ್ಕಾಂ ತಾಂತ್ರಿಕ ನಿರ್ದೇಶಕ ನಾಗಾರ್ಜುನ್ ಹೇಳಿಕೆ ನೀಡಿದರು. ಮಾರುಕಟ್ಟೆಯಲ್ಲಿ ಕಲ್ಲಿದ್ದಲು ದರ ಹೆಚ್ಚಾಗಿದೆ. ವಿದ್ಯುತ್ ಉತ್ಪಾದನೆಗೆ ಬೇಕಾದ ಕಚ್ಚಾ ಸಾಮಾಗ್ರಿ ದರ ಹೆಚ್ಚಾಗಿದೆ. ಖರೀದಿ ವೇಳೆ ದರ ಕಡಿಮೆ ಇದ್ದರೆ KERCಗೆ ಪ್ರಸ್ತಾವನೆ ಸಲ್ಲಿಸಲ್ಲ. ಕಲ್ಲಿದ್ದಲು ಇತರೆ ಕಚ್ಚಾ ಸಾಮಾಗ್ರಿ ಏರಿಕೆಯಾದ್ರೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಈ ಪ್ರಕ್ರಿಯೆ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸಲಾಗುತ್ತದೆ. ಉತ್ಪಾದನೆ ದರ ಕಡಿಮೆಯಾದರೆ ವಿದ್ಯುತ್ ದರ ಕಡಿಮೆ ಆಗಬಹುದು. ಇಲ್ಲವಾದರೆ ಹಾಗೇ ಮುಂದುವರಿಯಲೂಬಹುದು. ಇದನ್ನ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನಿರ್ಧರಿಸುತ್ತೆ ಎಂದು ನಾಗಾರ್ಜುನ್ ತಿಳಿಸಿದರು.
ವಿದ್ಯುತ್ ದರ ಏರಿಕೆಗೆ ಹೋಟೆಲ್ ಮಾಲೀಕರ ಸಂಘ ವಿರೋಧ
ವಿದ್ಯುತ್ ದರ ಏರಿಕೆಗೆ ಸರ್ಕಾರ ನಿರ್ಧಾರ ಮಾಡಿದ್ದು, ಈ ನಿರ್ಧಾರಕ್ಕೆ ಹೋಟೆಲ್ ಮಾಲೀಕರ ಸಂಘ ವಿರೋಧ ವ್ಯಕ್ತಪಡಿಸಿದೆ. ಪ್ರತಿ ಯೂನಿಟ್ಗೆ 43 ಪೈಸೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಅ.1ರಿಂದ ಪರಿಷ್ಕೃತ ವಿದ್ಯುತ್ ದರ ಜಾರಿಗೆ ಬರುತ್ತಿದೆ. ದರ ಏರಿಕೆ ನಿರ್ಧಾರ ಮುಂದಿನ ವರ್ಷ ಏಪ್ರಿಲ್ವರೆಗೆ ಮುಂದೂಡುವಂತೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದಿಂದ ಆಗ್ರಹಿಸಿದೆ. ಈಗಾಗಲೇ ವಿದ್ಯುತ್ ಮೇಲಿನ ತೆರಿಗೆ ಶೇಕಡಾ 9ರಷ್ಟು ಇದೆ. ಇದನ್ನು ಶೇಕಡಾ 4ಕ್ಕೆ ಇಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆ. ಈ ಸಂಬಂಧ ಮುಂದಿನ ವಾರ ಇಂಧನ ಸಚಿವರನ್ನು ಭೇಟಿಯಾಗಿ ಮನವಿ ಸಲಿಸುವುದಾಗಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘದಿಂದ ಮಾಹಿತಿ ನೀಡಲಾಗಿದೆ.
ಈ ವರ್ಷ ಏಪ್ರಿಲ್ನಲ್ಲಿ ಬೆಸ್ಕಾಂ ವಿದ್ಯುತ್ ದರ ಹೆಚ್ಚಿಸಿತ್ತು. ಪ್ರತಿ ಯೂನಿಟ್ಗೆ 35 ಪೈಸೆ ಏರಿಕೆ ಮಾಡಿದ್ದ ಬೆಸ್ಕಾಂ, ಕೊರೊನಾ ಬಳಿಕ ಈಗಷ್ಟೇ ಹೋಟೆಲ್ ಉದ್ಯಮದಲ್ಲಿ ಚೇತರಿಕೆ ಕಾಣುತ್ತಿದೆ. ವಿದ್ಯುತ್ ದರ ಮತ್ತೆ ಏರಿಸಿದರೆ ಉದ್ಯಮಕ್ಕೆ ಸಮಸ್ಯೆ ಆಗಲಿದೆ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ತಿಳಿಸಿದರು.
ವಿದ್ಯುತ್ ದರ ಹೀಗಿದೆ:
ಬೆಸ್ಕಾಂಗೆ ಪ್ರತಿ ತಿಂಗಳು ಪ್ರತಿ ಯೂನಿಟ್ಗೆ 43 ಪೈಸೆ, ಮೆಸ್ಕಾಂಗೆ 24 ಪೈಸೆ, ಚಸ್ಕಾಂಗೆ 34 ಪೈಸೆ, ಹೆಸ್ಕಾಂಗೆ 35 ಪೈಸೆಯಂತೆ ಗ್ರಾಹಕರಿಂದ ವಸೂಲಿ ಮಾಡಲು ಅವಕಾಶ ನೀಡಿದೆ. ಅದರಂತೆ ಪ್ರತಿ ನೂರು ಯುನಿಟ್ ವಿದ್ಯುತ್ ಬಳಸುವ ಗ್ರಾಹಕರು ತಮ್ಮ ತಿಂಗಳ ವಿದ್ಯುತ್ ಬಿಲ್ನಲ್ಲಿ ಹೆಚ್ಚುವರಿಯಾಗಿ 43 ರೂ. ನಿಂದ 24 ರೂ. ವರೆಗೆ ಪಾವತಿಸಬೇಕಾಗಿದೆ. ಈ ಮುಂಚೆ ಜುಲೈ 1, 2022ರಿಂದ ಡಿಸೆಂಬರ್ 31, 2022ರ ವರೆಗೆ ಇಂಧನ ವೆಚ್ಚ ಹೊಂದಾಣಿಕೆ (FAC) ವಸೂಲಿ ಮಾಡಲು ಅವಕಾಶ ನೀಡಲಾಗಿತ್ತು. ಆಗ ಪ್ರತಿ ನೂರು ಯುನಿಟ್ ವಿದ್ಯುತ್ ಬಳಸುವ ಗ್ರಾಹಕರು ತಮ್ಮ ತಿಂಗಳ ವಿದ್ಯುತ್ ಬಿಲ್ನಲ್ಲಿ ಹೆಚ್ಚುವರಿಯಾಗಿ 19 ರೂ. ನಿಂದ 31 ರೂ. ಏರಿಕೆಯಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.