ಗಣೇಶನ ವಿಸರ್ಜನೆಗೆಂದು ಕೆರೆಯ ಆಳ ತಿಳಿಯಲು ಸ್ನೇಹಿತರ ಜೊತೆ ಹೋದಾಗ ಯುವಕ ನೀರಿನಲ್ಲಿ ಮುಳುಗಿ ಸಾವು
ಗಣೇಶನ ವಿಸರ್ಜನೆಗೆಂದು ಕೆರೆಯ ಆಳ ತಿಳಿಯಲು ಸ್ನೇಹಿತರ ಜೊತೆ ಹೋಗಿದ್ದಾಗ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲ್ಲೂಕು ಕುದುರೆಗೆರೆ ಗ್ರಾಮದ ಕೆರೆಯಲ್ಲಿ ನಡೆದಿದೆ.
ಬೆಂಗಳುರು: ಗಣೇಶನ ವಿಸರ್ಜನೆಗೆಂದು ಕೆರೆಯ (Lake) ಆಳ ತಿಳಿಯಲು ಸ್ನೇಹಿತರ ಜೊತೆ ಹೋಗಿದ್ದಾಗ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ (Bengaluru North) ತಾಲ್ಲೂಕು ಕುದುರೆಗೆರೆ ಗ್ರಾಮದ ಕೆರೆಯಲ್ಲಿ ನಡೆದಿದೆ. ಚಿಕ್ಕಬಾಣಾವರ ಬಸವರಾಜ ಬೌಳಿ (19) ಮೃತ ದುರ್ದೈವಿ. ಮೃತ ಯುವಕ ದ್ವಿತೀಯ ಪಿಯುಸಿ ವ್ಯಾಸಂಗ ಮುಗಿಸಿ ಇತ್ತೀಚೆಗಷ್ಟೇ ಕಾಲೇಜಿಗೆ ಅಡ್ಮೀಷನ್ ಪಡೆದಿದ್ದನು.
ಯುವಕರು ಗಣೇಶ ಮೂರ್ತಿ ಕೂರಿಸಿದ ಬಳಿಕ ಇದೇ ಕೆರೆಯಲ್ಲಿ ಮೂರ್ತಿ ವಿಸರ್ಜನೆ ಮಾಡಬೇಕೆಂದು ನಿರ್ಧರಿಸಿದ್ದರು. ಈ ಸಂಬಂಧ ಕೆರೆಯ ಆಳ ತಿಳಿಯಲೆಂದು ನೀರಿಗೆ ಇಳಿದ ಯುವಕ ಮುಳುಗಿ ಸಾವನ್ನಪ್ಪಿದ್ದಾನೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ: ಅಪಘಾತದಲ್ಲಿ ಅಕ್ಕ-ತಮ್ಮ ದುರ್ಮರಣ
ಬೆಂಗಳೂರು ಗ್ರಾಮಾಂತರ: ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಅಕ್ಕ-ತಮ್ಮ ದುರ್ಮರಣ ಹೊಂದಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಅಟ್ಟೂರು ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಬೆಂಗಳೂರಿನ ಶಾಜಿಯಾ ಭಾನು(26) ಇಬ್ರಾಹಿಂ ಸಾಬ್(16) ಮೃತರು. ಡಾಬಾ ಬಳಿ ಲಾರಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಕ್ಕೆ ಕಾರು ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿಯಾಗ್ತಿದ್ದಂತೆ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಮುರುಗಮಲ್ಲ ದರ್ಗಾಗೆ ಹೋಗಿ, ಚಿಂತಾಮಣಿಯಿಂದ ಬೈಲನರಸಾಪುರಕ್ಕೆ ಬಂದು ಟೀ ಕುಡಿದು ನಂತರ ಕೋಲಾರ ಹೆದ್ದಾರಿ ಮೂಲಕ ಕಾರು ವಾಪಸಾಗುತ್ತಿದ್ದಾಗ ಅಪಘಾತ ನಡೆದಿದೆ. ಕಾರಿನಲ್ಲಿ ಒಂದೇ ಕುಟುಂಬದ 9 ಜನರು ಪ್ರಯಾಣಿಸುತ್ತಿದ್ದರು. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬೈಕ್ಗೆ ಅಪರಿಚಿತ ವಾಹನ ಡಿಕ್ಕಿ ಸವಾರ ಸಾವು
ತುಮಕೂರು: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರ ಸಾವನ್ನಪ್ಪಿರುವಂತಹ ಘಟನೆ ತುಮಕೂರು ತಾಲೂಕಿನ ಅಜ್ಜಗೊಂಡನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಘಟನೆ ನಡೆದಿದೆ. ಮೃತನ ಗುರುತು ಪತ್ತೆಯಾಗಿಲ್ಲ. ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಹಳಿಯಾಳ: ಅಪಘಾತ, ಇಬ್ಬರು ಸಾವು
ಧಾರವಾಡ: ಖಾಸಗಿ ಬಸ್, ಕ್ರೂಸರ್ ಮುಖಾಮುಖಿಯಾಗಿ ಇಬ್ಬರು ಮೃತಪಟ್ಟಿರುವ ಘಟನೆ ಕಲಘಟಗಿ ತಾಲೂಕಿನ ಧಾರವಾಡ ಕ್ರಾಸ್ ಬಳಿ ನಡೆದಿದೆ. ಮೃತರು ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನ ನಂದಿಗದ್ದಿ ಗ್ರಾಮದವರು ಎಂದು ತಿಳಿದುಬಂದಿದೆ. ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ವಿವರಗಳು ತಿಳಿದುಬರಬೇಕಿದೆ.
ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಐವರು ಆರೋಪಿಗಳ ಬಂಧನ
ವಿಜಯನಗರ: ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಐವರು ಆರೋಪಿಗಳನ್ನು ಹೊಸಪೇಟೆ ಟೌನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. 500 ರೂಪಾಯಿ ಮುಖಬೆಲೆಯ 312 ಖೋಟಾ ನೋಟುಗಳ ಜಪ್ತಿ ಮಾಡಲಾಗಿದೆ. ಕುಬೇರಪ್ಪ ತಳವಾರ, ರುದ್ರೇಶ ಎಸ್.ರಾಜೇಶ್, ಪ್ರಕಾಶ, ರವಿ ಬಂಧಿತ ಆರೋಪಿಗಳು. ಆರೋಪಿಗಳು ವೆಂಕಟೇಶ್ವರ ಲಾಡ್ಜ್ನಲ್ಲಿ ಖೋಟಾನೋಟು ಚಲಾವಣೆಗೆ ಯತ್ನಿಸಿದ್ದರು. ಹೊಸಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:02 pm, Mon, 22 August 22