ಬೆಂಗಳೂರು, ಮಾ.28: ನಗರದ ವೈಟ್ಫೀಲ್ಡ್ ಬಳಿಯ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಬೆನ್ನಲ್ಲೇ ಮಹದೇವಪುರದ ಪಾಸ್ತಾ ಸ್ಟ್ರೀಟ್ ರೆಸ್ಟೋರೆಂಟ್ಗೆ (Pasta Street Restaurant) ಬಾಂಬ್ ಬೆದರಿಕೆ ಹಾಕಲಾಗಿದೆ. ವ್ಯಕ್ತಿಯೊಬ್ಬ ರೆಸ್ಟೋರೆಂಟ್ಗೆ ಕರೆ ಮಾಡಿ ಶೀಘ್ರದಲ್ಲೇ ರೆಸ್ಟೋರೆಂಟ್ನಲ್ಲಿ ಬಾಂಬ್ ಸ್ಫೋಟವಾಗುತ್ತೆ ಎಂದು ಬೆದರಿಕೆ (Bomb Blast Threat) ಹಾಕಿದ್ದಾನೆ. ಈ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ತಿಳಿದುಬಂದ ಸತ್ಯಾಂಶ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.
ಮಹದೇವಪುರ ಠಾಣಾ ವ್ಯಾಪ್ತಿಯ ಪಾಸ್ತಾ ಸ್ಟ್ರೀಟ್ ರೆಸ್ಟೋರೆಂಟ್ಗೆ ತಡರಾತ್ರಿ ಕರೆ ಬಂದಿದ್ದು, ಶೀಘ್ರದಲ್ಲೇ ಬಾಂಬ್ ಸ್ಫೋಟವಾಗುತ್ತದೆ ಎಂದು ಬೆದರಿಕೆ ಹಾಕಿ ಕಾಲ್ ಕಟ್ ಮಾಡಲಾಗಿದೆ. ಕೂಡಲೇ ರೆಸ್ಟೋರೆಂಟ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ರಾತ್ರಿ ಇಡೀ ಪರಿಶೀಲನೆ ನಡೆಸಿದ್ದಾರೆ.
ಬಳಿಕ ಅನುಮಾನ ಮೂಡಿದ ಹಿನ್ನೆಲೆ ಇಂದಿರಾನಗರ ಬ್ರಾಂಚ್ನಲ್ಲಿ ಕೆಲಸ ಮಾಡುತ್ತಿದ್ದ ವೇಲು ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪೊಲೀಸರೇ ಶಾಕ್ ಆಗಿದ್ದಾರೆ. ಸಂಬಳ ಕೊಡದ ಹಿನ್ನೆಲೆ ತಾನು ರೆಸ್ಟೋರೆಂಟ್ಗೆ ಹುಸಿ ಬಾಂಬ್ ಬೆದರಿಕೆ ಹಾಕಿದ್ದಾಗಿ ವೇಲು ಬಾಯಿಬಿಟ್ಟಿದ್ದಾನೆ. ಪ್ರಕರಣ ಸಂಬಂಧ ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ರಾಮೇಶ್ವರಂ ಬಾಂಬ್ ಬ್ಲಾಸ್ಟ್ ಕೇಸ್: ಭಟ್ಕಳದಲ್ಲಿ ಶಂಕಿತನ ಮನೆ ಮೇಲೆ ಎನ್‌ಐಎ ದಾಳಿ, ವಿಚಾರಣೆಗೆ ಹಾಜರಾಗುವಂತೆ ಸೂಚನೆ
ಇತ್ತೀಚೆಗೆ, (ಮಾರ್ಚ್ 1) ಬೆಂಗಳೂರು ನಗರದ ವೈಟ್ಫೀಲ್ಡ್ ಬಳಿ ಇರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿತ್ತು. ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಮತ್ತು ಎನ್‌ಐಎ ಅಧಿಕಾರಿಗಳು ಶಂಕಿತ ಕೆಲವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ, ಬಾಂಬ್ ಸ್ಫೋಟಿಸಿದ ಶಂಕಿತ ಉಗ್ರ ಇದುವರೆಗೆ ಪತ್ತೆಯಾಗಿಲ್ಲ. ಈತನ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ. ಇದರ ಬೆನ್ನಲ್ಲೇ ಪಾಸ್ತಾ ಸ್ಟ್ರೀಟ್ ರೆಸ್ಟೋರೆಂಟ್ಗೆ ಈ ಹುಸಿ ಬಾಂಬ್ ಬೆದರಿಕೆ ಹಾಕಲಾಗಿದೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೂ ಮುನ್ನ ಬೆಂಗಳೂರಿನ 20ಕ್ಕೂ ಹೆಚ್ಚು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದವು. ಆತಂಕಗೊಂಡ ಪೋಷಕರು ಶಾಲೆಗಳಿಗೆ ದೌಡಾಯಿಸಿ ತಮ್ಮ ಮಕ್ಕಳನ್ನೆಲ್ಲಾ ಕರೆದುಕೊಂಡು ಹೋಗಿದ್ದರು. ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಮತ್ತು ಶ್ವಾನದಳ ತೀವ್ರ ಶೋಧ ನಡೆಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ