ಸಾಲ ಕೊಡಿಸುವುದಾಗಿ ಜಾಹೀರಾತು ನೀಡಿ ಜನರನ್ನು ವಂಚಿಸುತ್ತಿದ್ದ ಮೂವರು ಆರೋಪಿಗಳು ಅರೆಸ್ಟ್

ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಿದ್ದ ಆರೋಪಿಗಳು ಸಾಲ ಕೊಡಿಸುವುದಾಗಿ ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಿದ್ದರು. ಬಳಿಕ ಜಾಹೀರಾತು ನೋಡಿ ಸಾಲ ಪಡೆಯಲು ಬಂದವರಿಗೆ ಖೋಟಾ ನೋಟು ತೋರಿಸಿ ಸಾಲ ಕೊಡಿಸಲು ಪ್ರೊಸೆಸಿಂಗ್ ಫೀಸ್ ಪಡೆದು ಜನರಿಗೆ ವಂಚಿಸಿ ತಲೆ ಮರೆಸಿಕೊಳ್ಳುತ್ತಿದ್ದರು.

ಸಾಲ ಕೊಡಿಸುವುದಾಗಿ ಜಾಹೀರಾತು ನೀಡಿ ಜನರನ್ನು ವಂಚಿಸುತ್ತಿದ್ದ ಮೂವರು ಆರೋಪಿಗಳು ಅರೆಸ್ಟ್
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಾಲ ಕೊಡಿಸುವುದಾಗಿ ಜಾಹೀರಾತು ನೀಡಿ ಜನರಿಗೆ ವಂಚಿಸಿದ್ದ ಮೂವರು ಆರೋಪಿಗಳನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೊಯಮತ್ತೂರು ಮೂಲದ ಸುರೇಶ್, ಮನೋಜ್, ಅನೂಪ್ ಕುಮಾರ್‌ ಬಂಧಿತ ಆರೋಪಿಗಳು.

ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಿದ್ದ ಆರೋಪಿಗಳು ಸಾಲ ಕೊಡಿಸುವುದಾಗಿ ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಿದ್ದರು. ಬಳಿಕ ಜಾಹೀರಾತು ನೋಡಿ ಸಾಲ ಪಡೆಯಲು ಬಂದವರಿಗೆ ಖೋಟಾ ನೋಟು ತೋರಿಸಿ ಸಾಲ ಕೊಡಿಸಲು ಪ್ರೊಸೆಸಿಂಗ್ ಫೀಸ್ ಪಡೆದು ಜನರಿಗೆ ವಂಚಿಸಿ ತಲೆ ಮರೆಸಿಕೊಳ್ಳುತ್ತಿದ್ದರು. ಈ ಆರೋಪಿಗಳು ತಮ್ಮ ಬಿಎಂಡಬ್ಲ್ಯು ಕಾರಿಗೆ ಅಡ್ವೊಕೇಟ್ ಚಿಹ್ನೆ ಹಾಕಿಕೊಂಡು ಓಡಾಡ್ತಿದ್ದರು.

ಮೈಸೂರು, ಕೊಯ್ಮುತ್ತೂರಿನ ಠಾಣಾ ವ್ಯಾಪ್ತಿಗಳಲ್ಲಿ ಈ ಹಿಂದೆ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿತ್ತು. ಬಿಎಂಡಬ್ಲ್ಯು ಕಾರಿನ ಮಾಲೀಕ ಅರವಿಂದ್ ಕೂಡ ವಂಚನೆ ಪ್ರಕರಣದಲ್ಲಿ ಜೈಲಿನಲ್ಲಿದ್ದ. ಜೈಲಿನಲ್ಲಿದ್ದ ಅರವಿಂದನ ಬಿಎಂಡಬ್ಲ್ಯು ಕಾರನ್ನೇ ಬಳಸಿಕೊಂಡೇ ಉಳಿದ ಆರೋಪಿಗಳು ವಂಚನೆ ಮಾಡುತ್ತಿದ್ದರು.

ಹೆಚ್ಚುತ್ತಿವೆ ವಂಚನೆ ಪ್ರಕರಣಗಳು
ಇನ್ನು ರಾಜಧಾನಿಯಲ್ಲಿ ನಿವೇಶನ ಮಾರಾಟ ನೆಪದಲ್ಲಿ ವಂಚನೆ ಎಸಗಿರುವ ಮತ್ತೊಂದು ಪ್ರಕರಣ ವರದಿಯಾಗಿತ್ತು. ರಾಜಾಜಿನಗರದ ಮೂರನೆ ಹಂತದ ಬೃಂದಾವನ ಪ್ರಾಪರ್ಟಿಸ್ ಸಂಸ್ಥೆಯಿಂದ ನೂರಾರು ಜನರಿಗೆ ವಂಚನೆ ನಡೆದಿತ್ತು. ಐದಾರು ಲಕ್ಷ ರೂಪಾಯಿಗೆ ನಗರದ ಹೊರವಲಯದಲ್ಲಿ ಸೈಟ್ ನೀಡುವುದಾಗಿ ಸಂಸ್ಥೆಯು ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿತ್ತು.

ದಿನೇಶ್ ಗೌಡ ಎಂಬಾತ ಬೃಂದಾವನ ಪ್ರಾಪರ್ಟಿಸ್ ಕಂಪನಿ ಹೆಸರಿನಲ್ಲಿ ಕಳೆದ ಐದು ವರ್ಷಗಳಿಂದ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ. ಇದೀಗ ವಂಚನೆ ಆರೋಪ ಬೆಳಕಿಗೆ ಬರುತ್ತಿದ್ದಂತೆ ಬೃಂದಾವನ ಪ್ರಾಪರ್ಟಿ ಕಚೇರಿ ಕ್ಲೋಸ್ ಮಾಡಿ ಎಸ್ಕೇಪ್ ಆಗಿದ್ದ. ಹಣ ಹೂಡಿಕೆ ಮಾಡಿರುವ ಸಾರ್ವಜನಿಕರು ಕಂಪನಿಯ ಕಚೇರಿ ಎದುರು ಪ್ರತಿಭಟನೆ ನಡೆಸಿ ಪ್ರಕರಣ ದಾಖಲಿಸಿದ್ದರು.

ಕ್ಯಾಬ್ ಚಾಲಕರು, ಪ್ಲಂಬರ್, ಹೋಟೆಲ್ ಸಪ್ಲೈಯರ್ ಮುಂತಾದವರು ಬೃಂದಾವನ ಪ್ರಾಪರ್ಟಿಸ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದರು. ತಾವರೆಕರೆ, ಹೆಸರಘಟ್ಟ, ನೆಲಮಂಗಲ ಭಾಗಗಳಲ್ಲಿ ನಿವೇಶನ ತೋರಿಸಿ, ದಿನೇಶ್ ಗೌಡ ಸಂಸ್ಥೆ ವಂಚನೆ ಎಸಗಿದೆ. ಇಂತಹ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಆದಷ್ಟು ಜನ ಎಚ್ಚೆತ್ತುಕೊಳ್ಳಬೇಕಿದೆ.

ಇದನ್ನೂ ಓದಿ: ನಕಲಿ ಚಿನ್ನಾಭರಣ ಅಡವಿಟ್ಟು ಬ್ಯಾಂಕ್‌ಗೆ ವಂಚನೆ? ಸಿನಿಮಾ ನಿರ್ದೇಶಕ ಕರಮಲ ಬಾಲರವೀಂದ್ರನಾಥ್ ಬಂಧನ

Click on your DTH Provider to Add TV9 Kannada