ಜೆಡಿಎಸ್ಗೆ ಮೂರು ಕ್ಷೇತ್ರ; ಮಂಡ್ಯದಿಂದ ಸ್ಪರ್ಧಿಸುವಂತೆ ಹೆಚ್ಡಿ ಕುಮಾರಸ್ವಾಮಿಗೆ ಅಮಿತ್ ಶಾ ಸಲಹೆ
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಲೋಕ ಸಭಾ ಚುನಾವಣೆಗೆ ಕ್ಷೇತ ಹಂಚಿಕೆ ಬಗ್ಗೆ ಮಾತನಾಡಲು ಹೆಚ್ಡಿ ಕುಮಾರಸ್ವಾಮಿ ನಿನ್ನೆ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಸದ್ಯ ಸಭೆಯಲ್ಲಿ ಮೂರು ಕ್ಷೇತ್ರಗಳನ್ನು ಜೆಡಿಎಸ್ಗೆ ಬಿಟ್ಟುಕೊಡುವ ನಿರ್ಧಾರವಾಗಿದ್ದು ತಾವೇ ಅಭ್ಯರ್ಥಿಗಳ ಘೋಷಣೆ ಮಾಡುವಂತೆ ಶಾ ಸಲಹೆ ಕೊಟ್ಟಿದ್ದಾರೆ. ಹಾಗೂ ಮಂಡ್ಯದಿಂದ ತಾವೇ ಸ್ಪರ್ಧಿಸುವಂತೆ ತಿಳಿಸಿದ್ದಾರೆ.
ಬೆಂಗಳೂರು, ಮಾರ್ಚ್.17: ಲೋಕಸಭೆ ಚುನಾವಣೆಗೆ (Lok Sabha Election) ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು ಜಂಟಿಯಾಗಿ ಸ್ಪರ್ಧಿಸುತ್ತಿರುವುದರಿಂದ ಸೀಟು ಹಂಚಿಕೆ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರೊಂದಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ನಿನ್ನೆ ಚರ್ಚೆ ನಡೆಸಿದ್ದಾರೆ. ಸದ್ಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮೂರು ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಖಚಿತವಾಗಿದೆ. ನಿನ್ನೆ ಸಂಜೆ ನಡೆದ ಅಮಿತ್ ಶಾ ಮಾತುಕತೆಯಲ್ಲಿ ಜೆಡಿಎಸ್ ಬಿಜೆಪಿ ಕ್ಷೇತ್ರ ಹಂಚಿಕೆಗೆ ಅಂತಿಮ ಮುದ್ರೆ ಬಿದ್ದಿದೆ.
ಕಗ್ಗಂಟಾಗಿದ್ದ ಕೋಲಾರ ಲೋಕಸಭಾ ಕ್ಷೇತ್ರ ಕೂಡ ಜೆಡಿಎಸ್ಗೆ ಬಿಟ್ಟು ಕೊಡಲು ನಿನ್ನೆಯ ಸಭೆಯಲ್ಲಿ ನಿರ್ಧಾರವಾಗಿದೆ. ನಿಮ್ಮ ಮೂರು ಅಭ್ಯರ್ಥಿಗಳನ್ನ ನೀವೇ ಘೋಷಣೆ ಮಾಡಿಕೊಳ್ಳಿ ಎಂದು ಕುಮಾರಸ್ವಾಮಿಗೆ ಅಮಿತ್ ಶಾ ಸಲಹೆ ನೀಡಿದ್ದಾರೆ. ಹಾಸನ, ಮಂಡ್ಯ ಜೊತೆಗೆ ಕೋಲಾರ ಕೂಡ ಜೆಡಿಎಸ್ ಪಾಲಿಗೆ ಸಿಕ್ಕಿದೆ. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಹೆಸರು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತೆ. ಹಾಸನದಿಂದ ಪ್ರಜ್ವಲ್ ರೇವಣ್ಣ, ಮಂಡ್ಯದಿಂದ ಸಿ.ಎಸ್. ಪುಟ್ಟರಾಜು, ಕೋಲಾರದಿಂದ ಶಾಸಕ ಸಮೃದ್ಧಿ ಮಂಜುನಾಥ್ ಅಥವಾ ಮಲ್ಲೇಶ್ ಬಾಬು ಸ್ಪರ್ಧಿಸಲಿದ್ದಾರೆ. ಇನ್ನು ಹೆಚ್ಡಿ ಕುಮಾರಸ್ವಾಮಿಗೆ ಮಂಡ್ಯದಿಂದ ಸ್ಪರ್ಧೆ ಮಾಡುವಂತೆ ಮೀಟಿಂಗ್ನಲ್ಲಿ ಅಮಿತ್ ಶಾ ಮತ್ತೆ ಒತ್ತಡ ಹಾಕಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಆದರೆ ಶೀಘ್ರದಲ್ಲೇ ಕುಮಾರಸ್ವಾಮಿ ಅವರು ಹೃದಯ ಸಂಬಂಧಿ ಚಿಕಿತ್ಸೆ ಪಡೆಯಲಿರುವ ಹಿನ್ನೆಲೆ ಮಂಡ್ಯದಿಂದ ಸ್ಪರ್ಧೆ ಮಾಡುವ ಬಗ್ಗೆ ಶಾಗೆ ಯಾವ ನಿರ್ಧಾರವನ್ನೂ ತಿಳಿಸಿಲ್ಲ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಗ್ಗೆ ಅಮಿತ್ ಶಾ ಪ್ರಸ್ತಾಪ ಮಾಡಿದ್ದು ಗ್ರಾಮಾಂತರದಲ್ಲಿ ಒಳ್ಳೆಯ ವಾತಾವರಣ ಇದೆ. ಎದುರಾಳಿಗಳು ಡಾ.ಮಂಜುನಾಥ್ ಸೋಲಿಸಲು ಸಾಕಷ್ಟು ಪ್ರಯತ್ನ ಮಾಡುತಿದ್ದಾರೆ. ಮಂಜುನಾಥ್ ಗೆಲ್ಲಿಸಿಕೊಂಡು ಬರುವುದು ನಮ್ಮ ಜವಾಬ್ದಾರಿ ಎಂದು ಶಾಗೆ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: Voter ID: ಆನ್ಲೈನ್ನಲ್ಲಿ ವೋಟರ್ ಐಡಿಗೆ ಅರ್ಜಿ ಸಲ್ಲಿಸಿದ್ರೆ ಮನೆಗೇ ಬರುತ್ತೆ ಕಾರ್ಡ್
ಯಾರಾಗ್ತಾರೆ ಮಂಡ್ಯ ಮೈತ್ರಿ ಅಭ್ಯರ್ಥಿ?
ಮಂಡ್ಯ ಕ್ಷೇತ್ರದ ಮೈತ್ರಿ ಟಿಕೆಟ್ ಜೆಡಿಎಸ್ಗೆ ಫಿಕ್ಸ್ ಆಗಿದೆ. ಹೆಚ್ಡಿಕೆ ಸ್ವರ್ಧೆಗೆ ಒಲವು ಹೆಚ್ಚಿದೆ. ಕುಮಾರಸ್ವಾಮಿ ಅವರೇ ಸ್ವರ್ಧೆ ಮಾಡುವಂತೆ ಚಾಣಕ್ಯ ಅಮಿತ್ ಶಾ ಕೂಡ ಸೂಚನೆ ನೀಡಿದ್ದಾರೆ. ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗೆಲವು ಸಾಧಿಸಲು ನೀವೇ ಸೂಕ್ತ ಅಭ್ಯರ್ಥಿ ಎಂದು ಶಾ ಹೇಳಿದ್ದಾರೆ. ಆದರೆ ಹೆಚ್ಡಿಕೆ ನಡೆ ಕುತೂಹಲ ಮೂಡಿಸಿದೆ. ಇತ್ತೀಚೆಗೆ ನಡೆದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಕುಮಾರಸ್ವಾಮಿ ಅಥವಾ ನಿಖಿಲ್ ಸ್ವರ್ಧೆ ಮಾಡುವಂತೆ ಜೆಡಿಎಸ್ ಕಾರ್ಯಕರ್ತರು ಮನವಿ ಮಾಡಿದ್ದರು. ಬಹುತೇಕ ಜೆಡಿಎಸ್ ಮಾಜಿ ಶಾಸಕರ ಒಲವು ಕೂಡ ಕುಮಾರಸ್ವಾಮಿ ಮೇಲಿದೆ. ಈ ಬಾರಿ ನಾನು ಸ್ವರ್ಧೆ ಮಾಡಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಸ್ವಷ್ಟ ಪಡಿಸಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವರೇ ಸ್ವರ್ಧೆ ಮಾಡ್ತಾರಾ? ಎಂದು ಕಾದು ನೋಡಬೇಕಿದೆ. ಮಾರ್ಚ್ 25 ರಂದು ಅಭ್ಯರ್ಥಿ ಘೋಷಣೆಯಾಗಲಿದೆ.
ಕುತೂಹಲ ಮೂಡಿಸಿರೋ ಸಂಸದೆ ಸುಮಲತಾ ನಡೆ
ಇನ್ನು ಮತ್ತೊಂದೆಡೆ ರೆಬಲ್ ಲೇಡಿ ಸುಮಲತಾ ಅವರು ಮೈತ್ರಿ ಧರ್ಮ ಪಾಲನೆ ಮಾಡಿ, ಜೆಡಿಎಸ್ಗೆ ಬೆಂಬಲ ಕೊಡ್ತಾರಾ? ಅಥವಾ ಪಕ್ಷೇತರವಾಗಿ ಸ್ವರ್ಧೆ ಮಾಡ್ತಾರಾ ಎಂಬ ಕುತೂಹಲ ಮನೆ ಮಾಡಿದೆ. ಇದುವರೆಗೂ ತನ್ನ ಮುಂದಿನ ರಾಜಕೀಯ ನಡೆಯ ಬಗ್ಗೆ ಸುಮಲತಾ ಸ್ವಷ್ಟನೆ ನೀಡಿಲ್ಲ. ಈಗಲೂ ಬಿಜೆಪಿ ಟಿಕೆಟ್ಗಾಗಿ ಪ್ರಯತ್ನ ಪಡುತ್ತಿದ್ದಾರೆ. ನಾನು ಮಂಡ್ಯದಿಂದಲೇ ಸ್ವರ್ಧೆ ಮಾಡೇ ಮಾಡುತ್ತೇನೆ ಎಂದೂ ಹೇಳಿದ್ದಾರೆ. ಆದರೆ ಇದುವರೆಗೂ ತಮ್ಮ ಅಭಿಪ್ರಾಯ ತಿಳಿಸಿಲ್ಲ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ