ಮಳೆ ಅವಾಂತರಕ್ಕೆ ಗಗನಕ್ಕೇರಿದ ಟೊಮೆಟೋ ಬೆಲೆ; ಬೆಂಗಳೂರಿನಲ್ಲಿ ಇಂದಿನ ದರ ಎಷ್ಟು ಗೊತ್ತಾ?

ಬೆಂಗಳೂರಿನಲ್ಲಿ ಟೊಮೆಟೋ ಬೆಲೆ ಸದ್ಯ ಗಗನಕ್ಕೇರಿದೆ. ಅಕಾಲಿಕ ಮಳೆಯು ಟೊಮೆಟೋ ದರಗಳ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಈಗ ಟೊಮೆಟೋ ಕೆಜಿಗೆ 70 ರೂಪಾಯಿಯಾಗಿದೆ.

ಮಳೆ ಅವಾಂತರಕ್ಕೆ ಗಗನಕ್ಕೇರಿದ ಟೊಮೆಟೋ ಬೆಲೆ; ಬೆಂಗಳೂರಿನಲ್ಲಿ ಇಂದಿನ ದರ ಎಷ್ಟು ಗೊತ್ತಾ?
ಟೊಮೆಟೊ

ಬೆಂಗಳೂರು: ರಾಜ್ಯದಲ್ಲಿ ಅಕಾಲಿಕ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥವಾಗಿದೆ. ಒಂದು ಕಡೆ ಸಂಚಾರಕ್ಕೆ ತೊಂದರೆಯಾದರೆ ಇನ್ನೊಂದು ಕಡೆ ಕಟಾವಿಗೆ ಸಿದ್ಧವಾದ ಬೆಳೆಗಳು ನೀರು ಪಾಲಾಗಿದೆ. ಅದರಲ್ಲೂ ಬೆಳೆಯನ್ನೇ ನಂಬಿಕೊಂಡು ಜೀವನ ನಡೆಸುವ ರೈತರ ಸ್ಥಿತಿ ಹೇಳತೀರದು. ಗದ್ದೆಗಳಲ್ಲಿ, ತೋಟಗಳಲ್ಲಿ ನೀರು ತುಂಬಿಕೊಂಡಿದ್ದು, ರೈತರು ಆತಂಕದಲ್ಲೇ ಜೀವನ ಸಾಗಿಸುವಂತಾಗಿದೆ. ಹೀಗಿರುವಾಗಲೇ ತರಕಾರಿಗಳ ಬೆಲೆ ಏರಿಕೆಯಾಗಿದೆ. ಇದಕ್ಕೆ ಕಾರಣ ಫಸಲು ಸರಿಯಾಗಿ ಮಾರುಕಟ್ಟೆ ಸೇರದಿರುವುದು. ಅದರಲ್ಲೂ ಈ ಹಿಂದೆ ರಸ್ತೆಗೆ ಟೊಮೆಟೋಗಳನ್ನು ಸುರಿದು ಪ್ರತಿಭಟನೆ ನಡೆಸುತ್ತಿದ್ದ ರೈತರು ಈಗ ದಾಖಲೆಯ ಮೊತ್ತಕ್ಕೆ ಟೊಮೆಟೋ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಮಾರುಕಟ್ಟೆಗೆ ಟೊಮೆಟೋ ಪೂರೈಕೆಯಾಗುತ್ತಿಲ್ಲ. ಬೆಂಗಳೂರಿನಲ್ಲಿ ಟೊಮೆಟೋ ಬೆಲೆ ಸದ್ಯ ಗಗನಕ್ಕೇರಿದೆ. ಅಕಾಲಿಕ ಮಳೆಯು ಟೊಮೆಟೋ ದರಗಳ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಈಗ ಟೊಮೆಟೋ ಕೆಜಿಗೆ 70 ರೂಪಾಯಿಯಾಗಿದೆ ಎಂದು ಮಾರಾಟಗಾರರಾದ ಇಂದ್ರೇಶ್ ಹೇಳಿದ್ದಾರೆ.

ಇನ್ನೂ ಚೆನ್ನೈನಲ್ಲಿ ಟೊಮೆಟೋ ಬೆಲೆ ಕೆಜಿಗೆ 80 ರಿಂದ 90 ರೂಪಾಯಿ ನಿಗದಿಯಾಗಿದೆ. ಮಳೆಯಿಂದಾಗಿ ಟೊಮ್ಯಾಟೋ ಮಾತ್ರವಲ್ಲದೆ ಇತರ ತರಕಾರಿಗಳ ಬೆಲೆಯೂ ಕೆಜಿಗೆ 80 ರಿಂದ 90 ರೂಪಾಯಿವರೆಗೆ ನಿಗದಿಯಾಗಿದೆ.

ತಿರುವನಂತಪುರಂನ ಚಾಲಾ ಮಾರುಕಟ್ಟೆಯಲ್ಲಿ ಟೊಮೆಟೋ ಅತಿ ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ. ಕೆಜಿ ಟೊಮೆಟೋಗೆ 120 ರೂಪಾಯಿ ನಿಗದಿಯಾಗಿದೆ. ಚಿಲ್ಲರೆ ಬೆಲೆ 140-160 ರೂಪಾಯಿ ನಡುವೆ ಇರುತ್ತದೆ ಮತ್ತು ಸಗಟು ಬೆಲೆ 120 ರೂ ಇದೆ. ಭಾರೀ ಮಳೆಯಿಂದಾಗಿ ಬೆಳೆಗಳು ಹಾನಿಗೊಳಗಾದ ಹಿನ್ನೆಲೆಯಲ್ಲಿ ದರಗಳ ಮೇಲೆ ಪರಿಣಾಮ ಬೀರಿವೆ ಎಂದು ವ್ಯಾಪಾರಸ್ಥರು ಅಭಿಪ್ರಾಯಪಟ್ಟಿದ್ದಾರೆ.

ತರಕಾರಿ ಬೆಲೆ ಹೆಚ್ಚಳಕ್ಕೆ ಮಳೆಯೇ ಕಾರಣ ಪ್ರಾಥಮಿಕ ಅಂದಾಜಿನ ಪ್ರಕಾರ, ಐದು ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದ್ದು, 30,114 ಹೆಕ್ಟೇರ್ ತೋಟಗಾರಿಕಾ ಬೆಳೆ ನಷ್ಟವಾಗಿದೆ.

ಗದಗ ಉತ್ತರ ಕರ್ನಾಟಕ ಜಿಲ್ಲೆಯ ಗದಗದಲ್ಲಿ, ಆರಂಭಿಕ ಅಂದಾಜಿನ ಪ್ರಕಾರ 2,200 ಹೆಕ್ಟೇರ್ ಬೆಳೆಗಳು ಮತ್ತು 1,300 ಹೆಕ್ಟೇರ್ ತೋಟಗಾರಿಕಾ ಉತ್ಪನ್ನಗಳಿಗೆ ನಷ್ಟವಾಗಿದೆ. ಈರುಳ್ಳಿ, ಮೆಣಸಿನಕಾಯಿ, ಬಾಳೆ, ಮೆಕ್ಕೆ ಜೋಳ ಬೆಳೆಗಳು ಮಳೆಯಿಂದ ಹಾನಿಗೀಡಾಗಿವೆ.

ಧಾರವಾಡ ಜಿಲ್ಲೆಯ ಅಧಿಕಾರಿಗಳು ನಡೆಸಿದ ಪ್ರಾಥಮಿಕ ಸಮೀಕ್ಷೆ ಪ್ರಕಾರ ಇದುವರೆಗೆ 21,344 ಹೆಕ್ಟೇರ್ ಕೃಷಿ ಬೆಳೆ ಹಾಗೂ 8,759 ತೋಟಗಾರಿಕೆ ಬೆಳೆಗಳು ನಾಶವಾಗಿವೆ. ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಹಾನಿಯ ಅಂದಾಜು ನಡೆಸುತ್ತಿದ್ದಾರೆ. ಹಾನಿಗೊಳಗಾದ ಬೆಳೆಗಳಲ್ಲಿ ಗೋಧಿ, ಮೆಕ್ಕೆ ಜೋಳ, ಸೋಯಾ, ಹತ್ತಿ ಇತರವು ಸೇರಿವೆ.

ತುಮಕೂರು ತುಮಕೂರು ಜಿಲ್ಲೆಯಲ್ಲೂ ಧಾರಾಕಾರ ಮಳೆಯಿಂದಾಗಿ ರೈತರು ನಷ್ಟ ಅನುಭವಿಸಿದ್ದಾರೆ. ಪ್ರಾಥಮಿಕ ಅಂದಾಜಿನ ಪ್ರಕಾರ, ಸುಮಾರು 60,000 ಹೆಕ್ಟೇರ್ ಬೆಳೆ ಹಾನಿಯಾಗಿದೆ. ರಾಗಿ, ನೆಲಗಡಲೆ, ತೊಗರಿ ಬೇಳೆ ನಾಶವಾಗಿದೆ.

ಕೊಪ್ಪಳ ಕೊಪ್ಪಳ ಜಿಲ್ಲೆಯನ್ನು ಭತ್ತದ ನಾಡು ಎಂದು ಕರೆಯಲಾಗುತ್ತದೆ. ಆದರೆ ಮಳೆಯಿಂದ ಸಾವಿರಾರು ಭತ್ತ ಬೆಳೆಗಾರರು ಬೆಳೆ ಕಳೆದುಕೊಂಡಿದ್ದು, ಸರಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಕೊಪ್ಪಳದಲ್ಲಿ 2,500 ಹೆಕ್ಟೇರ್ ಕೃಷಿ ಭೂಮಿ ನಾಶವಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದೆರಡು ವಾರಗಳಿಂದ ಭಾರೀ ಮಳೆಯಾಗುತ್ತಿದ್ದು, ವ್ಯಾಪಕ ಬೆಳೆ ನಾಶವಾಗಿದೆ. ಒಟ್ಟು 6 ಮಂದಿ ಪ್ರಾಣ ಕಳೆದುಕೊಂಡಿದ್ದು, ನೂರಾರು ಹೆಕ್ಟೇರ್ ಬೆಳೆ ಜಲಾವೃತವಾಗಿದೆ. ಆಲಗಟ್ಟಿ ಗ್ರಾಮದಲ್ಲಿ 300 ಎಕರೆ ತೋಟಗಾರಿಕೆ ಬೆಳೆಗಳು ಜಲಾವೃತವಾಗಿದೆ. ಕಳೆದ ವರ್ಷ ನಿರ್ಮಿಸಿದ ಅವೈಜ್ಞಾನಿಕ ಚೆಕ್ ಡ್ಯಾಂಗಳೇ ನಷ್ಟಕ್ಕೆ ಕಾರಣ ಎಂದು ರೈತರು ಆರೋಪಿಸಿದ್ದಾರೆ.

ಹಾವೇರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯಲ್ಲಿ ನ.1ರಿಂದ ಇಲ್ಲಿಯವರೆಗೆ 18,444 ಹೆಕ್ಟೇರ್ ಬೆಳೆ ನಾಶವಾಗಿದ್ದು, ಹತ್ತಿ, ಸೋಯಾಬೀನ್, ಶೇಂಗಾ ಸೇರಿದಂತೆ ಇತರೆ ಬೆಳೆಗಳು ನಾಶವಾಗಿವೆ. ಸರಕಾರ ಮಧ್ಯಂತರ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಚಳಿಗಾಲದಲ್ಲಿ ನುಗ್ಗೆಕಾಯಿಗೆ ಹೆಚ್ಚಿದ ಬೇಡಿಕೆ; ಕೆಜಿಗೆ 400 ರೂಪಾಯಿ ನಿಗದಿ!

ಕೊಪ್ಪಳ: ಟೊಮೆಟೋ ದರ ಕುಸಿತ; ಬೆಳೆದ ಟೊಮೆಟೋವನ್ನೆಲ್ಲಾ ಬೀದಿಗೆ ಸುರಿದು ರೈತರಿಂದ ಆಕ್ರೋಶ

Published On - 11:07 am, Wed, 8 December 21

Click on your DTH Provider to Add TV9 Kannada