ಚಿಕ್ಕಬಳ್ಳಾಪುರ: ಚಳಿಗಾಲದಲ್ಲಿ ನುಗ್ಗೆಕಾಯಿಗೆ ಹೆಚ್ಚಿದ ಬೇಡಿಕೆ; ಕೆಜಿಗೆ 400 ರೂಪಾಯಿ ನಿಗದಿ!

TV9 Digital Desk

| Edited By: preethi shettigar

Updated on:Dec 07, 2021 | 1:20 PM

ಬೇಡಿಕೆಯ ಅನುಸಾರವಾಗಿ ಈಗ ಮಹಾರಾಷ್ಟ್ರದಿಂದ ನುಗ್ಗೆಕಾಯಿ ತರಿಸಿ ವರ್ತಕರು ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ಕೆಜಿ ನುಗ್ಗೆಕಾಯಿಗೆ 400 ರೂಪಾಯಿ ನಿಗದಿಯಾಗಿದೆ. ಆದರೂ ಗ್ರಾಹಕರು ಮುಗಿಬಿದ್ದು ನುಗ್ಗೆಕಾಯಿ ಖರೀದಿ ಮಾಡುತ್ತಿದ್ದಾರೆ.

ಚಿಕ್ಕಬಳ್ಳಾಪುರ: ಚಳಿಗಾಲದಲ್ಲಿ ನುಗ್ಗೆಕಾಯಿಗೆ ಹೆಚ್ಚಿದ ಬೇಡಿಕೆ; ಕೆಜಿಗೆ 400 ರೂಪಾಯಿ ನಿಗದಿ!
ನುಗ್ಗೆಕಾಯಿ


ಚಿಕ್ಕಬಳ್ಳಾಫುರ: ನುಗ್ಗೆಕಾಯಿಗೂ ಚಳಿಗಾಲಕ್ಕೂ ಅದೇನೋ ಒಂಥರ ನಂಟು. ಚಳಿಗಾಲದಲ್ಲಿ ನುಗ್ಗೆಕಾಯಿ (Moringa) ಸಾಂಬರ್ ತಿನ್ನಬೇಕು ಎಂಬುವುದು ಹಲವರ ಬಯಕೆ. ಏಕೆಂದರೆ ಚಳಿಗೆ ನುಗ್ಗೆಕಾಯಿ ಹೇಳಿ ಮಾಡಿಸಿದ ತರಕಾರಿ. ಆದರೆ ನುಗ್ಗೆಕಾಯಿ ಮಾರುಕಟ್ಟೆಯಲ್ಲಿ ನುಗ್ಗೆಕಾಯಿ ಸಿಗುತ್ತಿಲ್ಲ. ಹೀಗಾಗಿ ಬೇಡಿಕೆಯ ಅನುಸಾರವಾಗಿ ಈಗ ಮಹಾರಾಷ್ಟ್ರದಿಂದ ನುಗ್ಗೆಕಾಯಿ ತರಿಸಿ ವರ್ತಕರು ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ಕೆಜಿ ನುಗ್ಗೆಕಾಯಿಗೆ 400 ರೂಪಾಯಿ ನಿಗದಿಯಾಗಿದೆ. ಆದರೂ ಗ್ರಾಹಕರು ಮುಗಿಬಿದ್ದು ನುಗ್ಗೆಕಾಯಿ ಖರೀದಿ ಮಾಡುತ್ತಿದ್ದಾರೆ.

ಇತ್ತೀಚೆಗೆ ಸುರಿದ ಮಳೆಗೆ ನುಗ್ಗೆಕಾಯಿ ಗಿಡಗಳು ಹಾಳಾಗಿವೆ. ಆದರೆ ಈಗ ಮದುವೆ ಸೀಜನ್ ಹೀಗಾಗಿ ಮದುವೆ ಊಟದಲ್ಲಿ ನುಗ್ಗೆಕಾಯಿ ಸಾಂಬರ್ ಬೇಕೆ ಬೇಕು. ಈ ಕಾರಣಕ್ಕೆ ಕೈಯಲ್ಲಿ ಹಣ ಹಿಡಿದು ನುಗ್ಗೆಕಾಯಿಗೆ ಗ್ರಾಹಕರು ಪರದಾಡುತ್ತಿದ್ದಾರೆ. ಗೌರಿಬಿದನೂರಿಂದ ಚಿಕ್ಕಬಳ್ಳಾಪುರಕ್ಕೆ ಆಗಮಿಸಿ ನುಗ್ಗೆಕಾಯಿ ಖರೀದಿ ಮಾಡಿದ ಗ್ರಾಹಕ ರವಿ ಎನ್ನುವವರು ಈ ಕುರಿತು ಮಾತನಾಡಿದ್ದು, ಹಣ ಹಿಡಿದು ಮಾರುಕಟ್ಟೆಗೆ ತಿರುಗಾಡಿದರೂ ನುಗ್ಗೆಕಾಯಿ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.

ತರಕಾರಿ ಬೆಲೆ ಹೆಚ್ಚಳಕ್ಕೆ ಮಳೆಯೇ ಕಾರಣ
ಪ್ರಾಥಮಿಕ ಅಂದಾಜಿನ ಪ್ರಕಾರ, ಐದು ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದ್ದು, 30,114 ಹೆಕ್ಟೇರ್ ತೋಟಗಾರಿಕಾ ಬೆಳೆ ನಷ್ಟವಾಗಿದೆ.

ಗದಗ
ಉತ್ತರ ಕರ್ನಾಟಕ ಜಿಲ್ಲೆಯ ಗದಗದಲ್ಲಿ, ಆರಂಭಿಕ ಅಂದಾಜಿನ ಪ್ರಕಾರ 2,200 ಹೆಕ್ಟೇರ್ ಬೆಳೆಗಳು ಮತ್ತು 1,300 ಹೆಕ್ಟೇರ್ ತೋಟಗಾರಿಕಾ ಉತ್ಪನ್ನಗಳಿಗೆ ನಷ್ಟವಾಗಿದೆ. ಈರುಳ್ಳಿ, ಮೆಣಸಿನಕಾಯಿ, ಬಾಳೆ, ಮೆಕ್ಕೆ ಜೋಳ ಬೆಳೆಗಳು ಮಳೆಯಿಂದ ಹಾನಿಗೀಡಾಗಿವೆ.

ಧಾರವಾಡ
ಜಿಲ್ಲೆಯ ಅಧಿಕಾರಿಗಳು ನಡೆಸಿದ ಪ್ರಾಥಮಿಕ ಸಮೀಕ್ಷೆ ಪ್ರಕಾರ ಇದುವರೆಗೆ 21,344 ಹೆಕ್ಟೇರ್ ಕೃಷಿ ಬೆಳೆ ಹಾಗೂ 8,759 ತೋಟಗಾರಿಕೆ ಬೆಳೆಗಳು ನಾಶವಾಗಿವೆ. ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಹಾನಿಯ ಅಂದಾಜು ನಡೆಸುತ್ತಿದ್ದಾರೆ. ಹಾನಿಗೊಳಗಾದ ಬೆಳೆಗಳಲ್ಲಿ ಗೋಧಿ, ಮೆಕ್ಕೆ ಜೋಳ, ಸೋಯಾ, ಹತ್ತಿ ಇತರವು ಸೇರಿವೆ.

ತುಮಕೂರು
ತುಮಕೂರು ಜಿಲ್ಲೆಯಲ್ಲೂ ಧಾರಾಕಾರ ಮಳೆಯಿಂದಾಗಿ ರೈತರು ನಷ್ಟ ಅನುಭವಿಸಿದ್ದಾರೆ. ಪ್ರಾಥಮಿಕ ಅಂದಾಜಿನ ಪ್ರಕಾರ, ಸುಮಾರು 60,000 ಹೆಕ್ಟೇರ್ ಬೆಳೆ ಹಾನಿಯಾಗಿದೆ. ರಾಗಿ, ನೆಲಗಡಲೆ, ತೊಗರಿ ಬೇಳೆ ನಾಶವಾಗಿದೆ.

ಕೊಪ್ಪಳ
ಕೊಪ್ಪಳ ಜಿಲ್ಲೆಯನ್ನು ಭತ್ತದ ನಾಡು ಎಂದು ಕರೆಯಲಾಗುತ್ತದೆ. ಆದರೆ ಮಳೆಯಿಂದ ಸಾವಿರಾರು ಭತ್ತ ಬೆಳೆಗಾರರು ಬೆಳೆ ಕಳೆದುಕೊಂಡಿದ್ದು, ಸರಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಕೊಪ್ಪಳದಲ್ಲಿ 2,500 ಹೆಕ್ಟೇರ್ ಕೃಷಿ ಭೂಮಿ ನಾಶವಾಗಿದೆ.

ಚಿತ್ರದುರ್ಗ
ಜಿಲ್ಲೆಯಲ್ಲಿ ಕಳೆದೆರಡು ವಾರಗಳಿಂದ ಭಾರೀ ಮಳೆಯಾಗುತ್ತಿದ್ದು, ವ್ಯಾಪಕ ಬೆಳೆ ನಾಶವಾಗಿದೆ. ಒಟ್ಟು 6 ಮಂದಿ ಪ್ರಾಣ ಕಳೆದುಕೊಂಡಿದ್ದು, ನೂರಾರು ಹೆಕ್ಟೇರ್ ಬೆಳೆ ಜಲಾವೃತವಾಗಿದೆ. ಆಲಗಟ್ಟಿ ಗ್ರಾಮದಲ್ಲಿ 300 ಎಕರೆ ತೋಟಗಾರಿಕೆ ಬೆಳೆಗಳು ಜಲಾವೃತವಾಗಿದೆ. ಕಳೆದ ವರ್ಷ ನಿರ್ಮಿಸಿದ ಅವೈಜ್ಞಾನಿಕ ಚೆಕ್ ಡ್ಯಾಂಗಳೇ ನಷ್ಟಕ್ಕೆ ಕಾರಣ ಎಂದು ರೈತರು ಆರೋಪಿಸಿದ್ದಾರೆ.

ಹಾವೇರಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯಲ್ಲಿ ನ.1ರಿಂದ ಇಲ್ಲಿಯವರೆಗೆ 18,444 ಹೆಕ್ಟೇರ್ ಬೆಳೆ ನಾಶವಾಗಿದ್ದು, ಹತ್ತಿ, ಸೋಯಾಬೀನ್, ಶೇಂಗಾ ಸೇರಿದಂತೆ ಇತರೆ ಬೆಳೆಗಳು ನಾಶವಾಗಿವೆ. ಸರಕಾರ ಮಧ್ಯಂತರ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಕೋಲಾರ
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ 34,454 ಹೆಕ್ಟೇರ್ ಬೆಳೆ ನಾಶವಾಗಿದೆ. ರಾಗಿ, ಟೊಮೆಟೋ ಸೇರಿದಂತೆ ಇತರೆ ಬೆಳೆಗಳು ನಾಶವಾಗಿವೆ. ಕೋಲಾರ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಆರು ಎಕರೆ ಟೊಮೆಟೋ ಬೆಳೆ ನಾಶವಾಗಿದೆ.

ಇದನ್ನೂ ಓದಿ:

ತರಕಾರಿ ಬೆಲೆ ಗಗನಕ್ಕೆ: ದಲ್ಲಾಳಿಗಳ ಶೋಷಣೆ ನಿಲ್ಲದ ಹೊರತು ರೈತ ಸಮುದಾಯದ ಬವಣೆ ತಪ್ಪಲಾರದು!

ಭಾರೀ ಮಳೆಗೆ ಐದು ಲಕ್ಷ ಹೆಕ್ಟೇರ್ ಬೆಳೆ ನಾಶ; ದುಪ್ಪಟ್ಟಾದ ತರಕಾರಿ ಬೆಲೆ, ಪ್ಯಾಕೆಟ್ ಒಂದರಲ್ಲಿ 2 ಟೊಮೆಟೋ ಮಾರಾಟ!


ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada