ಚಿನ್ನಾಭರಣ ತಯಾರಕರಿಗೆ ಹುಲಿ ಉಗುರು ಹೆಸರಿನಲ್ಲಿ ಟಾರ್ಚಾರ್ ಕೊಡುತ್ತಿದ್ದಾರೆ -ಟಿ ಎ ಶರವಣ
ನಾನು ಅಜ್ಜಿ ಕಾಲದಿಂದಲೂ ಆನೆ ಕೂದಲಿನ ಕೈಖಡ್ಗ ಹಾಕಿಕೊಂಡಿದ್ದೇನೆ. ಇದೇನು ಒರಿಜಿನಲ್ ಅಲ್ಲ.. ಸಿಂಥೆಟಿಕ್ ನಿಂದ ಮಾಡಿ ಅದಕ್ಕೆ ಚಿನ್ನದ ಲೇಪ ಮಾಡಲಾಗಿದೆ. ಇದನ್ನೂ ಹಾಕಿಕೊಳ್ಳುವಹಾಗಿಲ್ವಾ ಹಾಗಾದರೆ? ಎಂದು ಟಿ ಎ ಶರವಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ಅ.28: ಹುಲಿ ಉಗುರಿನ ವಿವಾದ (Tiger Claw Pendant) ರಾಜ್ಯದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದು ಸೆಲೆಬ್ರೆಟಿಗಳು, ಅರ್ಚಕರು, ಪ್ರಭಾವಿಗಳು ಹುಲಿ ಉಗುರು ಧರಿಸಿ ವಿವಾದಕ್ಕೆ ಗುರಿಯಾಗಿದ್ದಾರೆ. ಇದನ್ನೆ ಬಂಡವಾಳವನ್ನಾಗಿಸಿಕೊಂಡು ನಮಗೆ ಕಿರುಕುಳ ಕೊಡ್ತಿದ್ದಾರೆ. ಚಿನ್ನಾಭರಣ ತಯಾರಕರಿಗೆ ಹುಲಿ ಉಗುರು ಹೆಸರಿನಲ್ಲಿ ಟಾರ್ಚಾರ್ ಕೊಡುತ್ತಿದ್ದಾರೆ. ಚಿನ್ನಾಭರಣ ವ್ಯಾಪಾರಿಗಳಿಗೂ ಅನಗತ್ಯವಾಗಿ ಮಾಹಿತಿ ಪಡೆಯುವ ಹೆಸರಿನಲ್ಲಿ ಟಾರ್ಚಾರ್ ಕೊಟ್ತಿದ್ದಾರೆ ಎಂದು ಕರ್ನಾಟಕ ಜುವೆಲ್ಲರಿ ಅಸೋಸಿಯೇಷನ್ ಅಧ್ಯಕ್ಷ ಟಿ ಎ ಶರವಣ (T.A. Sharavana) ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ವೇಳೆ ಹೇಳಿದರು.
ಇದು ರಾಜ್ಯದ ಚಿನ್ನದ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸರಿಯಾಗಿ ಪರಿಶೀಲನೆ ಮಾಡ್ತಿಲ್ಲ. ಅಧಿಕಾರಿಗಳು ಪುಕ್ಕಟ್ಟೆ ಪ್ರಚಾರಕ್ಕೋಸ್ಕರ ಹೀಗೆ ಮಾಡ್ತಿದ್ದಾರೆ. ಹುಲಿ ಉಗುರಿನ ಹೆಸರಿನಲ್ಲಿ ಕಿರುಕುಳ ನೀಡುತ್ತಿರುವುದು ಸರಿ ಅಲ್ಲ. ಈ ಕುರಿತಾಗಿ ಸರ್ಕಾರ ಮಧ್ಯ ಪ್ರವೇಶ ಮಾಡ್ಬೇಕು. ಈ ಈಶ್ವರ್ ಖಂಡ್ರೆಯವರು ಏನು ಮಾಡ್ತಿದ್ದಾರೋ ಗೊತ್ತಿಲ್ಲ. ಇಷ್ಟು ದಿನ ಸುಮ್ಮನಿದ್ದ ಅಧಿಕಾರಿಗಳು ಇದೀಗಾ ಏಕಾಏಕಿಯಾಗಿ ಈ ರೀತಿಯ ವರ್ತನೆ ತೋರುತ್ತಿರುವುದು ಯಾಕೆ? ಯಾವುದೇ ನೋಟಿಸ್ ಕೊಡದೇ, ಎಫ್ಎಸ್ಎಲ್ ಮಾಡದೇ ಏಕಾಏಕಿಯಾಗಿ ಅರೆಸ್ಟ್ ಮಾಡುತ್ತಿರುವುದು ಯಾಕೆ? ರಾಜ್ಯದಲ್ಲಿ ಜ್ವಲಾಂತ ಸಮಸ್ಯೆಗಳಿವೆ. ಆ ಸಮಸ್ಯೆಗಳ ಕುರಿತಾಗಿ ಗಮನ ಹರಿಸಿ. ತರಾತುರಿಯಲ್ಲಿ ಜನರಿಗೆ ಹಿಂಸೆ ಮಾಡ್ಬೇಡಿ. ಅರಣ್ಯ ಅಧಿಕಾರಿಗಳು ಅರಿವು ಮೂಡಿಸಿ. ಅದನ್ನ ಬಿಟ್ಟು ದೊಡ್ಡ ಸಾಹಸ ಮಾಡಿದ ಹಾಗೇ ಅರಣ್ಯಾಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಫೋಟೋ ನೋಡಿಕೊಂಡು ಹೋಗಿ ಸರಿಯಾಗಿ ಪರಿಶೀಲಿಸದೇ ಅರೆಸ್ಟ್ ಮಾಡುವುದು ಸರಿಯಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಜುವೆಲ್ಲರಿ ಶಾಪ್ಗಳಿಗೆ ಹೋಗಿ ವ್ಯಾಪಾರಸ್ಥರಿಗೆ ಹಿಂಸೆ ನೀಡ್ಬೇಡಿ ಎಂದು ಶರವಣ ಅವರು ಮನವಿ ಮಾಡಿದರು.
ಹುಲಿಯನ್ನು ಹಿಡಿದು ಉಗುರು ಕತ್ತರಿಸುವ ತಾಕತ್ತು ಯಾರಿಗಿದೆ?
ವರ್ತೂರು ಸಂತೋಷ್ ಅನ್ನು ಅಮಾನವೀಯವಾಗಿ ಅಧಿಕಾರಿಗಳು ನಡೆಸಿಕೊಂಡರು. ಯಾವುದೇ ನೋಟಿಸ್ ಕೊಡದೆ ಸಂತೋಷ್ ರನ್ನು ಬಂಧಿಸಿ ಜೈಲಿಗೆ ಹಾಕಿದ್ರು. ರಾಜ್ಯದಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳು ಸಾಕಷ್ಟಿವೆ. ಇವರು ಇದೇ ರೀತಿ ಮಾಡಿದರೆ ಚಿನ್ನದ ವ್ಯಾಪಾರಿಗಳು ಬದುಕೋದು ಹೇಗೆ? ಹುಲಿಯನ್ನು ಹಿಡಿದು ಉಗುರು ಕತ್ತರಿಸುವ ತಾಕತ್ತು ಯಾರಿಗಿದೆ ಈಗ. ಯಾರು ಹುಲಿ ಉಗುರು ಪೆಂಡೆಂಟ್ ಧರಿಸುವವರಿಲ್ಲ ಈಗ. ಪ್ಲಾಸ್ಟಿಕ್, ಸಿಂಥೆಟಿಕ್ ವಸ್ತುಗಳಿಂದ ಈಗ ಹುಲಿ ಉಗುರು ತಯಾರಿಸಲಾಗುತ್ತೆ. ಅದನ್ನು ಬಿಟ್ಟರೆ ಒರಿಜಿನಲ್ ಹುಲಿ ಉಗುರು ಯಾರ ಬಳಿಯೂ ಇರ್ಲಿಕ್ಕಿಲ್ಲ ಎಂದರು.
ಇನ್ನು ಸುದ್ದಿಗೋಷ್ಟಿ ವೇಳೆ ಶರವಣ ಅವರು, ಹುಲಿ ಉಗುರು ರೂಪದ ಚಿನ್ನ ಎತ್ತಿ ಹಿಡಿದು ಇದು ಒರಿಜಿನಲ್ ಅಲ್ಲ. ಇದು ಪ್ಲಾಸ್ಟಿಕ್ ಕಣ್ರೀ. ಇದರ ಬೆಲೆ 300 ರೂಪಾಯಿ ಎಂದರು. ಇದನ್ನು ಜನ ಸಾಮಾನ್ಯರು ಖರೀದಿಸಿ ತೊಡುವಂತಿಲ್ವಾ? ಎಂದ ಶರವಣ, ನಾನು ಅಜ್ಜಿ ಕಾಲದಿಂದಲೂ ಆನೆ ಕೂದಲಿನ ಕೈಖಡ್ಗ ಹಾಕಿಕೊಂಡಿದ್ದೇನೆ. ಇದೇನು ಒರಿಜಿನಲ್ ಅಲ್ಲ.. ಸಿಂಥೆಟಿಕ್ ನಿಂದ ಮಾಡಿ ಅದಕ್ಕೆ ಚಿನ್ನದ ಲೇಪ ಮಾಡಲಾಗಿದೆ. ಇದನ್ನೂ ಹಾಕಿಕೊಳ್ಳುವಹಾಗಿಲ್ವಾ ಹಾಗಾದರೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ