ಬೆಂಗಳೂರು, ಆ.31: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ (Rain) ಇಲ್ಲದೆ ರೈತರು ಕಂಗಾಲಾಗಿದ್ದರೆ, ಇತ್ತ ಬೆಂಗಳೂರು(Bengaluru), ಮಂಡ್ಯ, ಕೋಲಾರ ಸೇರಿದಂತೆ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಹೌದು, ಬೆಂಗಳೂರಿನಲ್ಲಿ ವರುಣನ ಸಿಂಚನವಾಗಿದ್ದು, ಇದರಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದ ಕೆಲವು ಕಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ಎಲ್ಲೆಲ್ಲಿ ಮಳೆಯಾಗುತ್ತಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರಿನ ಶಾಂತಿನಗರ, ಕಲಾಸಿಪಾಳ್ಯ ಸಿಟಿ ಮಾರ್ಕೇಟ್, ಜಯನಗರ, ವಿಲ್ಸನ್ ಗಾರ್ಡನ್, ಎಂಜಿ ರಸ್ತೆ, ವಿವೇಕ ನಗರ, ಕೋರಮಂಗಲ, ಹೆಚ್.ಎಸ್.ಆರ್ ಲೇಔಟ್, ಬೆಳ್ಳಂದೂರು, ವರ್ತೂರು, ಸರ್ಜಾಪುರ, ಮಾರತ್ಹಳ್ಳಿ, ಕಾಡುಗೋಡಿ, ವೈಟ್ ಫೀಲ್ಡ್, ಕೆ.ಆರ್.ಪುರಂ ಸೇರಿದಂತೆ ನಗರದ ಹಲವೆಡೆ ಭಾರೀ ಮಳೆಯಾಗುತ್ತಿದೆ.
ಮಂಡ್ಯದಲ್ಲೂ ವರುಣನ ದರ್ಶನವಾಗಿದೆ. ಬಿರು ಬಿಸಿಲಿನ ಮಧ್ಯೆ ಗುಡುಗು, ಸಿಡಿಲು ಸಹಿತ ಧಾರಕಾರ ಮಳೆಯಾಗಿದೆ. ಕಳೆದ ಅರ್ಧ ಗಂಟೆಯಿಂದ ಸುರಿಯುತ್ತಿರೋ ಮಳೆಗೆ ಬೆಂಗಳೂರು-ಮೈಸೂರು ದಶಪಥ ರಸ್ತೆಯಲ್ಲಿ ವಾಹನ ಸವಾರರ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ರಸ್ತೆಯ ಪಕ್ಕದಲ್ಲೇ ವಾಹನ ಸವಾರರು ವಾಹನಗಳನ್ನು ನಿಲ್ಲಿಸಿಕೊಂಡಿದ್ದಾರೆ. ಇನ್ನು ಮಳೆಯಿಲ್ಲದೇ ಪರದಾಡುತ್ತಿದ್ದ ರೈತರಿಗೆ ಏಕಾಏಕಿ ಸುರಿದ ಮಳೆಯಿಂದ ಮಂಡ್ಯ ಜಿಲ್ಲೆಯ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಇದನ್ನೂ ಓದಿ:ನೆಲಮಂಗಲ: ಮಳೆಗಾಗಿ ಮಳೆರಾಯನ ಮೂರ್ತಿ ಮೇಲೆ ನೀರು ಸುರಿಸಿಕೊಂಡು ಪ್ರಾರ್ಥನೆ, ವಿಡಿಯೋ ವೈರಲ್
ಕಳೆದೊಂದು ತಾಸಿನಿಂದ ರಾಮನಗರ ಸುತ್ತಾಮುತ್ತಾ ಬಿರುಸಿನ ಮಳೆ ಆಗುತ್ತಿದೆ. ದಿಡೀರ್ ಮಳೆಗೆ ದ್ವಿಚಕ್ರ ವಾಹನ ಸವಾರರು ಶಾಕ್ ಆಗಿದ್ದು, ಕಡು ಬಿಸಿಲಿನ ಮಧ್ಯೆ ಮಳೆರಾಯ ತಂಪೆರೆದಿದ್ದಾನೆ. ಇನ್ನು ಕೋಲಾರದಲ್ಲಿ ತುಂತುರು ಮಳೆಯಾಗಿದೆ. ಮಳೆ ಇಲ್ಲದೆ ಬರಗಾಲದ ಛಾಯೆ ಆವರಿಸಿರುವ ಕೋಲಾರ ಜಿಲ್ಲೆಯಲ್ಲಿ ಒಂದು ತಿಂಗಳ ನಂತರ ತುಂತುರು ಮಳೆಯಾಗಿದೆ. ಜಿಲ್ಲೆಯಲ್ಲಿ ಮಳೆಗಾಲದಲ್ಲೂ ಬೇಸಿಗೆಯ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನಲೆ ಬಿತ್ತನೆ ಕುಂಠಿತವಾಗಿ ಮಳೆ ಇಲ್ಲದೆ ಬೆಳೆಗಳು ಒಣಗುತ್ತಿತ್ತು.
ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಚಿಕ್ಕಮಗಳೂರಿನಲ್ಲೂ ಧಾರಾಕಾರ ಮಳೆಯಾಗಿದೆ. ಕಳೆದ ಒಂದು ಗಂಟೆಯಿಂದ ಗದಗದಲ್ಲಿ ಧೋ ಎಂದು ಮಳೆ ಸುರಿಯುತ್ತಿದೆ. ಕಾಫಿನಾಡಿನಲ್ಲೂ ಕೂಡ ಕಳೆದ ಅರ್ಧ ಗಂಟೆಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಮಳೆ ಇಲ್ಲದೇ ಕಂಗಾಲಾಗಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಈ ಮೂಲಕ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:18 pm, Thu, 31 August 23