ಬೆಂಗಳೂರಿನಲ್ಲಿ ಅರ್ಧಕ್ಕರ್ಧ ಇಳಿದ ತ್ರಿಬಲ್ ರೈಡಿಂಗ್ ಕೇಸ್: ಆದ್ರೆ ಮಿಡ್‌ನೈಟ್ ಹೀರೋಗಿರಿಗೆ ಬೀದ್ದಿಲ್ಲ ಬ್ರೇಕ್

ಬೆಂಗಳೂರಿನಲ್ಲಿ AI ಕ್ಯಾಮೆರಾಗಳ ಅಳವಡಿಕೆ ಹಾಗೂ ವಿಶೇಷ ತಪಾಸಣೆಯಿಂದಾಗಿ 2024 ಕ್ಕೆ ಹೋಲಿಸಿದರೆ ತ್ರಿಬಲ್ ರೈಡಿಂಗ್ ಪ್ರಕರಣಗಳು ಗಣನೀಯವಾಗಿ ಕುಸಿದಿವೆ. ಆದಾಗ್ಯೂ, ಬಿಟಿಎಂ ಲೇಔಟ್, ಕೋರಮಂಗಲ ಸೇರಿದಂತೆ ಪ್ರಮುಖ ಹಾಟ್‌ಸ್ಪಾಟ್‌ಗಳಲ್ಲಿ ತಡರಾತ್ರಿ 10 ರಿಂದ ಮುಂಜಾನೆ 2 ಗಂಟೆಯ ಅವಧಿಯಲ್ಲಿ ಯುವಕರು ಹೀರೋಗಿರಿಗಾಗಿ ನಿಯಮ ಉಲ್ಲಂಘಿಸುತ್ತಿರುವುದು ಸಂಚಾರಿ ಪೊಲೀಸರಿಗೆ ಇಂದಿಗೂ ದೊಡ್ಡ ಸವಾಲಾಗಿ ಉಳಿದಿದೆ.

ಬೆಂಗಳೂರಿನಲ್ಲಿ ಅರ್ಧಕ್ಕರ್ಧ ಇಳಿದ ತ್ರಿಬಲ್ ರೈಡಿಂಗ್ ಕೇಸ್: ಆದ್ರೆ ಮಿಡ್‌ನೈಟ್ ಹೀರೋಗಿರಿಗೆ ಬೀದ್ದಿಲ್ಲ ಬ್ರೇಕ್
ಸಾಂದರ್ಭಿಕ ಚಿತ್ರ
Image Credit source: Banglore mirror

Updated on: Jun 10, 2026 | 2:55 PM

ಬೆಂಗಳೂರು, ಜೂನ್ 10: ಬೆಂಗಳೂರು ಸಂಚಾರಿ ಪೊಲೀಸರ (BTP) ವಾರ್ಷಿಕ ಅಂಕಿ-ಅಂಶಗಳ ಪ್ರಕಾರ, ನಗರದಲ್ಲಿ ತ್ರಿಬಲ್ ರೈಡಿಂಗ್ (Triple Riding) ಪ್ರಕರಣಗಳ ಸಂಖ್ಯೆ 2024 ರಲ್ಲಿ ಗರಿಷ್ಠ ಮಟ್ಟವನ್ನು ತಲುಪಿದ ನಂತರ ಈಗ ಗಣನೀಯವಾಗಿ ಕುಸಿದಿದೆ. ಆದಾಗ್ಯೂ, ವಾರಾಂತ್ಯದ ದಿನಗಳಲ್ಲಿ ಮತ್ತು ಪ್ರಮುಖ ಸಂಭ್ರಮಾಚರಣೆಗಳ ಸಂದರ್ಭದಲ್ಲಿ ತಡರಾತ್ರಿ ಸಂಚಾರ ಮಾಡುವವರು ವ್ಯವಸ್ಥೆಗೆ ಇನ್ನೂ ದೊಡ್ಡ ಸವಾಲಾಗಿ ಉಳಿದಿದ್ದಾರೆ.

ಮುಖ್ಯಾಂಶಗಳು

  • AI ಕ್ಯಾಮೆರಾಗಳ ಅಳವಡಿಕೆಯಿಂದ ಬೆಂಗಳೂರಲ್ಲಿ ತ್ರಿಬಲ್ ರೈಡಿಂಗ್ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿವೆ.
  • ಬಿಟಿಎಂ, ಕೋರಮಂಗಲದಂತಹ ಹಾಟ್‌ಸ್ಪಾಟ್‌ಗಳಲ್ಲಿ ತಡರಾತ್ರಿ ಸಂಚಾರ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
  • ಸ್ನೇಹಿತರ ಮುಂದೆ ಹೀರೋಗಿರಿ ಪ್ರದರ್ಶಿಸಲು ಯುವಕರು ಅಪಾಯಕಾರಿ ತ್ರಿಬಲ್ ರೈಡಿಂಗ್ ಮಾಡುತ್ತಿದ್ದಾರೆ.

ಅಂಕಿ-ಅಂಶಗಳು

  • 2023: 1,17,738 ಪ್ರಕರಣಗಳು
  • 2024: 1,59,485 ಪ್ರಕರಣಗಳು (ಅತಿ ಹೆಚ್ಚು)
  • 2025: 1,10,917 ಪ್ರಕರಣಗಳು
  • 2026 (ಪ್ರಸ್ತುತ ವರ್ಷದವರೆಗೆ): 59,851 ಪ್ರಕರಣಗಳು

ಪ್ರಕರಣಗಳು ಇಳಿಮುಖವಾಗಲು ಕಾರಣ

ಹಿರಿಯ ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ನಿಯಮ ಉಲ್ಲಂಘಿಸುವವರನ್ನು ಪತ್ತೆಹಚ್ಚಲು AI ಆಧಾರಿತ ಕ್ಯಾಮೆರಾಗಳ ಅಳವಡಿಕೆ ಮತ್ತು ಪೊಲೀಸರು ನಡೆಸಿದ ವಿಶೇಷ ಜಾಗೃತಿ ಹಾಗೂ ತಪಾಸಣಾ ಆಂದೋಲನಗಳು ಈ ಇಳಿಕೆಗೆ ಪ್ರಮುಖ ಕಾರಣವಾಗಿವೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ರಾತ್ರಿ ವೇಳೆಯ ಸವಾಲುಗಳು ಮತ್ತು ಹಾಟ್‌ಸ್ಪಾಟ್‌ಗಳು

ತಡರಾತ್ರಿ 10 ಗಂಟೆಯಿಂದ ಮುಂಜಾನೆ 2 ಗಂಟೆಯ ಅವಧಿಯಲ್ಲಿ ರಸ್ತೆ ನಿಯಮ ಉಲ್ಲಂಘನೆಗಳು ಹೆಚ್ಚಾಗಿ ಕಂಡುಬರುತ್ತವೆ. ಈ ಸಮಯದಲ್ಲಿ ಸಿಸಿಟಿವಿ ಅಥವಾ ಪೊಲೀಸರ ಕಣ್ಗಾವಲು ಕಡಿಮೆ ಇರುತ್ತದೆ ಎಂದು ಭಾವಿಸಿ ಸವಾರರು ನಿಯಮ ಉಲ್ಲಂಘಿಸುತ್ತಾರೆ. ಅಲ್ಲದೆ, ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಸಂಖ್ಯೆಯೂ ಈ ವೇಳೆ ಹೆಚ್ಚಿರುತ್ತದೆ.

ಬಿಟಿಎಂ ಲೇಔಟ್, ಎಚ್‌ಎಸ್ಆರ್ ಲೇಔಟ್ ಮತ್ತು ಕೋರಮಂಗಲಗಳಂತರ ಏರಿಯಾಗಳಲ್ಲೇ ರಸ್ತೆ ನಿಯಮ ಉಲ್ಲಂಘನೆಯ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಇಂದಿರಾನಗರ ಮತ್ತು ಎಂ.ಜಿ. ರಸ್ತೆಗಳೂ ಸಹ ಹಾಟ್​ಸ್ಪಾಟ್​ಗಳಾಗಿವೆ. ಹೆಚ್ಚಿನ ಕಾಲೇಜುಗಳು, ಪೇಯಿಂಗ್ ಗೆಸ್ಟ್ (PG) ವಸತಿಗಳು ಮತ್ತು ಪಬ್‌ಗಳಿರುವ ಪ್ರದೇಶಗಳಲ್ಲಿ 18 ರಿಂದ 35 ವರ್ಷದೊಳಗಿನ ಯುವಕರು ಹೆಚ್ಚಾಗಿ ನಿಯಮ ಉಲ್ಲಂಘಿಸುತ್ತಿರುವುದು ಕಂಡುಬಂದಿದೆ.

ಇತ್ತೀಚಿನ ಘಟನೆಗಳು

ಆರ್‌ಸಿಬಿ (RCB) ಐಪಿಎಲ್ ಪಂದ್ಯ ಗೆದ್ದ ಸಂಭ್ರಮಾಚರಣೆಯ ವೇಳೆ ರಾತ್ರೋರಾತ್ರಿ ವೀಲಿಂಗ್ ಮತ್ತು ತ್ರಿಬಲ್ ರೈಡಿಂಗ್ ಮಾಡಿದ ಆರೋಪದ ಮೇಲೆ ಪೊಲೀಸರು 75 ವಾಹನಗಳನ್ನು ವಶಪಡಿಸಿಕೊಂಡಿದ್ದರು.
ಇತ್ತೀಚೆಗೆ ಬಿಟಿಎಂ ಲೇಔಟ್‌ನಲ್ಲಿ ಮೂವರು ಸ್ಕೂಟರ್ ಮೇಲೆ ತ್ರಿಬಲ್ ರೈಡಿಂಗ್ ಮಾಡುತ್ತಾ, ಒಬ್ಬಾತ ಬಿಯರ್ ಬಾಟಲಿ ಹಿಡಿದು ಇಂಡಿಕೇಟರ್ ರೀತಿ ಕೈ ಸನ್ನೆಯ ಚೇಷ್ಟೆ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣವಾದ ‘X’ ನಲ್ಲಿ ವೈರಲ್ ಆಗಿ ತೀವ್ರ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು.

ಮನಶ್ಶಾಸ್ತ್ರಜ್ಞರ ವಿಶ್ಲೇಷಣೆ

ನಗರದ ಮನಶ್ಶಾಸ್ತ್ರಜ್ಞೆ ಮತ್ತು ಕೌನ್ಸಿಲರ್ ಸುಗುಣಾ ಎಂ. ಅವರ ಪ್ರಕಾರ, ಇಂತಹ ಯುವಕರು ಸುರಕ್ಷತೆಯ ಭ್ರಮೆಯಲ್ಲಿರುತ್ತಾರೆ. ಅಪಘಾತಗಳು ಕೇವಲ ಇತರರಿಗೆ ಸಂಭವಿಸುತ್ತವೆ, ತಮಗೆ ಏನೂ ಆಗುವುದಿಲ್ಲ ಎಂಬ ಅತಿಯಾದ ಆತ್ಮವಿಶ್ವಾಸ ಅವರಲ್ಲಿರುತ್ತದೆ. ಪರೀಕ್ಷೆಗಳಲ್ಲಿ ಉತ್ತೀರ್ಣರಾದಾಗ ಅಥವಾ ಕ್ರಿಕೆಟ್ ಪಂದ್ಯ ಗೆದ್ದಾಗ ಉಂಟಾಗುವ ತಕ್ಷಣದ ಸಂತೋಷದ ಭರದಲ್ಲಿ ಅವರ ಮಿದುಳಿನ ಭಾವನಾತ್ಮಕ ಭಾಗವು ನಿಯಂತ್ರಣವನ್ನು ತೆಗೆದುಕೊಳ್ಳುತ್ತದೆ. ಗುಂಪಿನಲ್ಲಿದ್ದಾಗ ವೈಯಕ್ತಿಕ ಜವಾಬ್ದಾರಿಯನ್ನು ಮರೆತು, ಸ್ನೇಹಿತರ ಮುಂದೆ ಹೀರೋಗಿರಿ ಪ್ರದರ್ಶಿಸಲು ಹೋಗಿ ಮೂವರ ಜೀವವನ್ನು ಅಪಾಯಕ್ಕೆ ತಳ್ಳುತ್ತಾರೆ ಎಂದು ಅವರು ವಿವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:54 pm, Wed, 10 June 26

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Follow Us