ಮುಸ್ಲಿಂ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಮತ್ತೆರಡು FIR ದಾಖಲು
ಮಂಡ್ಯ ಜಿಲ್ಲೆಯ ಶ್ರೀಗಂಗಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆಯು ಆಯೋಜಿಸಿದ್ದ ಸಂಕೀರ್ತನಾ ಯಾತ್ರೆಯಲ್ಲಿ ಮಾತನಾಡಿದ್ದ ಪ್ರಭಾಕರ್ ಭಟ್ ಮುಸ್ಲಿಂ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಸಂಬಂಧಿಸಿ ಈಗ ಬೆಂಗಳೂರಿನ ಡಿ.ಜೆ. ಹಳ್ಳಿ ಮತ್ತು ಶೇಷಾದ್ರಿಪುರಂ ಠಾಣೆ ಸೇರಿ 2 ಠಾಣೆಗಳಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.
ಬೆಂಗಳೂರು, ಡಿ.30: ಮಂಡ್ಯದಲ್ಲಿ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ (Kalladka Prabhakar Bhat) ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಮತ್ತೆ ಎರಡು ಕಡೆ ಎಫ್ಐಆರ್ (FIR) ದಾಖಲಾಗಿದೆ. ರಹೀಬ್ ವುಲ್ಲಾ ಹಾಗೂ ಉಸ್ಮಾನ್ ಎಂಬುವವರು ಬೆಂಗಳೂರಿನ ಡಿ.ಜೆ. ಹಳ್ಳಿ ಮತ್ತು ಶೇಷಾದ್ರಿಪುರಂ ಠಾಣೆ ಸೇರಿ 2 ಠಾಣೆಗಳಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದು ದೂರಿನ ಮೇರೆಗೆ ಎನ್ಸಿಆರ್ ದಾಖಲಿಸಲಾಗಿದೆ.
ಡಿಸೆಂಬರ್ 24ರಂದು ಹನುಮ ಜಯಂತಿ ಕಾರ್ಯಕ್ರಮದ ಅಂಗವಾಗಿ ಮಂಡ್ಯ ಜಿಲ್ಲೆಯ ಶ್ರೀಗಂಗಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆಯು ಆಯೋಜಿಸಿದ್ದ ಸಂಕೀರ್ತನಾ ಯಾತ್ರೆಯಲ್ಲಿ ಮಾತನಾಡಿದ್ದ ಪ್ರಭಾಕರ್ ಭಟ್, ಮುಸ್ಲಿಂ ಮಹಿಳೆಯರಿಗೆ ದಿನಕ್ಕೊಂದು ಗಂಡ, ಪರ್ಮನೆಂಟ್ ಗಂಡನೇ ಇರಲಿಲ್ಲ. ಆದರೆ ತ್ರಿವಳಿ ತಲಾಕ್ ನಿಷೇಧದ ಮೂಲಕ ಪರ್ಮನೆಂಟ್ ಗಂಡನನ್ನು ಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಶ್ರೀರಂಗ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಲ್ಲಡ್ಕ ಪ್ರಭಾಕರ್ ಭಟ್, ಈಗಾಗಲೇ ಹೈ ಕೋರ್ಟ್ ನಿಂದ ತಡೆಯಾಜ್ಞೆ ಪಡೆದಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಮಹಿಳೆಯರ ವಿರುದ್ದ ಅವಹೇಳನಕಾರಿ ಹೇಳಿಕೆ: ಕಲ್ಲಡ್ಕ ಪ್ರಭಾಕರ ಭಟ್ ಬಂಧನಕ್ಕೆ ವಿವಿಧ ಸಂಘಟನೆಗಳ ಆಗ್ರಹ
ಆರ್ಎಸ್ಎಸ್ ಮುಖಂಡ ಕಲ್ಲಡ್ಕ್ ಪ್ರಭಾಕರ್ ಭಟ್ ವಿವಾದಾತ್ಮಕ ಹೇಳಿಕೆ ಬಳಿಕ ಕಲ್ಲಡ್ಕ್ ಪ್ರಭಾಕರ್ ಭಟ್ ಬಂಧಿಸುವಂತೆ ಆಗ್ರಹಿಸಿ ವಿವಿಧ ಮಹಿಳಾ ಸಂಘಟನೆ ಕಾರ್ಯಕರ್ತರು ಪ್ರತಿಭಟನೆಗಳನ್ನು ನಡೆಸಿದ್ದಾರೆ. ಇನ್ನು ವುಮೆನ್ ಇಂಡಿಯಾ ಮೂಮೆಂಟ್ ಸಂಘಟನೆಯ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮ ಅವರು RSSನಲ್ಲಿರುವ ಈ ರೀತಿಯ ವಿಷ ಜಂತುಗಳು ಹೇಳಿಕೆ ನೀಡುವುದು ಹೊಸದಲ್ಲ, ಅವರ ಮೇಲೆ ಎಫ್.ಐ.ಆರ್ ಆದ್ರೂ ಇನ್ನು ಸಹ ಬಂಧನ ಆಗಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಸಹ ನಿಷ್ಕ್ರಿಯತೆ ತೋರಿಸುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದರು. ಮುಸ್ಲಿಂ ಓಟು ಪಡೆದು ಬಂದ ಕಾಂಗ್ರೆಸ್ ಸರ್ಕಾರ ಮೌನವಾಗಿದೆ. ಸರ್ಕಾರ ಮಹಿಳೆಯರಿಗೆ ಬಿಟ್ಟಿ ಭಾಗ್ಯ ನೀಡಿ ಮಂಗ ಮಾಡಿದೆ. ಇಲ್ಲಿ ಮಹಿಳೆಯರಿಗೆ ಯಾವುದೇ ಸುರಕ್ಷತೆ ಇಲ್ಲ. ತಕ್ಷಣ ಕಲ್ಲಡ್ಕ ಭಟ್ನನ್ನು ಬಂಧಿಸಬೇಕು. ಮುಂದೆ ಈ ರೀತಿಯ ವಿಷ ಜಂತುಗಳು ಬಾಯಿ ತೆರೆಯದಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ