ಬೆಂಗಳೂರಿನಲ್ಲಿ ಅಮಿತ್ ಶಾ: ಸ್ಮಾರ್ಟ್ ಪೊಲೀಸ್ E BEATಗೆ ಚಾಲನೆ, ನೃಪತುಂಗ ವಿವಿ ಉದ್ಘಾಟನೆ
ಸ್ಮಾರ್ಟ್ ಪೊಲೀಸ್ E BEATಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಚಾಲನೆ ನೀಡಿದರು. ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ನೂತನ ಯೋಜನೆಗೆ ಚಾಲನೆ ನೀಡಿ, ಕರ್ನಾಟಕ ಸರ್ಕಾರದ ಮಹತ್ವದ ಪ್ರಯತ್ನವನ್ನು ಶ್ಲಾಘಿಸಿದರು.
ಬೆಂಗಳೂರು: ಸ್ಮಾರ್ಟ್ ಪೊಲೀಸ್ E BEATಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಚಾಲನೆ ನೀಡಿದರು. ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ನೂತನ ಯೋಜನೆಗೆ ಚಾಲನೆ ನೀಡಿ, ಕರ್ನಾಟಕ ಸರ್ಕಾರದ ಮಹತ್ವದ ಪ್ರಯತ್ನವನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಜನರ ಮಾನ ಪ್ರಾಣ ರಕ್ಷಿಸುವುದು ಪೊಲೀಸ್ ಇಲಾಖೆಯ ಸವಾಲಿನ ಕೆಲಸ. ಅಪರಾಧಗಳ ತಡೆಗೆ ಸ್ಮಾರ್ಟ್ ಪೊಲೀಸ್ E BEAT ನೆರವು ಪಡೆದುಕೊಳ್ಳಬೇಕಿದೆ. ಅಪರಾಧ ಪ್ರಕರಣಗಳ ಶೀಘ್ರ ಪತ್ತೆಗೆ ವಿಧಿ ವಿಜ್ಞಾನ ಪ್ರಯೋಗಾಲಯದಿಂದ (FSL) ನೆರವು ಪಡೆದುಕೊಳ್ಳಬೇಕಿದೆ. ರಾಜ್ಯದಲ್ಲಿ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ದಾವಣಗೆರೆ, ಬಳ್ಳಾರಿ ಸೇರಿದಂತೆ 7 ಕಡೆ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪನೆಯಾಗಿದೆ ಎಂದು ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಲೋಕಪ್ರಿಯ ಮುಖ್ಯಮಂತ್ರಿ ಎಂದು ಕರೆದರು. ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷ. ಈ ವರ್ಷದಲ್ಲಿ ವಿಶ್ವವಿದ್ಯಾಲಯ ಉದ್ಘಾಟನೆ ಆಗಿರುವುದು ಸಂತಸದ ವಿಚಾರ. ದೇಶವನ್ನು ಸರ್ವೊತ್ತಮ ಸ್ಥಾನದಲ್ಲಿ ಇರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಸಂಕಲ್ಪ ಮಾಡಿದ್ದಾರೆ. ವೈದ್ಯಕೀಯ ಕಾಲೇಜು, ಕೇಂದ್ರೀಯ ವಿಶ್ವವಿದ್ಯಾಲಯ, ಐಐಟಿಗಳನ್ನು ಬಿಜೆಪಿ ನೇತೃತ್ವದ ಮೋದಿ ಸರ್ಕಾರ ದೇಶದಲ್ಲಿ ಹೊಸದಾಗಿ ಸ್ಥಾಪನೆ ಮಾಡಿದೆ.
2014ಕ್ಕೂ ಮೊದಲು ಉಗ್ರಗಾಮಿಗಳ ಮಾತಿಗೆ ಸರ್ಕಾರಗಳು ಸಮರ್ಪಕ ಉತ್ತರ ಕೊಡುತ್ತಿರಲಿಲ್ಲ. ಆದರೆ ಮೋದಿ ಅಧಿಕಾರಕ್ಕೆ ಬಂದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮೂಲಕ ಮಾಡಿ ಪಾಕಿಸ್ತಾನಕ್ಕೆ ಪಾಠ ಕಲಿಸಲು ಮುಂದಾದರು. ಭಾರತವನ್ನು ಕೈಗಾರಿಕೆ ಹಬ್ ಮಾಡಲು ಮೋದಿ ಶ್ರಮಿಸುತ್ತಿದ್ದಾರೆ. ಉದ್ಯೋಗ ಸೃಜನಗೆ ಕ್ರಮವಹಿಸಿದ್ದಾರೆ. ಗಡಿವಿವಾದಗಳನ್ನು ಪರಿಹರಿಸಲು ಭಾರತ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. 370ನೇ ವಿಧಿ ರದ್ದುಪಡಿಸಿದ್ದು, CAA ಜಾರಿಯಂಥ ಮಹತ್ವದ ನಿರ್ಧಾರಗಳನ್ನು ಮೋದಿ ಸರ್ಕಾರ ತೆಗೆದುಕೊಂಡಿದೆ ಎಂದು ಹೇಳಿದರು.
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವ ಮೂಲಕ ಕಾಶ್ಮೀರವನ್ನು ದೇಶದ ಜತೆ ಸೇರಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದರು. ಹಲವು ಜನಪರ ಕಾರ್ಯಕ್ರಮಗಳ ಮೂಲಕ ಪ್ರಧಾನಿ ಜನರ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದಾರೆ. ಇ ಬೀಟ್ ಮೂಲಕ ಪೊಲೀಸರ ಕಾರ್ಯ ಮತ್ತಷ್ಟು ಜನರಿಗೆ ಬಹು ಬೇಗ ತಲುಪಲು ಸಾಧ್ಯವಿದೆ ಎಂದು ಅಮಿತ್ ಶಾ ಅಭಿಪ್ರಾಯಪಟ್ಟರು.
ಮಾಧ್ಯಮಗಳ ಕ್ಯಾಮೆರಾಮೆನ್ಗಳು ಕ್ಯಾಮೆರಾ ಸೆಟ್ ಮಾಡಿ ಕುಳಿತುಕೊಳ್ಳಿ. ಇಂದು ನಾನು ವಿದ್ಯಾರ್ಥಿಗಳ ಜತೆಗೆ ಮಾತನಾಡಬೇಕು. ಇವತ್ತು ಅಕ್ಷಯ ತೃತೀಯದ ದಿನದ ಪವಿತ್ರ ದಿನ. ದೇಶದಲ್ಲಿ ಕೃಷಿಕರು ಹಸುವಿನ ಪೂಜೆ ನೆರವೇರಿಸಿ ವರ್ಷವನ್ನು ಆರಂಭಿಸುತ್ತಾರೆ. ಇವತ್ತು ಬಸವಣ್ಣನವರ ಜಯಂತಿ ಕೂಡ ಇದೆ. ಲೋಕತಂತ್ರದ ಸ್ಪಷ್ಟ ಉದಾಹರಣೆಯನ್ನು ಅನುಭವ ಮಂಟಪದ ಮೂಲಕ ಬಸವಣ್ಣ ಬೋಧಿಸಿದ್ದಾರೆ. ಯುವಜನರು ಬಸವಣ್ಣನವರ ವಚನಗಳನ್ನು ಓದಬೇಕು, ಜೀವನದಲ್ಲಿ ಯಾವ ಸಮಸ್ಯೆ ಕೂಡ ಬರೋದಿಲ್ಲ. ಇದು ಅತ್ಯಂತ ಗೌರವದ ದಿನ ಎಂದು ಹೇಳಿದರು.
ನನ್ನ ಮುಂದೆ ಕರ್ನಾಟಕ, ದೇಶದ ಭವಿಷ್ಯ ಕೂತಿದೆ. ಯುವಕರು ದೇಶದ ಭವಿಷ್ಯ. ಮೊದಲು ಇದು ಸರ್ಕಾರಿ ವಿಜ್ಞಾನ ಕಾಲೇಜು ಆಗಿತ್ತು. ಕಳೆದ 100 ವರ್ಷಗಳಿಂದ ಇಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇದೀಗ ನೃಪತುಂಗ ವಿವಿಯಾಗಿ ಅಧಿಕೃತ ಉದ್ಘಾಟನೆ ಆಗಿದೆ. ರಾಷ್ಟ್ರಕೂಟದ ಪ್ರಸಿದ್ಧ ರಾಜನಾದ ನೃಪತುಂಗನ ಹೆಸರನ್ನು ವಿವಿಗೆ ಇಟ್ಟಿರುವುದು ಹರ್ಷ ತಂದಿದೆ. ದೇಶಕ್ಕೆ ಸ್ವತಂತ್ರ ಸಿಕ್ಕಿದೆ. ಪ್ರತಿ ಹಂತದಲ್ಲಿಯೂ ಹಲವರು ದೇಶದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ವಿವರಿಸಿದರು.
ಪ್ರಧಾನಿಗಳು ಮೂರು ವಿಚಾರಗಳಿಗೆ ಮಹತ್ವ ಕೊಡುತ್ತಾರೆ. ಸೈನಿಕರಿಗೆ ವಿಶೇಷ ಗೌರವ ಕೊಡುತ್ತಿದ್ದಾರೆ. ಸಂಕಲ್ಪ ಮಾಡುವುದು ಜೀವನದಲ್ಲಿ ಬಹಳ ಮುಖ್ಯ. ಚಿಕ್ಕ ಚಿಕ್ಕ ಸಂಕಲ್ಪ ಕೂಡ ದೇಶದ ಅಭಿವೃದ್ಧಿಗೆ ನೆರವಾಗುತ್ತವೆ. ತೆರಿಗೆ ವಂಚಿಸುವುದಿಲ್ಲ. ಸಂಚಾರ ನಿಯಮ ಉಲ್ಲಂಘಿಸುವುದಿಲ್ಲ ಎಂದು ಎಲ್ಲರೂ ಸಂಕಲ್ಪ ಮಾಡಬೇಕು. ಹೊಸ ಶಿಕ್ಷಣ ನೀತಿಯನ್ನು (New Education Policy -NEP) ಸ್ವೀಕರಿಸಿದ ಮೊದಲ ರಾಜ್ಯ ಕರ್ನಾಟಕ. ಇದು ಅತ್ಯಂತ ಸಂತಸದ ವಿಚಾರ. NEP ನೀತಿ ಮೂಲಕ ದೇಶವನ್ನು ಸೂಪರ್ ನಾಲೆಡ್ಜ್ ದೇಶವನ್ನಾಗಿ ಮಾಡಲು ಪ್ರಧಾನಿಗಳು ಪಣ ತೊಟ್ಟಿದ್ದಾರೆ. ಮೋದಿ ಸರ್ಕಾರ ಉನ್ನತ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿದೆ. ನಮ್ಮ ಸರ್ಕಾರವು ದೇಶದಲ್ಲಿ 370ಕ್ಕೂ ಹೆಚ್ಚು ವಿವಿಗಳನ್ನು ಸ್ಥಾಪಿಸಿದೆ ಎಂದರು.
ಕೇಂದ್ರ ಗೃಹ ಸಚಿವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರೇಸ್ಕೋರ್ಸ್ ರಸ್ತೆಯಲ್ಲಿ ರೇಸ್ ಕೋರ್ಸ್ ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರು ಒಂದು ಬದಿ ಸಂಚಾರ ಬಂದ್ ಮಾಡಿಸಿದ್ದರು ಇದರಿಂದ ವಾಹನ ಸವಾರರು ಮತ್ತು ಟ್ರಾಫಿಕ್ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಕೇವಲ ಶಾಸಕರು ಮತ್ತು ಮಂತ್ರಿಗಳನ್ನು ಮಾತ್ರವೇ ಒಳಗೆ ಬಿಡುತ್ತಿದ್ದಾರೆ ಎಂದು ವಾಹನ ಸವಾರರ ಆಕ್ಷೇಪಿಸಿದರು.
ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ – ಬೆಂಗಳೂರು, ಕರ್ನಾಟಕ https://t.co/l8Opz35dS8
— Amit Shah (@AmitShah) May 3, 2022
ನೃಪತುಂಗ ವಿವಿ ಉದ್ಘಾಟನೆ
ನೃಪತುಂಗ ವಿಶ್ವವಿದ್ಯಾಲಯದ ವಿಧ್ಯುಕ್ತ ಉದ್ಘಾಟನೆ ಸಮಾರಂಭವೂ ಮಂಗಳವಾರವೇ ನೆರವೇರಿತು. ಉನ್ನತ ಶಿಕ್ಷಣ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಸೇರಿ ಹಲವು ಗಣ್ಯರು ಪಾಲ್ಗೊಂಡಿದ್ದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಷ್ಟ್ರಕೂಟ ದೊರೆ ಅಮೋಘವರ್ಷ ನೃಪತುಂಗನಿಗೂ ವಿಶೇಷ ಗೌರವ ಸಲ್ಲಿಸಲಾಯಿತು. ಬಸವಣ್ಣ, ಸರಸ್ವತಿದೇವಿ ಫೋಟೊಗಳ ಜೊತೆಗೆ ಅಮೋಘವರ್ಷ ನೃಪತುಂಗ ಫೋಟೊಗೂ ಗೌರವ ಸಮರ್ಪಿಸಲಾಯಿತು.
ಇದನ್ನೂ ಓದಿ: ಅಮಿತ್ ಶಾ ಸಮ್ಮುಖದಲ್ಲಿ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದ ಬಸವರಾಜ ಹೊರಟ್ಟಿ
ಇದನ್ನೂ ಓದಿ: ವಿಧಾನಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ: ಇಂದು ಬೆಂಗಳೂರಿನಲ್ಲಿ ಅಮಿತ್ ಶಾ ಮಹತ್ವದ ಸಭೆ
Published On - 11:57 am, Tue, 3 May 22